Advertisement

ಕುಡಿವ ನೀರು ಪೂರೈಕೆಗೆ ಆಗ್ರಹ

05:38 PM Feb 17, 2017 | Team Udayavani |

ಯಾದಗಿರಿ: ನಗರದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜಿಗೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ಸದಸ್ಯರು ಖಾಲಿ ಕೊಡಗಳೊಂದಿಗೆ ನಗರಸಭೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ನಗರದಲ್ಲಿ ಸುಮಾರು ನಾಲ್ಕು ಐದು ತಿಂಗಳಿಂದ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ.

Advertisement

ಇದರಿಂದ ಜನತೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜಿಗೆ ಸಂಬಂಧಪಟ್ಟ ಅಧಿಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.  ನಗರದಲ್ಲಿ ಭೀಮಾ ನದಿ ಹರಿಯುತ್ತಿದ್ದರೂ ನಗರಸಭೆ ಸಮರ್ಪಕವಾಗಿ ನೀರು ಸರಬರಾಜು ಮಾಡಲು ವಿಫಲವಾಗಿದೆ.

ಅಧಿಕಾರಿಗಳಿಗೆ ಸಾರ್ವಜನಿಕರ ಬಗ್ಗೆ ಯಾವುದೇ ಕಾಳಜಿ  ಇಲ್ಲ. ಆಡಳಿತ ಸಂಪೂರ್ಣ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೇಸಿಗೆ ಇನ್ನೂ ಪ್ರಾರಂಭವಾಗಿಲ್ಲ. ಈಗಲೇ ಕುಡಿಯುವ ನೀರಿನ ಅಭಾವ ತಲೆದೋರಿದೆ. ಇನ್ನೂ ಬೇಸಿಗೆ ಆರಂಭವಾದರೆ, ಇನ್ನಷ್ಟು ಸಮಸ್ಯೆಉದ್ಭವವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೆ ಯಾವುದೇ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಅವರು ದೂರಿದರು. 

ಸಾರ್ವಜನಿಕರು, ಕೂಲಿ ಕಾರ್ಮಿಕರು ದಿನನಿತ್ಯ ತಮ್ಮ ಕೆಲಸಗಳನ್ನು ಬಿಟ್ಟು ನೀರಿಗಾಗಿ ದಿನವಿಡಿ ಪರದಾಡುವಂತಹ ಪರಿಸ್ಥಿತಿ ನಿರ್ಮಿಸಿದೆ. ನಗರದಲ್ಲಿ ಎರಡು ದಿನಕ್ಕೊಮ್ಮೆ ಕೇವಲ 30 ನಿಮಿಷ ನೀರು  ಬರುತ್ತಿದ್ದರೂ, ಅದು ಅಶುದ್ಧ ನೀರಾಗಿದೆ. ನಗರಸಭೆ ಅಶುದ್ಧ ಕುಡಿಯುವ ನೀರು ಕುಡಿಸುವ ಮೂಲಕ ಜನರ ಆರೋಗ್ಯದ ಜೊತೆ ಚೆಲ್ಲಾಟವಾಗುತ್ತಿದೆ ಎಂದು ಆಗ್ರಹಿಸಿದರು. ಸಮರ್ಪಕ ಕುಡಿಯುವ ನೀರು, ಫಾಗಿಂಗ್‌ ಸಿಂಪಡಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು.

ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಇನ್ನು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಾಗರತ್ನಾ ಕುಪ್ಪಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ವೀಣಾ ಎಂ. ಮೋದಿ, ರುಕ್ಮಿಣಿ ಬಾಯಿ, ಶಿವಕಾಂತಮ್ಮ, ಸುನೀತಾ ಚವ್ಹಾಣ, ಸ್ನೇಹಾ ರಸೂಳಕರ್‌, ಶಕುಂತಲಾ, ಅಕ್ಕಮಹಾದೇವಿ, ದಾನಮ್ಮ, ರಮಾದೇವಿ, ಭೀಮಬಾಯಿ, ನಾಗವೇಣಿ, ಬಸಮ್ಮ, ಶಿವ ಲೀಲಾ, ಮಲ್ಲಮ್ಮ, ಗಂಗಮ್ಮ, ನಾಗಮ್ಮ ಇತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next