Advertisement

ಮಕ್ಕಳ ರಕ್ಷಣಾ ಜಾಗೃತಿ ಸಪ್ತಾಹಕ್ಕೆ ಚಾಲನೆ

03:59 PM Nov 15, 2021 | Shwetha M |

ವಿಜಯಪುರ: ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣೆಗೆ ಕ್ಷಣಾರ್ಧದಲ್ಲಿ ಸ್ಪಂದಿಸುವ “1098′ ಮಕ್ಕಳ ಸಹಾಯವಾಣಿ ಕುರಿತು ಜಾಗೃತಿ ಮೂಡಿಸಲು ಚೈಲ್ಡ್‌ ಲೈನ್‌ ಸೇ ದೋಸ್ತಿ ವಿಶೇಷ ಸಾಪ್ತಾಹಿಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

Advertisement

ಅಭಿಯಾನದ ಪ್ರಥಮ ದಿನದ ಅಂಗವಾಗಿ ಬೈಕ್‌ ರ್ಯಾಲಿ ನಡೆಯಿತು. ಬೈಕ್‌ ರ್ಯಾಲಿಗೆ ಗೋಲಗುಮ್ಮಟ ಪೊಲೀಸ್‌ ಠಾಣೆ ಅಧಿಕಾರಿ ಸೀತಾರಾಮ ಲಮಾಣಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಗೋಲಗುಮ್ಮಟದಿಂದ ಆರಂಭವಾದ ಬೈಕ್‌ ರ್ಯಾಲಿಯಲ್ಲಿ ಚೈಲ್ಡ್‌ಲೈನ್‌ ಮಹತ್ವ ಸಾರುವ ಫಲಕಗಳನ್ನು ಅಳವಡಿಸಲಾಗಿತ್ತು. ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿದ ಈ ಬೈಕ್‌ ರ್ಯಾಲಿ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತಕ್ಕೆ ಮುಕ್ತಾಯವಾಯಿತು.

ಈ ವೇಳೆ ವಾಸುದೇವ ತೋಳಬಂದಿ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಹೊಣೆ. ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಮಕ್ಕಳ ಸಹಾಯವಾಣಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಮಕ್ಕಳು ತೊಂದರೆ ಎದುರಿಸುತ್ತಿದ್ದರೆ ಮಕ್ಕಳ ಸಂಬಂಧಿತ ಸಮಸ್ಯೆಗಳು, ಬಾಲ್ಯ ವಿವಾಹ ಆಯೋಜನೆಯಂತಹ ಘಟನೆಗಳು ನಡೆಯುತ್ತಿದ್ದರೆ ಸಹಾಯವಾಣಿಗೆ ದೂರು ನೀಡಬೇಕು. ತಕ್ಷಣವೇ ಆ ರೀತಿಯ ಘಟನೆಗಳಿಗೆ ಕಡಿವಾಣ ಹಾಕಲಾಗುವುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇರಿಸಲಾಗುತ್ತದೆ ಎಂದರು.

ಏಳು ದಿನಗಳ ಅಭಿಯಾನದ ಹಿನ್ನೆಲೆಯಲ್ಲಿ ದೇವರಹಿಪ್ಪರಗಿಯಲ್ಲಿ ಮಕ್ಕಳ ಸಭೆ, ಮಕ್ಕಳ ಕಲ್ಯಾಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ, ಪ್ರಬಂಧ ಸ್ಪರ್ಧೆ, ಮಕ್ಕಳಿಗಾಗಿ ಕ್ರೀಡಾ ಚಟುವಟಿಕೆಗಳ ಆಯೋಜನೆ, ಅಂತರ್ಜಾಲ ಸುರಕ್ಷತೆ ಕುರಿತು ಪಾಲಕರಿಗೆ ಅರಿವು, ಮಕ್ಕಳ ವಿಶೇಷ ಗ್ರಾಮ ಸಭೆ ಸೇರಿದಂತೆ ವಿವಿಧ ತೆರನಾದ ಕಾರ್ಯಕ್ರಮ ಆಯೋಜಿಸಲಾಗಿದೆ.

Advertisement

ಮಕ್ಕಳ ಸಹಾಯವಾಣಿ ಸಂಯೋಜಕಿ ಸುನಂದಾ ತೋಳಬಂದಿ, ಮಕ್ಕಳ ಸಹಾಯವಾಣಿ-1098 ತಂಡ ಹಾಗೂ ಉಜ್ವಲ ಸಂಸ್ಥೆ ಕಾರ್ಯಕರ್ತರು ಹಾಗೂ ಕರ್ನಾಟಕ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next