Advertisement
ಮೈಕ್ರೋಸಾಫ್ಟ್ ಹಾಗೂ ಟೆಕ್ ಅವಾಂತ್ ಗಾರ್ಡ್ ಸಂಸ್ಥೆಗಳು ಬಿಬಿಎಂಪಿ ರೋಶಿನಿ ಹೆಸರಿನಡಿ ಪಾಲಿಕೆಯ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದು, ಅದರ ಭಾಗವಾಗಿ “ಕಲಿಕೆಗೆ ಮಿತಿಯಿಲ್ಲ’ ಎಂಬ ಘೋಷವಾಕ್ಯದಡಿ ಡಿಡಿ ರೋಶಿನಿ ವಾಹಿನಿ ಜಾರಿಗೊಳಿಸಲಾಗಿದೆ. ಅದರಂತೆ ಪಾಲಿಕೆಯ 156 ಶಾಲಾ-ಕಾಲೇಜು ವಿದ್ಯಾರ್ಥಿ ಗಳಿಗೆ ಸ್ಯಾಟಲೈಟ್ ಶಿಕ್ಷಣ ದೊರೆಯಲಿದ್ದು, ಮಕ್ಕಳು ಮನೆಯಲ್ಲಿ ಕುಳಿತೇ ಶಾಲೆಯಲ್ಲಿ ನಡೆಯುವ ಪಾಠ, ಪರೀಕ್ಷೆ ಸಿದ್ಧತೆಗಳ ಕುರಿತು ಮಾಹಿತಿ ಪಡೆಯಬಹುದಾಗಿದೆ.
Related Articles
Advertisement
ವಿದೇಶಗಳಿಂದಲೂ ಪಾಠ: ಬಿಬಿಎಂಪಿ ಶಾಲಾ- ಕಾಲೇಜು ಗಳಲ್ಲಿನ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶ ದಿಂದ ಬಿಬಿಎಂಪಿ ಶಿಕ್ಷಕರೊಂದಿಗೆ, ವಿದೇಶಗಳ ನುರಿತ ಶಿಕ್ಷಕರಿಂದಲೂ ವಾಹಿನಿ ಮೂಲಕ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತದೆ. ಪಾಲಿಕೆಯ ಶಾಲೆಗಳಲ್ಲಿ ಅಳವಡಿಸುವಂತಹ 64 ಇಂಚಿನ ಸ್ಮಾರ್ಟ್ ಟಿವಿ ಯಲ್ಲಿ ಈ ಎಲ್ಲ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ.
ಉಪಾಹಾರವಿಲ್ಲದೆ ಬಳಲಿದ ವಿದ್ಯಾರ್ಥಿಗಳು ಡಿಡಿ ರೋಶಿನಿ ವಾಹಿನಿ ಚಾಲನೆ ಕಾರ್ಯಕ್ರಮಕ್ಕೆ ನಗರದ ವಿವಿಧ ಶಾಲೆಗಳಿಂದ ಕರೆತರಲಾಗಿದ್ದ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 12 ಗಂಟೆಯಾದರೂ ಬೆಳಗಿನ ಉಪಾಹಾರ ಕೊಡಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಸುಸ್ತಾಗಿದ್ದರು. ಬೆಳಗಿನ ತಿಂಡಿಯನ್ನು ಕಾರ್ಯಕ್ರಮದಲ್ಲಿ ನೀಡುವುದಾಗಿ ಹೇಳಿ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆತರಲಾಗಿತ್ತು. ನಿಗದಿಯಂತೆ ಕಾರ್ಯಕ್ರಮ 10 ಗಂಟೆಗೆ ಆರಂಭವಾಗಬೇಕಿತ್ತು. ಆದರೆ, ಮುಖ್ಯಮಂತ್ರಿಗಳು ಒಂದು ಗಂಟೆ ತಡವಾಗಿ ಬಂದ ಕಾರಣ ವಿದ್ಯಾರ್ಥಿಗಳು ಮಧ್ಯಾಹ್ನ 12 ಗಂಟೆಗೆ ಬೆಳಗಿನ ತಿಂಡಿ ಸೇವಿಸಿದರು.
ರಾಜ್ಯಾದ್ಯಂತ ಸೌಲಭ್ಯ ಜಾರಿಗೆ ಚಿಂತನೆ ಪಾಲಿಕೆಯ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಈಗ ದೊರೆಯುತ್ತಿರುವ ಸೌಲಭ್ಯಗಳು ರಾಜ್ಯದ ಎಲ್ಲ ಬಡ ಮಕ್ಕಳಿಗೂ ದೊರೆಯಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಡಿಡಿ ರೋಶಿನಿ ವಾಹಿನಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪಾಲಿಕೆ ಶಾಲೆಗಳ ಮಕ್ಕಳಿಗೆ ಅತ್ಯುತ್ತಮ ಸೌಲಭ್ಯಗಳು ದೊರೆಯುತ್ತಿವೆ. ಇದೇ ಮಾದರಿಯ ಸೌಲಭ್ಯಗಳು ರಾಜ್ಯದ ಉಳಿದ ಭಾಗಗಳ ಮಕ್ಕಳಿಗೂ ಸಿಕ್ಕರೆ, ಅವರೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಹೀಗಾಗಿ ರಾಜ್ಯಾ ದ್ಯಂತ ಇಂತಹ ಯೊಜನೆಗಳನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳು ಬುದ್ಧಿವಂತರಾಗಿದ್ದಾರೆ. ಆದರೆ, ಅವರಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಜತೆಗೆ ಸರ್ಕಾರಿ ಶಾಲೆ ಮಕ್ಕಳು ಉತ್ತಮ ಜೀವನ ರೂಪಿಸಿಕೊಳ್ಳಲು ಅಗತ್ಯ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿಲ್ಲ ಎಂಬ ಆರೋಪಗಳಿವೆ. ಅವೆಲ್ಲವುಗಳಿಗೆ ಶೀಘ್ರವೇ ಪರಿಹಾರ ದೊರೆಯಲಿದೆ ಎಂದು ಭರವಸೆ ನೀಡಿದರು. ಬಿಬಿಎಂಪಿ ಶಾಲೆ, ಕಾಲೇಜು ಮಕ್ಕಳಿಗೆ 21ನೇ ಶತಮಾನದ ಶಿಕ್ಷಣ ನೀಡಲು ಮುಂದಾಗಿರುವ ಮೈಕ್ರೋಸಾಫ್ಟ್ ಸಂಸ್ಥೆ ರಾಜ್ಯಾದ್ಯಂತ ಎಲ್ಲ ಸರ್ಕಾರಿ ಶಾಲೆಗಳಿಗೂ ಯೋಜನೆಯನ್ನು ವಿಸ್ತರಿಸಿದರೆ, ರಾಜ್ಯದ ಎಲ್ಲ ಬಡ ಮಕ್ಕಳೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದೆಹಲಿ ದೂರದರ್ಶನ ಕೇಂದ್ರದ ಮಹಾನಿರ್ದೇಶಕಿ ಸುಪ್ರಿಯಾ ಸಾಹು, ಟೆಕ್ ಅವಂತ್ ಗಾರ್ಡ್ ಮುಖ್ಯಸ್ಥ ಅಲಿ ಸೇಠ್…, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಸೇರಿ ಪ್ರಮುಖರು ಹಾಜರಿದ್ದರು.