Advertisement

ವೆಲೆನ್ಸಿಯಾದ ವಿನ್ಸೆಂಟ್‌ ಪೆರಾರ್‌ ಚರ್ಚ್‌ನಲ್ಲಿ “ಜಲ ಬಂಧನ’ಕ್ಕೆ ಚಾಲನೆ

11:14 PM Jul 03, 2019 | Sriram |

ಮಹಾನಗರ: ಮಂಗಳೂರು ನಗರ ಸೇರಿದಂತೆ ಕರಾವಳಿ ಭಾಗದಲ್ಲಿ ಮುಂಗಾರು ಮತ್ತಷ್ಟು ದುರ್ಬಲವಾಗುತ್ತಿದ್ದು, ನೀರಿನ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ. ಈಗಾಗಲೇ ಮಳೆಗಾಲ ಶುರುವಾಗಿ ಒಂದು ತಿಂಗಳು ಕಳೆದಿದ್ದು, ಎಲ್ಲಿಯೂ ವಾಡಿಕೆಯಷ್ಟು ಕೂಡ ಮಳೆ ಬಂದಿಲ್ಲ.

Advertisement

ಸಾಮಾನ್ಯವಾಗಿ ಮಳೆಗಾಲದ ಅವಧಿಯು ಮುಂಗಾರು ಹಾಗೂ ಹಿಂಗಾರು ಸೇರಿ ಜೂನ್‌ನಿಂದ ನವೆಂಬರ್‌ 2ನೇ ವಾರದವರೆಗೆ ಇರುವುದು ವಾಡಿಕೆ. ಈ ಕಾರಣದಿಂದ ಜುಲೈ- ಆಗಸ್ಟ್‌ನಲ್ಲಿ ಮಳೆಯ ಪ್ರಮಾಣ ಜಾಸ್ತಿಯಾಗಬಹುದು ಎನ್ನುವ ಲೆಕ್ಕಾಚಾರ ಹವಾಮಾನ ತಜ್ಞರದ್ದು. ಹೀಗಿರುವಾಗ, ಒಂದು ವೇಳೆ, ಬಾಕಿ ಉಳಿದಿರುವ ಎರಡು ಅಥವಾ ಮೂರು ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾದರೆ, ಆ ನೀರನ್ನು ಸಂರಕ್ಷಿಸುವ ಅಥವಾ ಸಂಗ್ರಹಿಸುವತ್ತ ಕಾರ್ಯಪ್ರವೃತಗೊಳ್ಳಬೇಕಾದ ಬಹುದೊಡ್ಡ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ. ಇದಕ್ಕಿರುವ ಏಕೈಕ ಮಾರ್ಗ ಮಳೆಕೊಯ್ಲು.

ಇದನ್ನು ಪ್ರೇರೇಪಿಸುವ ಸಲುವಾಗಿ ಉದಯವಾಣಿ ಹಮ್ಮಿಕೊಂಡಿರುವ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ಈಗ ನಿರೀಕ್ಷೆಗೂ ಮೀರಿದ ಫಲ ನೀಡುತ್ತಿದೆ. ಮನೆ, ಸಂಘಸಂಸ್ಥೆಗಳು ಮಾತ್ರವಲ್ಲ ದೇವಸ್ಥಾನ, ಚರ್ಚ್‌ಗಳಲ್ಲೂ ಅಳವಡಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಈಗ ನಗರದ ವೆಲೆನ್ಸಿಯಾದಲ್ಲಿರುವ ವಿನ್ಸೆಂಟ್‌ ಪೆರಾರ್‌ ಚರ್ಚ್‌ನಲ್ಲಿ ಮಳೆ ಕೊಯ್ಲು ವ್ಯವಸ್ಥೆ ಅಳವಡಿಕೆ ಕಾಮಗಾರಿ ಪ್ರಾರಂಭಗೊಂಡಿದೆ.

ಗೋಲ್ಡನ್‌ ಜುಬ್ಲಿ ಸಭಾಂಗಣ, ಕಾನ್ಫರೆನ್ಸ್‌ ಹಾಲ್‌, ಪೆರಾರ್‌ ಹಾಲ್‌, ಚರ್ಚ್‌ ಆಫೀಸ್‌, ಧರ್ಮಗುರುಗಳ ಮನೆ ಸಹಿತ ಸುಮಾರು ಒಂದು ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದುರ ಚರ್ಚ್‌ನಲ್ಲಿ ಒಂದು ಹಳೆ ಬಾವಿ ಮತ್ತು ಕೊಳವೆ ಬಾವಿಗಳಿವೆ. ಇದೇ ಕಾರಣಕ್ಕೆ ಕಳೆದ ವರ್ಷದವರೆಗೆ ನೀರಿನ ಅಭಾವ ಬರಲಿಲ್ಲ. ಆದರೆ ಈ ವರ್ಷ ಮಾರ್ಚ್‌ನಲ್ಲೇ ಬಾವಿಯಲ್ಲಿ ನೀರು ಬತ್ತಿದ್ದು, ಸಂಪ್‌ನಲ್ಲಿದ್ದ ನೀರು ಕೂಡ ಖಾಲಿಯಾಗಿತ್ತು. ಈ ಕಾರಣಕ್ಕೆ ನೀರಿನ ಉಪಯೋಗಕ್ಕೆ ಕೊಳವೆ ಬಾವಿ ಉಪಯೋಗಿಸುತ್ತಿದ್ದರು. ಬೇಸಗೆ ಕೊನೆಯಲ್ಲಿ ಕೊಳವೆ ಬಾವಿಯಲ್ಲೂ ನೀರು ಖಾಲಿಯಾಗಿತ್ತು.

ಚರ್ಚ್‌ ಸುತ್ತಮುತ್ತಲಿನ ಹೂದೋಟಗಳು ಇವೆ. ಆದರೆ, ಈ ಬೇಸಗೆಯಲ್ಲಿ ನೀರಿನ ಅಭಾವ ಹೆಚ್ಚಾಗಿದ್ದರಿಂದ ಇದಕ್ಕೆ ಹಾಯಿಸಲು ಸಮರ್ಪಕ ನೀರು ಇರಲಿಲ್ಲ. ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆಯನ್ನು ತಡೆಯಬೇಕು ಎಂಬ ಉದ್ದೇಶದಿಂದ ಈಗ ಚರ್ಚ್‌ನಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಲಾಗಿದೆ.

Advertisement

ಚರ್ಚ್‌ನ ಮೇಲ್ಛಾವಣಿಯಿಂದ ಪೈಪ್‌ ಮುಖೇನ ನೀರು ಬಂದು ಬಾವಿಗೆ ಸಂಪರ್ಕ ಕಲ್ಲಿಸಲಾಗುತ್ತಿದೆ. ಬಾವಿ ಪಕ್ಕದಲ್ಲಿ ಫಿಲ್ಟರ್‌ ಇಡಲಾಗಿದ್ದು, ಶುದ್ಧ ನೀರು ಬಾವಿಗೆ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನ ಗಳಲ್ಲಿ ಕೊಳವೆ ಬಾವಿಗೂ ಮಳೆನೀರು ಕೊಯ್ಲು ಸಂಪರ್ಕ ಕಲ್ಪಿಸಲಾಗುತ್ತದೆ.

ಪೋಪ್‌ ಅವರಿಂದ ಕರೆ
ಕ್ರಿಶ್ಚಿಯನ್‌ ಸಮುದಾಯದ ಪೋಪ್‌ ಅವರು “ಲಾವುದಾತೊಸಿ’ (ದೇವರಿಗೆ ಮಹಿಮೆಯಾಗಲಿ) ಎಂಬ ಧ್ಯೇಯ ವಾಕ್ಯದೊಂದಿಗೆ ಪರಿಸರ ಸಂರಕ್ಷಿಸಬೇಕು ಎಂಬ ಕರೆ ನೀಡಿದ್ದರು. ಅಲ್ಲದೆ ಮಂಗಳೂರು ಬಿಷಪ್‌ ಡಾ| ಪೀಟರ್‌ ಪೌಲ್‌ ಸಲ್ಡಾನ ಅವರು ಪರಿಸರ ಸಂರಕ್ಷಣೆ ಬಗ್ಗೆ ಚಿಂತಿಸುವಂತೆ ಸಲಹೆ ನೀಡಿದ್ದರು. ಇದರ ಅಂಗವಾಗಿ ಈಗಾಗಲೇ ಗಿಡಗಳನ್ನು ನೆಡಲಾಗಿದೆ.

ಎರಡನೇ ಹಂತವಾಗಿ “ಜಲಬಂಧನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಅದರಆಂಗವಾಗಿ ಮಳೆನೀರು ಕೊಯ್ಲು ಅಳವಡಿಸಲಾಗುತ್ತಿದೆ.

ರವಿವಾರ ಚಾಲನೆ
ವೆಲೆನ್ಸಿಯಾದಲ್ಲಿರುವ ವಿನ್ಸೆಂಟ್‌ ಪೆರಾರ್‌ ಚರ್ಚ್‌ನಲ್ಲಿ ಅಳವಡಿಸುತ್ತಿರುವ ಮಳೆನೀರು ಕೊಯ್ಲು ಕಾರ್ಯಕ್ರಮದ ಉದ್ಘಾಟನೆಯು ಚರ್ಚ್‌ನ ಗೋಲ್ಡನ್‌ ಜುಬ್ಲಿ ಸಭಾಂಗಣದಲ್ಲಿ ಜು.7ರಂದು ಬೆಳಗ್ಗೆ 8.45 ನಡೆಯಲಿದೆ. ಚರ್ಚ್‌ಗೆ ಒಳಪಟ್ಟ 1,250 ಕುಟುಂಬ ಸದಸ್ಯರು ಸೇರಿದಂತೆ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲಾºವಿ ಅವರು ಮಳೆನೀರು ಕೊಯ್ಲು ಬಗ್ಗೆ ಮಾಹಿತಿ ನೀಡಲಿದ್ದಾರೆ.

 ಮಳೆನೀರು ಹಿಡಿದಿಟ್ಟು ಬಾವಿಗೆ
ಪರಿಸರದ ಬಗ್ಗೆ ಕಾಳಜಿ ಹೊಂದಬೇಕು ಎಂದು ಪೋಪ್‌ ಅವರು ಕರೆ ನೀಡಿದ್ದರು. ಅದರ ಪ್ರಕಾರ ಮಂಗಳೂರು ಡಯಾಸಿಸ್‌ನ ಬಿಷಪ್‌ ಅವರು ಪರಿಸರ ಸಂರಕ್ಷಣೆಗೆ ಮನವಿ ಮಾಡಿದ್ದರು. ಇದೇ ಕಾರಣಕ್ಕೆ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಿದ್ದೇವೆ. ಮಳೆ ನೀರನ್ನು ಪೋಲು ಮಾಡದೆ ಹಿಡಿದಿಟ್ಟುಕೊಂಡು ಬಾವಿ ನೀರು ಬಿಡಲಾಗುತ್ತಿದೆ.
– ರೆ|ಫಾ| ಜೇಮ್ಸ್‌ ಡಿ’ಸೋಜಾ, ಪ್ರ. ಧರ್ಮಗುರುಗಳು, ವೆಲೆನ್ಸಿಯಾ ವಿನ್ಸೆಂಟ್‌ ಪೆರಾರ್‌ ಚರ್ಚ್‌

ಉದಯವಾಣಿ ಅಭಿಯಾನದಿಂದ ಪ್ರೇರಣೆ
“ಉದಯವಾಣಿ’ ಪತ್ರಿಕೆಯು ಕಳೆದ ಕೆಲವು ವಾರಗಳಿಂದ ಮನೆ ಮನೆಗೆ ಮಳೆಕೊಯ್ಲು ಎಂಬ ಅಭಿಯಾನ ಗಮನಿಸಿ ಚರ್ಚ್‌ನಲ್ಲಿಯೂ ಮಳೆಕೊಯ್ಲು ವ್ಯವಸ್ಥೆ ಅಳವಡಿಸಲು ಮುಂದಾದೆವು. ನಿರ್ಮಿತಿ ಕೇಂದ್ರದ ಪರಿಣಿತರ ಮಾರ್ಗದರ್ಶನ ಪಡೆದು ಈಗ ಸುಮಾರು ಎರಡು ಲಕ್ಷ ರೂ. ವೆಚ್ಚದಲ್ಲಿ ಕೆಲಸ ನಡೆಯುತ್ತಿದೆ.
– ಅನಿಲ್‌ ಲೋಬೊ,
ಉಪಾಧ್ಯಕ್ಷ ವೆಲೆನ್ಸಿಯಾ ವಿನ್ಸೆಂಟ್‌ ಪೆರಾರ್‌ ಚರ್ಚ್‌

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ.ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000

Advertisement

Udayavani is now on Telegram. Click here to join our channel and stay updated with the latest news.

Next