Advertisement

ನಡೆದು ಬಾಯಾರಿದವರಿಗೆ ಕುಡಿಯುವ ನೀರಿನ ವ್ಯವಸ್ಥೆ

05:57 AM Jan 10, 2019 | |

ನಗರ : ಸಾರಿಗೆ ವ್ಯವಸ್ಥೆ ಇಲ್ಲದಿರುವ ಸೇಡಿಯಾಪು-ಪೆರ್ನೆ ರಸ್ತೆ ಯಲ್ಲಿ ನಡೆದುಕೊಂಡು ಹೋಗುವ ಸಾರ್ವಜನಿಕರ ಬಾಯಾರಿಕೆ ನೀಗಿಸಲು ವ್ಯಕ್ತಿಯೊಬ್ಬರು ತಮ್ಮ ಮನೆಯ ಕಾಂಪೌಂಡ್‌ನ‌ಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.

Advertisement

ರಾಜಾಡಳಿತದ ಕಾಲದಲ್ಲಿ ಜನ ಸಾಮಾನ್ಯರು ನಡೆದುಕೊಂಡು ಹೋಗ ಬೇಕಾಗಿತ್ತು. ಆ ಸಂದರ್ಭ ಬಾಯಾರಿಕೆ ನೀಗಿಸಲು ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿತ್ತು. ಕಾಲ ಕಳೆದಂತೆ ಸಾರ್ವಜನಿಕ ಬೋರ್‌ವೆಲ್‌ಗ‌ಳು ಈ ಸ್ಥಾನವನ್ನು ತುಂಬಿದ್ದವು. ಇಂತಹ ವ್ಯವಸ್ಥೆಗಳು ಇಲ್ಲದಿರುವ ಈ ಕಾಲದಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದ ಕಡೆ ನಡೆದುಕೊಂಡು ಹೋಗುವವರಿಗೆ ಆಯಾಸವಾದಾಗ ನೀರು ಬೇಕಾಗುತ್ತದೆ. ಇದನ್ನು ಮನಗಂಡ ಸೇಡಿಯಾಪು-ಪೆರ್ನೆ ರಸ್ತೆಯಲ್ಲಿರುವ ತನ್ನ ಮನೆಯ ಕಾಂಪೌಂಡ್‌ನ‌ಲ್ಲಿ ರಾಜೇಶ್‌ ಪ್ರಭು ಅವರು ತಂಪಾದ ಹೂಜಿ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.

ನಡೆದಾಡುವವರು ಹೆಚ್ಚು
ಸೇಡಿಯಾಪುವಿನಿಂದ 1 ಕಿ.ಮೀ. ಮುಂದಕ್ಕೆ ರಾಜೇಶ್‌ ಪ್ರಭು ಅವರು ವಾಸ್ತವ್ಯವಿದ್ದು, ಕಳೆದ 3 ವರ್ಷಗಳಿಂದ ಅವರು ಸಾರ್ವಜನಿಕ ಸ್ನೇಹಿ, ಮಾನವೀಯ ಕಾರ್ಯ ಮಾಡುತ್ತಾ ಬಂದಿದ್ದಾರೆ. ಈ ರಸ್ತೆಯಲ್ಲಿ ಸರಕಾರಿ ಅಥವಾ ಖಾಸಗಿ ಸರ್ವೀಸ್‌ ವಾಹನಗಳ ಓಡಾಟವಿಲ್ಲ. ದಿನಂಪ್ರತಿ ಉದ್ಯೋಗಕ್ಕೆ ತೆರಳುವವರು, ಶಾಲಾ ಕಾಲೇಜಿಗೆ ತೆರಳುವ ಮಕ್ಕಳು, ಸಾರ್ವಜನಿಕರು ನಡೆದುಕೊಂಡೇ ಮುಖ್ಯ ರಸ್ತೆಯನ್ನು ಸಂಪರ್ಕಿಸಬೇಕು. ಈ ಸಂದರ್ಭ ಕುಡಿಯಲು ನೀರು ಅತ್ಯವಶ್ಯ.

ಬೀಗ ಹಾಕಿ ಭದ್ರಪಡಿಸಿದ್ದಾರೆ
ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಹೂಜಿಯ ಬಳಿ ಇರುವ ನೀರು ಹರಿಯುವ ಚರಂಡಿಗೆ ಸಿಮೆಂಟ್ ಹಾಸನ್ನೂ ತಮ್ಮ ಸ್ವಂತ ಖರ್ಚಿನಿಂದ ಅವರು ಅಳವಡಿಸಿದ್ದಾರೆ. ಹೂಜಿಯ ನೀರಿಗೆ ಧೂಳು, ಇನ್ನಿತರ ಯಾವುದೇ ಕಸಕಡ್ಡಿಗಳು ಬಿದ್ದು ಹಾಳಾಗದಂತೆ ಎಚ್ಚರ ವಹಿಸಿದ್ದಾರೆ. ಅದಕ್ಕಾಗಿ ಮುಚ್ಚಳವನ್ನು ಮುಚ್ಚಿ ಮೇಲ್ಗಡೆಯಲ್ಲಿ ಬೀಗ ಹಾಕಿ ಭದ್ರಪಡಿಸಿಕೊಂಡಿದ್ದಾರೆ.

ಪ್ರತೀದಿನ ನೀರು ಬದಲಾವಣೆ
ರಾಜೇಶ್‌ ಪ್ರಭು ತಮ್ಮ ಮನೆಯ ಕಾಂಪೌಂಡ್‌ಗೆ ಸ್ಟ್ಯಾಂಡ್ ಅಳವಡಿಸಿ ಅದರಲ್ಲಿ ಮಣ್ಣಿನ ಹೂಜಿಯನ್ನು ಇರಿಸಿ ಪ್ರತೀದಿನ ಕುಡಿಯಲು ಯೋಗ್ಯ ನೀರು ತುಂಬಿಸುತ್ತಾರೆ. ಈ ದಾರಿಯಲ್ಲಿ ನಡೆದುಕೊಂಡು ಹೋಗುವವರು, ಸ್ವಂತ ವಾಹನದಲ್ಲಿ ಸಾಗುವವರು ಬಾಯಾರಿದಾಗ ಈ ಹೂಜಿಯ ತಂಪಾದ ಕುಡಿಯುವ ನೀರನ್ನು ಕುಡಿಯುತ್ತಾರೆ.

Advertisement

ಸಣ್ಣ ಪ್ರಯತ್ನ; ತೃಪ್ತಿ ಇದೆ
ಈ ರಸ್ತೆಯಲ್ಲಿ ಸುಮಾರು ದೂರದವರೆಗೆ ವಾಹನದ ವ್ಯವಸ್ಥೆಯಿಲ್ಲ. ಶಾಲಾ ಮಕ್ಕಳು, ಸಾರ್ವಜನಿಕರು ನಡೆದುಕೊಂಡು ಹೋಗುವ ಅನಿವಾರ್ಯತೆಯ ಮಧ್ಯೆ ಬಾಯಾರಿಕೆ ನೀಗಿಸಲೂ ವ್ಯವಸ್ಥೆ ಇಲ್ಲದಿರುವುದನ್ನು ಅರಿತು ಕುಡಿಯುವ ನೀರಿನ ವ್ಯವಸ್ಥೆಯ ಸಣ್ಣ ಪ್ರಯತ್ನ ಮಾಡಿದ್ದೇನೆ. ಈ ಕೆಲಸದಲ್ಲಿ ನನಗೆ ತುಂಬಾ ಖುಷಿ ಇದೆ.
– ರಾಜೇಶ್‌ ಪ್ರಭು,
ನೀರಿನ ವ್ಯವಸ್ಥೆ ಕಲ್ಪಿಸಿದವರು

••ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next