ಬೆಂಗಳೂರು: ತಾಳೆಗರಿಯಿಂದ ಹಿಡಿದು ಸುಧಾರಿತ ತಂತ್ರಜ್ಞಾನದ ಕಾಲದಲ್ಲಿಯೂ ಪುಸ್ತಕಗಳು ತನ್ನದೇ ಪ್ರಾಮುಖ್ಯತೆ ಪಡೆದಿವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟಿದ್ದಾರೆ.
ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸೋಮವಾರದಿಂದ ಆರಂಭವಾಗಿ ರುವ 13ನೇ ಬೆಂಗಳೂರು ಪುಸ್ತಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಆಸ್ತಿ ಹಂಚುವ ವೇಳೆ ಮನೆಯಲ್ಲಿ ಮಹಾಭಾರತ ಪುಸ್ತಕವಿದ್ದರೂ ಕೂಡ ಅದನ್ನು ಹಂಚಿಕೆ ಮಾಡಲಾಗು ತ್ತಿತ್ತು. ಮಹಾಭಾರತ ಪುಸ್ತಕಕ್ಕಾಗಿ ಆಸ್ತಿಯನ್ನೇ ಬಿಟ್ಟುಕೊಡುತ್ತಿದ್ದ ಉದಾಹರ ಣೆಗಳಿವೆ ಎಂದು ತಿಳಿಸಿದರು.
ನಮ್ಮ ದೇಶದ ಪುಸ್ತಕ ಸಂಸ್ಕೃತಿಗೂ ವಿದೇಶಿ ಪುಸ್ತಕದ ಸಂಸ್ಕೃತಿಗೂ ಸಾಕಷ್ಟು ವ್ಯತ್ಯಾಸವಿದೆ. ಒಂದು ನಾಟಕ ನೋಡುವ ವೇಳೆ ತನಗೆ ಅರಿವಿಲ್ಲದಂತೆ ಮೈ ಮರೆಯುವ ತನ್ಮಯತೆ ಪುಸ್ತಕ ಓದುವಾಗಲೂ ಕಾಣಬಹುದು. ವಿದೇಶಗಳಲ್ಲಿ ಇದು ಸಾಧ್ಯವಿಲ್ಲ ಎಂದು ಹೇಳಿದರು.
ಕರ್ನಾಟಕ ಪುಸ್ತಕ ಅಕಾಡೆಮಿ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಮಾತನಾಡಿ, ಪುಸ್ತಕೋತ್ಸವದ ಮೂಲಕ ಈ ಬಾರಿಯ ದಸರಾ ಆಚರಣೆ ಮಾಡುವ ಸಂಸ್ಕೃತಿ ಎಲ್ಲರೂ ಅಳವಡಿಸಿಕೊಳ್ಳಬೇಕು. ಪ್ರತಿ ಮನೆಯಲ್ಲಿ ಗ್ರಂಥಾಲಯಕ್ಕಾಗಿ ಕೊಠಡಿಗಳನ್ನು ನಿರ್ಮಿಸುವ ಮನೋಭಾವ ಎಲ್ಲರಲ್ಲಿಯೂ ಬೆಳೆಯಬೇಕು ಎಂದು ಸಲಹೆ ನೀಡಿದರು.
ಕಸಾಪ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿದರು. ಎಸ್‌ಬಿಐ ವಾಯುವ್ಯ ವಿಭಾಗದ ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕ ವಿನ್ಸೆಂಟ್ ಎಂ.ಡಿ., ಬೆಂಗಳೂರು ಪುಸ್ತಕ ಪ್ರಕಾಶಕರ ಸಂಘ ಅಧ್ಯಕ್ಷ ರಾಮಚಂದ್ರ ಎ.ಎನ್ ಇದ್ದರು.