Advertisement
ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆ ಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ವಾಗ್ವಾದಗಳನ್ನು ಆಲಿಸಿದ ಅವರು ಈ ಪ್ರತಿಕ್ರಿಯೆ ನೀಡಿದರು.
ಸಭೆ ಆರಂಭವಾಗುತ್ತಿದ್ದಂತೆಯೇ ವಿಪಕ್ಷ ನಾಯಕ ನವೀನ್ ಡಿ’ಸೋಜಾ ಅವರು ನೀರಿನ ಸಮಸ್ಯೆಯನ್ನು ಪ್ರಸ್ತಾಪಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ಹಳೆಯ ಬಾವಿ, ಕೊಳವೆಬಾವಿ, ಕೆರೆಗಳ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಪ್ರಸಕ್ತ ಎರಡು ದಿನಕ್ಕೊಮ್ಮೆ ನೀರು ರೇಷನಿಂಗ್ ಇರುವುದರಿಂದ ಎತ್ತರದ ಪ್ರದೇಶಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಜೂ.10ರ ಅನಂತರ ಮಳೆ ಆರಂಭವಾಗಲಿದೆ. ಮಳೆ ಬಾರದಿದ್ದರೆ ಮಂಗಳೂರಿಗೆ ನೀರು ಪೂರೈಕೆ ಮತ್ತಷ್ಟು ಆತಂಕಕ್ಕೆ ಕಾರಣವಾಗಲಿದೆ ಎಂದರು.
Related Articles
Advertisement
ವಿಪಕ್ಷ ಸದಸ್ಯ ಎ.ಸಿ.ವಿನಯರಾಜ್ ಮಾತನಾಡಿ, ಡಿಸೆಂಬರ್ ಬಳಿಕ ವಿದ್ಯುತ್ ಉತ್ಪಾದನೆಗೆ ನೀರು ಬಳಸಬಾರದು ಎಂಬ ಷರತ್ತು ಇದ್ದರೂ ಎಎಂಆರ್ ಡ್ಯಾಂನಿಂದ ನೀರು ಬಳಸಲಾಗಿದೆ. ಪಾಲಿಕೆ ನೀರು ಸಂಗ್ರಹ ಬಗ್ಗೆ ಗಂಭೀರ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಕೃತಕ ನೆರೆ ನಿಯಂತ್ರಣಕ್ಕೆ ಕ್ರಮಮುಂಗಾರು ಪೂರ್ವಭಾವಿಯಾಗಿ ನಗರದಲ್ಲಿ 11 ರಾಜಕಾಲುವೆಗಳ 50 ಕಿ.ಮೀ. ವ್ಯಾಪ್ತಿಯಲ್ಲಿ ಹೂಳೆತ್ತುವ ಕಾಮಗಾರಿಗಳನ್ನು ಟೆಂಡರ್ ಕರೆದು 22 ಪ್ಯಾಕೇಜ್‌ನಡಿ ನಡೆಸಲಾಗುತ್ತಿದೆ. ಈಗಾಗಲೇ 19 ಪ್ಯಾಕೇಜ್ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ಮೇ 30ರೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಕಳೆದ ಬಾರಿ ಪ್ರವಾಹಕ್ಕೆ ತುತ್ತಾಗಿದ್ದ 41 ಪ್ರದೇಶಗಳನ್ನು ಗಮನದಲ್ಲಿರಿಸಿ ಸ್ಥಳೀಯ ಕಾರ್ಪೊರೇಟರ್‌ಗಳ ಜತೆ ಮಾತುಕತೆ ನಡೆಸಿ ವಾಟ್ಸಾಪ್ ಗ್ರೂಪ್ ಮಾಡಿ ಕಾಮಗಾರಿ ನಡೆಸಲಾಗುತ್ತಿದೆ. ಕೊಟ್ಟಾರ ಚೌಕಿ ಬಳಿ ಒತ್ತುವರಿ ಆದ ರಾಜಕಾಲುವೆಯನ್ನು ತೆರವುಗೊಳಿಸಿ ಅಗಲ ಮಾಡಲು ಎನ್‌ಐಟಿಕೆ ತಂಡ ನೀಡಿರುವ ವರದಿಯಂತೆ ಕ್ರಮ ವಹಿಸಲಾಗುತ್ತಿದೆ ಎಂದು ಆಯುಕ್ತ ಚನ್ನಬಸಪ್ಪ ಸಭೆಯಲ್ಲಿ ಮಾಹಿತಿ ನೀಡಿದರು. ಯಂತ್ರೋಪಕರಣಗಳೊಂದಿಗೆ ಗ್ಯಾಂಗ್
ಕೃತಕ ನೆರೆಯ ಸಂದರ್ಭ ರಾತ್ರಿ- ಹಗಲು ಸನ್ನದ್ಧವಾಗಿರುವಂತೆ ಜೆಸಿಬಿ, ಯಂತ್ರೋ ಪಕರಣಗಳ ಸಹಿತ ಸಿಬಂದಿಯನ್ನು ಸನ್ನದ್ಧಗೊಳಿಸ ಲಾಗಿದೆ. ಕಂಟ್ರೋಲ್ ರೂಂ ತೆರೆದು ಎಲ್ಲ ರೀತಿಯ ಅಗತ್ಯಕ್ರಮಗಳಿಗೆ ಪಾಲಿಕೆ ಸಿದ್ಧತೆ ನಡೆಸಿದೆ. 18 ಕಡೆ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಕಾಲುವೆ, ಚರಂಡಿಗಳಿಂದ ಮೇಲೆತ್ತಲಾದ ಹೂಳನ್ನು ತೆರವುಗೊಳಿಸಲು ಹೆಚ್ಚುವರಿ ವಾಹನಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದರು. ಜಲಸಿರಿ ಯೋಜನೆ ಯಾವಾಗ ಪೂರ್ಣ?
ಜಲಸಿರಿ ಯೋಜನೆಯಡಿ 22 ಓವರ್‌ಹೆಡ್ ಟ್ಯಾಂಕ್‌ನೊಂದಿಗೆ 2020ರಲ್ಲಿ ಕಾಮಗಾರಿ ಆರಂಭಿಸಿ, 2023ರಲ್ಲಿ ಮುಗಿಸಬೇಕಿತ್ತು. ಕಾಮಗಾರಿ ಬಹಳಷ್ಟು ವಿಳಂಬವಾಗಿ ಸಾಗುತ್ತಿದೆ ಎಂದು ಸದಸ್ಯ ಮನೋಜ್ ಕೋಡಿಕಲ್ ಅವರು ಆಕ್ಷೇಪಿಸಿದಾಗ, ಮತ್ತೆ ಗುತ್ತಿಗೆದಾರರಿಗೆ ಒಂದು ವರ್ಷದ ಕಾಲಾವಕಾಶ ನೀಡಲಾಗಿದೆ. 230 ಕೋಟಿ ರೂ.ಗಳಲ್ಲಿ ಶೇ. 40ರಷ್ಟು ಕಾಮಗಾರಿ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಆರೋಗ್ಯ ನಿರೀಕ್ಷಕರ ನೇಮಕಕ್ಕೆ ಒತ್ತಾಯ
ಮಳೆಗಾಲ ಆರಂಭವಾಗುತ್ತಿರುವಂತೆಯೇ ನಗರದಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಹೆಚ್ಚುವುದರಿಂದ 21 ಮಂದಿ ಆರೋಗ್ಯ ನಿರೀಕ್ಷಕರಲ್ಲಿ ಸದ್ಯ 9 ಮಂದಿ ಮಾತ್ರ ಇದ್ದಾರೆ, ಈ ಬಗ್ಗೆ ಗಮನ ಹರಿಸಬೇಕು ಎಂದು ಸದಸ್ಯ ಅಬ್ದುಲ್ ರವೂಫ್ ಒತ್ತಾಯಿಸಿದರೆ, ನಗರದಲ್ಲಿ ಎಲ್‌ಇಡಿ ಬಲ್ಬ್ ಅಳವಡಿಕೆಯ ಗೊಂದಲದ ಬಗ್ಗೆ ಸದಸ್ಯ ಪ್ರವೀಣ್ ಚಂದ್ರ ಆಳ್ವ ಗಮನ ಸೆಳೆದರು. ಸಭೆಯಲ್ಲಿ ಉಪ ಮೇಯರ್ ಪೂರ್ಣಿಮಾ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಕಿಶೋರ್ ಕೊಟ್ಟಾರಿ, ಶಕಿಲಾ ಕಾವ, ಹೇಮಲತಾ ರಘು ಸಾಲ್ಯಾನ್, ನಯನಾ ಆರ್. ಕೋಟ್ಯಾನ್ ಉಪಸ್ಥಿತರಿದ್ದರು. ಸೈಕ್ಲಿಂಗ್ ಪಥ: 24 ಕುಟುಂಬಗಳಿಗೆ ಶಾಶ್ವತ ಪುನರ್ವಸತಿ ಬಳಿಕ ಯೋಜನೆ ಕಾರ್ಯಸೂಚಿ ಮಂಡನೆಯ ಸಂದರ್ಭ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಬೋಳಾರ ಸೀ ಫೇಸ್‌ನಿಂದ ಎಂ.ಜಿ. ರಸ್ತೆವರೆಗಿನ ಸೈಕ್ಲಿಂಗ್ ಪಥ ಅಭಿವೃದ್ದಿಗೆ ಸಂಬಂಧಿಸಿ ಮೇಯರ್ ಪೂರ್ವ ಮಂಜೂರಾತಿ ನೀಡಿರುವುದನ್ನು ವಿರೋಧಿಸಿ ಸದಸ್ಯ ವಿನಯ್ ರಾಜ್ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಅತ್ತಾವರ ಕಟ್ಟಪುಣಿ ಎಂಬಲ್ಲಿ ಜೋಪಡಿಯಲ್ಲಿರುವ 24 ಕುಟುಂಬಗಳಿಗೆ ಶಾಶ್ವತ ಪರಿಹಾರವನ್ನು ಕಲ್ಪಿಸದೆ ಕಾಮಗಾರಿ ಆರಂಭಿಸಲು ಬಿಡುವುದಿಲ್ಲ ಎಂದು ವಿನಯ್‌ರಾಜ್ ಸಭೆಯಲ್ಲಿ ಸವಾಲು ಹಾಕಿದಾಗ, ಸ್ಥಳೀಯ ಕಾರ್ಪೊರೇಟರ್ ದಿವಾಕರ್ ಪಾಂಡೇಶ್ವರ ಅವರು ಕೂಡಾ ಶಾಶ್ವತ ಪರಿಹಾರದ ಬಳಿಕ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು. ಈ ನಡುವೆ ಸದಸ್ಯರ ನಡುವೆ ಚರ್ಚೆ ವಾಗ್ವಾದಕ್ಕೆ ಕಾರಣವಾಗಿ, “ನನ್ನ ತೇಜೋವಧೆ ಮಾಡಲಾಗಿದೆ’ ಎಂದು ವಿನಯ್‌ರಾಜ್ ಅವರು ಮೇಯರ್ ಪೀಠದೆದುರು ಧರಣಿ ಕುಳಿತರು. ಕೆಲ ಹೊತ್ತು ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿ ಬಳಿಕ ಮತ್ತೆ ಸಭೆ ಆರಂಭವಾದಾಗ ವಿನಯ್‌ರಾಜ್ ಅವರು, ಮೇಯರ್ ಇಂತಹ ಪ್ರಕರಣಗಳಲ್ಲಿ ಚರ್ಚೆ ನಡೆಯದೆ, ಪೂರ್ವ ಮಂಜೂರಾತಿ ಕೊಡುವುದು ಸರಿಯಲ್ಲ. ಇದು ಅಡುಗೆ ಮನೆಯ ಚರ್ಚೆ ಅಲ್ಲ ಎಂಬ ಹೇಳಿಕೆ, ಆಡಳಿತ ಪಕ್ಷದ ಮಹಿಳಾ ಸದಸ್ಯರನ್ನು ಕೆರಳಿಸಿತು. ಅಡುಗೆ ಮನೆಯನ್ನು ಉಲ್ಲೇಖೀಸಿ ಸದಸ್ಯರು ಮಹಿಳಾ ಸದಸ್ಯರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಮೇಯರ್ ಪೀಠದೆದುರು ಧಿಕ್ಕಾರ ಕೂಗಿದರು. ಮತ್ತೆ ಕೆಲ ಹೊತ್ತು ಸಭೆಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಬಳಿಕ ಮೇಯರ್ ಅವರು ವಿನಯ್‌ರಾಜ್ ಅವರನ್ನು ಉಲ್ಲೇಖೀಸಿ ಅಸಮಾಧಾನ ವ್ಯಕ್ತಪಡಿಸಿದಾಗ, ವಿಪಕ್ಷ ಸದಸ್ಯರು ಕಾರ್ಯಸೂಚಿ ಮುಂದುವರಿಸುವಂತೆ ಸಲಹೆ ನೀಡುವ ಮೂಲಕ ಸಭೆ ಮುಂದುವರಿಯಿತು. ಎಲ್‌ಇಡಿ ದೀಪಗಳ ನಿರ್ವಹಣೆ: ಸಭೆಗೆ ನಿರ್ಣಯ
ಸ್ಮಾರ್ಟ್ ಸಿಟಿ ಕಾರ್ಯಕ್ರಮದಡಿ ನಗರದಲ್ಲಿ ಎಲ್‌ಇಡಿ ಬಲ್ಬ್ ಅಳವಡಿಕೆಯ ಟೆಂಡರ್ ವಹಿಸಿದವರಿಗೆ ಎರಡು ಬಾರಿ ಅವಧಿ ವಿಸ್ತರಿಸಿ ಮೇ 15ಕ್ಕೆ ಅದೂ ಮುಕ್ತಾಯವಾಗಿದೆ. ಗುತ್ತಿಗೆದಾರನ್ನು ವಜಾಗೊಳಿಸುವಂತೆ ಸ್ಮಾರ್ಟ್ ಸಿಟಿ ಎಂಡಿಗೆ ಪತ್ರ ಕಳುಹಿಸಲಾಗಿದೆ. 66,000 ಬಲ್ಬ್ಗಳನ್ನು ಅಳವಡಿಸಬೇಕಾಗಿದ್ದಲ್ಲಿ ಕೇವಲ 17,000 ಬಲ್ಪ್ಗಳು ಮಾತ್ರವೇ ಅಳವಡಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ಉತ್ತರಿಸಿದಾಗ ಹಾಕಿರುವ ಬಲ್ಬ್ಗಳ ನಿರ್ವಹಣೆ ಹೊಣೆ ಯಾರು ಎಂದು ಪ್ರವೀಣ್ ಚಂದ್ರ ಆಳ್ವ ಪ್ರಶ್ನಿಸಿದರು.ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಮೇಯರ್ ಉತ್ತರಿಸಿದರು. ಒಳಚರಂಡಿ ಕಾಮಗಾರಿ ಪರಿಶೀಲನೆಗೆ ತರ್ಡ್ ಪಾರ್ಟಿ ಇಲ್ಲ!
ರಸ್ತೆ ನಿರ್ಮಾಣ, ಕಟ್ಟಡ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಯನ್ನು ತೃತೀಯ ಸಂಸ್ಥೆ ಪರಿಣಿತರಿಂದ (ತರ್ಡ್ ಪಾರ್ಟಿ) ಪರಿಶೀಲನೆ ನಡೆಸಲಾಗುತ್ತದೆ. ಆದರೆ ಒಳಚರಂಡಿ ವ್ಯವಸ್ಥೆಯ ಪರಿಶೀಲನೆಗೆ ಈ ವ್ಯವಸ್ಥೆ ಇಲ್ಲದಿರುವುದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಸದಸ್ಯೆ ಸಂಗೀತ ನಾಯಕ್ ಹೇಳಿದಾಗ, ವಿಪಕ್ಷ ನಾಯಕ ನವೀನ್ ಡಿ’ಸೋಜಾ ಅವರು ದನಿಗೂಡಿಸಿದರು.