ವಿಜಯಪುರ: ಜಗತ್ತಿನಲ್ಲಿ ಯಾವ ವ್ಯಕ್ತಿಯೂ ಅಯೋಗ್ಯನಾಗಿಲ್ಲ. ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಆದರೆ ಅಂಥ ಪ್ರತಿಭೆಗಳನ್ನು ಸೂಕ್ತ ಸಮಯದಲ್ಲಿ ಗುರುತಿಸಿ ಅರಳಲು ಅವಕಾಶ ಕಲ್ಪಿಸಿದಲ್ಲಿ ಸಾಧನೆಗೆ ಸಹಕಾರಿ ಆಗಲಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ| ವಿ.ಬಿ. ಗ್ರಾಮಪುರೋಹಿತ ಅಭಿಪ್ರಾಯಪಟ್ಟರು.
ನಗರದ ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದ ವಾಣಿಜ್ಯ ವಿಭಾಗ ಹಮ್ಮಿಕೊಂಡಿದ್ದ ದ್ರೋಣ-2019 ನಿರ್ವಹಣಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸಕ್ತ ಸಂದರ್ಭದಲ್ಲಿ ಬದುಕಿನ ದೃಷ್ಟಿಕೋನ ಬದಲಾಗಿದೆ. ಇದನ್ನೇ ಕಾಲ ಬದಲಾಗಿದೆ ಎಂದು ವಿಶ್ಲೇಷಲಾಗುತ್ತದೆ. ಬದಲಾದ ಕಾಲಕ್ಕೆ ತಕ್ಕಂತೆ ನಮ್ಮ ಜೀವನ ಕ್ರಮವೂ ಬದಲಾಗಬೇಕಿದೆ. ಹೀಗಾಗಿ ಆಧುನಿಕ ಯುಗ ಬಯಸುವಂತ ಜೀವನ ನಿರ್ವಹಣಾ ತಂತ್ರಗಳನ್ನು ನಾವು ಕೂಡ ಮೈಗೂಡಿಸಿಕೊಳ್ಳಬೇಕಿದೆ. ಇಂಥ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪ್ರಪಂಚಕ್ಕೆ ತಮ್ಮನ್ನು ಹೊಂದಿಸಿಕೊಂಡು ಸಾಧನೆಯ ಹಾದಿ ತುಳಿಯಬೇಕು ಎಂದು ಸಲಹೆ ನೀಡಿದರು.
ಬದಲಾವಣೆಗೆ ಸದಾ ತೆರದುಕೊಳ್ಳುವ ಮನಸ್ಥಿತಿ ನಮ್ಮದಾಗಿರಬೇಕು. ನಮ್ಮ ನಡುವಳಿಕೆ ನಮ್ಮತನವನ್ನು ಎತ್ತಿ ತೋರಿಸುತ್ತದೆ. ಹೀಗಾಗಿ ಧನಾತ್ಮಕ ವ್ಯಕ್ತಿತ್ವ ಇದ್ದಲ್ಲಿ ಅವರಿಗಾಗಿ ಉತ್ತಮ ಭವಿಷ್ಯ ಕಾದಿರುತ್ತದೆ. ವಿದ್ಯಾರ್ಥಿಗಳು ಇದನ್ನು ಅರ್ಥೈಸಿಕೊಂಡು ಸ್ವಯಂ ಪರಿವರ್ತನೆಗೆ ತಮ್ಮನ್ನು ತೊಪಗಿಸಿಕೊಳ್ಳಬೇಕು. ಪ್ರಸಕ್ತ ಸಂದರ್ಭದಲ್ಲಿ ಯಾವುದೇ ಕಂಪನಿಗಳು ಪಠ್ಯ-ಪುಸ್ತಕದಲ್ಲಿ ಹುದುಗಿರುವ ವಿಚಾರಗಳನ್ನು ಕೇಳುವುದಿಲ್ಲ. ಬದಲಿಗೆ ನಮ್ಮಲ್ಲಿರುವ ಪ್ರತಿಭೆ ಮತ್ತು ನಮಲ್ಲಿನ ಕೌಶಲಗಳನ್ನು ಅಪೇಕ್ಷಿಸುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಹೊಸತನಕ್ಕೆ ನಿರಂತರ ಹೊಂದಿಕೊಳ್ಳುವ ಜೊತೆಗೆ ಆತ್ಮವಿಶ್ವಾಸದಿಂದ ಸದೃಢ ನಿರ್ಧಾರ ಕೈಗೊಳ್ಳಬೇಕು. ಆ ಮೂಲಕ ನಿಮ್ಮ ಭವಿಷ್ಯವನ್ನು ನೀವೆ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಜಿ.ಎಚ್. ಮಣ್ಣೂರ, ದ್ರೋಣ-2019 ಕಾರ್ಯಕ್ರಮ ಪ್ರತಿಭೆಗಳ ಅನಾವರಣಕ್ಕೆ ರೂಪುಗೊಂಡಿರುವ ಸಣ್ಣ ವೇದಿಕೆ. ಇದರಲ್ಲಿ ಎದ್ದು ನಿಂತು ಮುನ್ನಡಿ ಇಟ್ಟರೆ ಭವಿಷ್ಯದಲ್ಲಿ ದೊಡ್ಡ ಮಟ್ಟದ ವೇದಿಕೆಗಳ ನಿಮ್ಮದಾಗಲಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅಕ್ಷರ ಜ್ಞಾನದ ಹಸಿವು ನೀಗಿಕೊಳ್ಳುವ ಜೊತೆಗೆ ಪಠ್ಯೇತರ ಚಟುವಟಿಕೆ ಹಾಗೂ ಪೂರಕ ಚಟುವಟಿಕೆಗಳಲ್ಲೂ ನಿಮ್ಮನ್ನು ತೊಡಗಿಸಿಕೊಳ್ಳಬೇಕು. ಇದು ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗಲಿದೆ ಎಂದರು.
ಎಂ.ಎಸ್. ದೊಡ್ಡಮನಿ, ಐ.ಬಿ. ಜಾಬಾ, ಎಸ್.ಬಿ. ಕುಂಬಾರ ಮಾತನಾಡಿದರು. ಚೈತನ್ಯ ಮುತ್ತಗೀಕರ ಸ್ವಾಗತಿಸಿದರು. ಗೀತಾಂಜನಲಿ ಬೋಂದರ್ಡೆ ನಿರೂಪಿಸಿದರು.