ಬೀದರ: ಬೀದರ-ಮಚಲಿಪಟ್ಟಣಂ ಸೂಪರ್‌ಫಾಸ್ಟ್ ನೂತನ ರೈಲಿಗೆ ಸಂಸದ ಭಗವಂತ ಖೂಬಾ ಅವರು ಶುಕ್ರವಾರ ನಗರದ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು. ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೈಲು ಸಂಚಾರದಿಂದ ದೂರದ ಮುಂಬೈ, ದೆಹಲಿಯಂತಹ ರಾಜಧಾನಿ ಪ್ರದೇಶಗಳಿಗೆ ಕಡಿಮೆ ಅವಧಿಯಲ್ಲಿ ತಲುಪಲು ಅನುಕೂಲವಾಗಲಿದೆ. ಜೊತೆಗೆ ಇತರೆ ರೈಲುಗಳಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ. ಒಟ್ಟಾರೆ ಇದರಿಂದ ಕರ್ನಾಟಕ, ತೆಲಂಗಾಣ ಹಾಗೂ ಸೀಮಾಂದ್ರ ರಾಜ್ಯಗಳ ಆಂತರಿಕ ಸಂಬಂಧ ಹಾಗೂ ಸಂಪರ್ಕ ಉತ್ತಮಗೊಳ್ಳಲಿದೆ ಎಂದು ತಿಳಿಸಿದರು.
ಈ ರೈಲು ಸಂಚಾರದಿಂದ ಈ ಭಾಗದ ವ್ಯಾಪಾರದ ಅಭಿವೃದ್ಧಿಗೆ ಅನುಕೂಲವಾಗಲಿದೆ. ರೈತರು, ಕಾರ್ಮಿಕರಿಗೆ ಇದು ಉತ್ತಮ ವರದಾನದಂತಿದ್ದು, ಉನ್ನತ ದರ್ಜೆಯ ಚಿಕಿತ್ಸೆಗೆ ಬೇರೆಡೆ ಸಂಚರಿಸಲು ರೋಗಿಗಳಿಗೂ ಕೂಡ ಸಹಾಯವಾಗಲಿದೆ. ಜಿಲ್ಲೆಯ ಜನತೆ ಇದರ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.
ದಕ್ಷಿಣ ಮಧ್ಯ ರೈಲ್ವೆ ವಿಭಾಗದ ವಿಭಾಗೀಯ ಸಹಾಯಕ ವ್ಯವಸ್ಥಾಪಕ ಶೈಲೇಂದ್ರ ಸಿಂಗ್ ಮಾತನಾಡಿ, 12750 ಸಂಖ್ಯೆಯ ನೂತನ ಈ ರೈಲು ಪ್ರತಿದಿನ ಸಂಜೆ 7:25ಕ್ಕೆ ಬೀದರನಿಂದ ಹೊರಟು ಮರುದಿನ ಬೆಳಗ್ಗೆ 6:23ಕ್ಕೆ ಮಚಲಿಪಟ್ಟಣವನ್ನು ತಲುಪಲಿದೆ.
ಬೀದರ ನಿಂದ ಜಹೀರಾಬಾದ್, ವಿಕಾರಬಾದ್, ಲಿಂಗಂಪಲ್ಲಿ, ಸಿಕಿಂದ್ರಾಬಾದ್, ಜಣಗಾಂವ್, ಕಾಜಿಪೇಟ್, ವಾರಂಗಲ್, ಕೇಸಮುದ್ರಂ, ಮಹಬೂಬಾದ್, ದೋರಣಕಲ್, ಖಮ್ಮಾಮ್, ಮದೀರಾ, ಕೊಂಡಪಲ್ಲಿ, ಗುಡಿವಿಡಾ, ಮುಜಲ್ಲಾ, ಗುದ್ಲಾವಲ್ಲೇರು, ಕೌತ್ರಂ, ವಡ್ಲಮನ್ನುಡು, ಪೆದನಾ, ಚಿಲಕಲಪುಡಿ ಮಾರ್ಗವಾಗಿ ಈ ರೈಲು ಸಂಚರಿಸಲಿದೆ. ಈ ರೈಲು ಎಸಿ 2 ಟೈರ್, ಎಸಿ 3 ಟೈರ್, ಸ್ಲೀಪರ್ ಕ್ಲಾಸ್ ಮತ್ತು ಜನರಲ್ 2 ಕ್ಲಾಸ್ ಬೋಗಿಗಳನ್ನು ಹೊಂದಿರುತ್ತದೆ ಎಂದು ಹೇಳಿದರು.
ರೈಲ್ವೆ ನಿಲ್ದಾಣದ ಅಧೀಕ್ಷಕ ಎ.ಆರ್. ಮೀನಾ, ವ್ಯವಸ್ಥಾಪಕ ರಮೇಶ, ಬಿಜೆಪಿ ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಪ್ರಮುಖರಾದ ಬಾಬು ವಾಲಿ, ಜಗದೀಶ ಖೂಬಾ, ಬಾಬುರಾವ್ ಮದಕಟ್ಟಿ, ಈಶ್ವರಸಿಂಗ್ ಠಾಕೂರ್ ಹಾಗೂ ಇತರರು ಇದ್ದರು.