Advertisement

ಕರಾಯ: ಕುಡಿಯುವ ನೀರಿನ ಯೋಜನೆಗೆ ಗ್ರಹಣ!

10:47 AM Oct 30, 2018 | |

ಉಪ್ಪಿನಂಗಡಿ: ಸರಿಸುಮಾರು 30 ಲಕ್ಷ ರೂ. ವ್ಯಯಿಸಿ ನಾಲ್ಕು ವರ್ಷದಿಂದ ಕುಡಿಯುವ ನೀರು ಸರಬರಾಜಿನ ಸರಕಾರಿ ಯೋಜನೆಯ ಕಾಮಗಾರಿ ನಡೆಸಿದ್ದರೂ ಈವರೆಗೆ ಒಂದು ಹನಿ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಯೋಜನೆಗೆ ಗ್ರಹಣ ಬಡಿದಂತಾಗಿದೆ.

Advertisement

ಸತತ ನೀರಿನ ಅಭಾವಕ್ಕೆ ತುತ್ತಾಗುವ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ನಿವಾಸಿಗಳಿಗಾಗಿ ಶಾಶ್ವತ ಕುಡಿಯುವ ನೀರು ಒದಗಿಸುವ ಸಲುವಾಗಿ ನೇತ್ರಾವತಿ ನದಿಯಿಂದ ನೀರು ಒದಗಿಸುವ ಯೋಜನೆಗೆ ಬೆಳ್ತಂಗಡಿಯ ಹಿಂದಿನ ಶಾಸಕ ವಸಂತ ಬಂಗೇರ ಅವರು ಮುತುವರ್ಜಿಯಿಂದ 30 ಲಕ್ಷ ರೂ. ಅನುದಾನ ಒದಗಿಸಿ ಕರಾಯ ಗ್ರಾಮದ ಮುಗ್ಗ-ದೈಪಿಲ ಎನ್ನುವಲ್ಲಿ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ನದಿಯಲ್ಲಿ ಕಲ್ಲು ಬಂಡೆಗಳನ್ನು ಕೊರೆದು ಟ್ಯಾಂಕ್‌, ನೀರನ್ನು ಸರಬರಾಜು ಮಾಡಲು ಎತ್ತರ ಪ್ರದೇಶದಲ್ಲಿ ಸಂಗ್ರಹಣ ಟ್ಯಾಂಕ್‌ ನಿರ್ಮಿಸಲಾಯಿತು. ಅದಕ್ಕೆ ಅಗತ್ಯ ಪೈಪ್‌ಲೈನ್‌ ಅಳವಡಿಸಲಾಯಿತು. ಆದರೆ ಆ ಯೋಜನೆಯಿಂದ ಒಂದು ಹನಿ ನೀರನ್ನೂ ಸರಬರಾಜು ಮಾಡಲು ನಾಲ್ಕು ವರ್ಷಗಳಿಂದ ಸಾಧ್ಯವಾಗಿಲ್ಲ. 

ಇಲಾಖೆ ಎಂಜಿನಿಯರ್‌ ನಿರ್ಲಕ್ಷ್ಯದಿಂದ ಹೀಗಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಯೋಜನೆ ಪೂರ್ಣಗೊಂಡರೂ ನೀರು ಸರಬರಾಜು ಆಗುವುದಿಲ್ಲವೇಕೆ ಎಂದು ಗ್ರಾಮಸ್ಥರು ಪ್ರಶ್ನಿಸಿದಾಗ, ಈ ಕಾಮಗಾರಿಯಲ್ಲಿ ದೋಷವಾಗಿದೆ. ಅದನ್ನು ಸರಿಪಡಿಸಿದ ಬಳಿಕ ನೀರು ಒದಗಿಸಲಾಗುತ್ತದೆ ಎನ್ನುವ ಭರವಸೆ ನೀಡಲಾಗಿದೆ.

ನೀರು ಬಾರದಿದ್ದರೂ ಬಿಲ್‌ ಪಾವತಿ
ಕಾಮಗಾರಿ ಪೂರ್ಣಗೊಂಡು ಅದು ಬಳಕೆಗೆ ಲಭಿಸಿದ ಬಳಿಕ ಕಾಮಗಾರಿಯ ಗುಣಮಟ್ಟದ ಬಗ್ಗೆ ಖಾತ್ರಿ ಪಡಿಸಿಕೊಂಡು, ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿರುವ ಬಗ್ಗೆ ದೃಢೀಕರಿಸಿಕೊಂಡು ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಕಾಮಗಾರಿ ಮೊತ್ತವನ್ನು ಪಾವತಿಸಬೇಕು. ಮುಗ್ಗ-ದೈಪಿಲದಲ್ಲಿ ನಡೆಸಿದ ನೀರಿನ ಯೋಜನೆಯಲ್ಲಿ ಮಾತ್ರ ನಿಯಮ ಪಾಲನೆಯಾಗಿಲ್ಲ. ಯೋಜನೆಯಿಂದ ಒಂದು ಹನಿ ನೀರು ಸರಬರಾಜು ಆಗುತ್ತಿಲ್ಲವೆಂದು ಗ್ರಾಮಸ್ಥರು ಹೇಳಿದರೂ ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ಅದು ಕೇಳಿಸಿಯೇ ಇಲ್ಲ. ಗುತ್ತಿಗೆದಾರನಿಗೆ ಸಂಪೂರ್ಣ ಬಿಲ್‌ ಪಾವತಿಸಿ ಸಂತೃಪ್ತಗೊಂಡಿದ್ದಾರೆ.

ಸರಕಾರಿ ಹಣದ ದುರುಪಯೋಗ
ಬಹುಸಮಯದಿಂದ ಕರಾಯ ಜನತೆಯ ನೀರಿನ ಸಮಸ್ಯೆ ನಿವಾರಿಸಲು ಸತತ ಯತ್ನದ ಫ‌ಲವಾಗಿ ದೊರೆತ ಯೋಜನೆ ಇದಾಗಿದೆ. 30 ಲಕ್ಷದ ಯೋಜನೆಯನ್ನು ಕೇವಲ ಗುತ್ತಿಗೆದಾರನ ಹಿತದ ಕಾಮಗಾರಿ ಎನ್ನುವಂತೆ ನಡೆಸಿದ್ದು, ಇಲ್ಲಿ ಸರಕಾರಿ ಹಣದ ದುರುಪಯೋಗವಾಗಿದೆ. ಈ ಬಗ್ಗೆ ಮೇಲಧಿಕಾರಿಗಳು ಅಗತ್ಯ ಕ್ರಮ ಜರಗಿಸಬೇಕು ಎಂದು ಗ್ರಾಮಸ್ಥ ಗುಣಕರ ಅಗ್ನಾಡಿ ತಿಳಿಸಿದ್ದಾರೆ.

Advertisement

ಅಧಿಕಾರಿಗಳ ಮತ್ತು ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಪ್ರಯೋಜನಕ್ಕೆ ಸಿಗದಂತಾಗಿದೆ. ಜನತೆಗೆ ವಾಗ್ಧಾನ ನೀಡಿದ ನಾವು ತಲೆತಗ್ಗಿಸುವಂತಾಗಿದೆ.
ಕೆ.ಕೆ. ಶಾಹುಲ್‌ ಹಮೀದ್‌
  ಜಿ.ಪಂ. ಸದಸ್ಯ 

ಇಚ್ಛಾಶಕ್ತಿಯ ಕೊರತೆ
ಕಾಮಗಾರಿ ಮುಗಿದು ನಾಲ್ಕು ವರ್ಷ ಸಂದರೂ ಒಂದು ಹನಿ ನೀರು ಲಭಿಸದಿರುವ ಬಗ್ಗೆ ಬೇಸರವಿದೆ. ಕಾಮಗಾರಿ ಇನ್ನೂ ಪಂಚಾಯತ್‌ಗೆ ಹಸ್ತಾಂತರವಾಗದಿದ್ದರೂ ಗುತ್ತಿಗೆದಾರರಿಗೆ ಬಿಲ್‌ ಪೂರ್ಣ ಪಾವತಿಯಾಗಿರುವುದು ಆಡಳಿತ ವ್ಯವಸ್ಥೆಯ ಅಣಕವಾಗಿದೆ. ಜನತೆಯ ಬೇಡಿಕೆಗೆ ಸ್ಪಂದಿಸಬೇಕೆನ್ನುವ ಇಚ್ಛಾಶಕ್ತಿಯ ಕೊರತೆ ಅಧಿಕಾರಿಗಳಲ್ಲಿ ಎದ್ದು ಕಾಣುತ್ತಿದೆ. ಕಾಮಾಗಾರಿಯನ್ನು ಸಮರ್ಪಕವಾಗಿ ಪೂರ್ಣಗೊಳಿಸಲು ಅಧಿಕಾರಿಗಳು ಗುತ್ತಿಗೆದಾರನಿಗೆ ಒತ್ತಡ ಹಾಕಿದರೆ ಪ್ರಯೋಜನವಾದೀತು.
– ಜಯವಿಕ್ರಂ ಕಲ್ಲಾಪು,
ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷರು

 ಎಂ.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next