ಹುಬ್ಬಳ್ಳಿ: ಸ್ವತ್ಛತೆ ಕೊರತೆಯಿಂದ ಪ್ರತಿವರ್ಷ ಚಿಕಿತ್ಸೆಗಾಗಿಯೇ ದೇಶಾದ್ಯಂತ ಸುಮಾರು 600 ಕೋಟಿ ರೂ. ಖರ್ಚಾಗುತ್ತಿದೆ. ಇದಕ್ಕೆ ಪ್ರಮುಖವಾದ ಕಾರಣ ಬಯಲು ಶೌಚ. ಇದನ್ನು ಅರಿತು ಸುತ್ತಲಿನ ಪರಿಸರ ಸ್ವತ್ಛವಾಗಿಟ್ಟುಕೊಳ್ಳಬೇಕು ಎಂದು ಕೇಂದ್ರ ಕೌಶಲಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಕುಂದಗೋಳ ತಾಲೂಕು ಬೆಟದೂರಿನಲ್ಲಿ ಸ್ವತ್ಛ ಭಾರತ ಅಭಿಯಾನ-ಸ್ವತ್ಛತೆಯೇ ಸೇವೆ ಅರಿವು ಕಾರ್ಯಕ್ರಮ ಹಾಗೂ 101 ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶೌಚಾಲಯ ನಿರ್ಮಾಣಕ್ಕೆ ಕೇಂದ್ರ ಸರಕಾರ ವಿವಿಧ ಯೋಜನೆಯಡಿ ಸಬ್ಸಿಡಿ ನೀಡುತ್ತಿದೆ.
ಸ್ಥಿತಿವಂತರು ದಯವಿಟ್ಟು ಸಬ್ಸಿಡಿ ಹಣ ಪಡೆಯಲು ಮುಂದಾಗಬೇಡಿ. ಇದರಿಂದ ಅರ್ಹ ಫಲಾನುಭವಿಗಳು ವಂಚಿತರಾಗುತ್ತಾರೆ ಎಂದು ಹೇಳಿದರು. ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಗುಟ್ಕಾ, ಮದ್ಯದಂತಹ ದುಶ್ಚಟಗಳನ್ನು ಬಿಟ್ಟು ಅದೇ ಹಣದಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬಹುದು. ಗ್ರಾಮದಲ್ಲಿ ಬಯಲು ಶೌಚಕ್ಕೆ ಹೋಗುವವರ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಎಂದು ಸಲಹೆ ನೀಡಿದರು.
ಇದಕ್ಕೂ ಮೊದಲು ವಿದ್ಯಾರ್ಥಿಗಳಿಂದ ಕೇಕ್ ಕತ್ತರಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ ಆಚರಿಸಲಾಯಿತು. ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ, ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಿಪಂ ಸದಸ್ಯ ಧರ್ಮಪ್ಪ ಮಗಳಿ, ಗ್ರಾಪಂ ಅಧ್ಯಕ್ಷ ಚನ್ನಪ್ಪಗೌಡ, ತಾಪಂ ಸದಸ್ಯೆ ಕಮಲವ್ವ ಹಾದಿಮನಿ ಇತರರಿದ್ದರು.
ಕೇಂದ್ರ ಸರಕಾರದ ಸೌಲಭ್ಯ ಇನ್ನೂ ಬಂದಿಲ್ಲ..
ಹುತಾತ್ಮ ವೀರಯೋಧ ಹನುಮಂತಪ್ಪ ಕೊಪ್ಪದ ಅವರ ಮನೆಗೆ ಸಚಿವ ಅನಂತಕುಮಾರ ಹೆಗಡೆ ಸೇರಿದಂತೆ ಮುಖಂಡರು ಭೇಟಿ ನೀಡಿ ತಾಯಿಯ ಯೋಗಕ್ಷೇಮ ವಿಚಾರಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸರಕಾರದಿಂದ ಬರಬೇಕಾದ ಸೌಲಭ್ಯಗಳು ಇನ್ನೂ ಬಂದಿಲ್ಲ. ಈ ಕುರಿತು ಒಂದಿಷ್ಟು ಸಹಾಯ ಮಾಡುವಂತೆ ಹನುಮಂತಪ್ಪ ಕೊಪ್ಪದ ಅವರ ತಾಯಿ ಮನವಿ ಮಾಡಿದರು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಸಚಿವರು ಭರವಸೆ ನೀಡಿದರು.