Advertisement

ಕುಡಿಯುವ ನೀರಿನ ಯೋಜನೆ ರೂಪಿಸಲು ಸಚಿವರಿಂದ ಚರ್ಚೆ

08:09 AM Jun 03, 2020 | Suhan S |

ಕುಮಟಾ: ತಾಲೂಕಿನ ಉಪ್ಪಿನಪಟ್ಟಣ ಅಘನಾಶಿನಿ ನದಿ ತೀರಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ ಶಾಸಕ ದಿನಕರ ಶೆಟ್ಟಿ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಯೋಜನೆ ರೂಪಿಸುವ ಬಗ್ಗೆ ಚರ್ಚಿಸಿದರು.

Advertisement

ಅಳಕೋಡ ಗ್ರಾ.ಪಂ ವ್ಯಾಪ್ತಿಯ ಕತಗಾಲ ಉಪ್ಪಿನಪಟ್ಟಣ ಪ್ರದೇಶದಲ್ಲಿ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವ ಬಗ್ಗೆ ಶಾಸಕ ದಿನಕರ ಶೆಟ್ಟಿ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಅಲ್ಲಿನ ಅಘನಾಶಿನಿ ನದಿಯ ತೀರವನ್ನು ವೀಕ್ಷಿಸಿದ ಸಚಿವರು, ಶಾಸಕರು ಮತ್ತು ಅಲ್ಲಿನ ಜಿಪಂ ಸದಸ್ಯ ಗಜಾನನ ಪೈ ಅವರೊಂದಿಗೆ ಚರ್ಚಿಸಿ ಅಗತ್ಯ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಸಚಿವರಿಗೆ ಮನವಿ ಸಲ್ಲಿಸಿದ ಜಿ.ಪಂ ಸದಸ್ಯ ಗಜಾನನ ಪೈ, ಆ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಗಮನ ಸೆಳೆದರು. ಉಪ್ಪಿನಪಟ್ಟಣ ಗ್ರಾಮಕ್ಕೆ ಹೊಂದಿಕೊಂಡಿರುವ ಅಘನಾಶಿನಿ ಮತ್ತು ಚೆಂಡಿಕಾ ನದಿ ವರ್ಷಪೂರ್ತಿ ಹರಿದು ಸಮುದ್ರ ಸೇರುತ್ತದೆ. ಸಮುದ್ರದ ಏರಿಳಿತದಿಂದ ಉಪ್ಪು ನೀರು ನದಿಗೆ ಸೇರ್ಪಡೆಯಾಗಿ ಆ ಭಾಗದ ನೀರಿನ ಮೂಲಗಳು ಉಪ್ಪಾಗುವುದರಿಂದ ಕುಡಿಯಲು ಅಯೋಗ್ಯವಾಗುತ್ತದೆ. ಇದರಿಂದ ಈ ಪ್ರದೇಶದ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ.

ಹಾಗಾಗಿ ಈ ಅಘನಾಶಿನಿ ಮತ್ತು ಚೆಂಡಿಕಾ ನದಿ ಸೇರುವ ಸಂಗಮ ಸ್ಥಾನದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿದರೆ, ನದಿ ನೀರು ಸಂಗ್ರಹವಾಗುವುದರಿಂದ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ. ಸಮುದ್ರ ಸೇರಿ ವ್ಯರ್ಥವಾಗುವ ನೀರಿನಿಂದ ಕುಮಟಾ ತಾಲೂಕಿನ ದಿವಗಿ, ಹೆಗಡೆ, ಅಘನಾಶಿನಿ ಸೇರಿದಂತೆ 10 ಪಂಚಾಯತಗಳಿಗೆ ಈ ನೀರನ್ನು ಪೂರೈಸುವ ಮೂಲಕ ಆ ಪ್ರದೇಶಗಳಲ್ಲಿ ಎದುರಾದ ನೀರಿನ ಭವಣೆ ನೀಗಿಸಬಹುದಾಗಿದೆ. ಹಾಗಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ಜಿಪಂ ಸದಸ್ಯ ಗಜಾನನ ಪೈ ಅವರು ಸಚಿವರಿಗೆ ವಿನಂತಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಶಿವರಾಮ ಹೆಬ್ಟಾರ, ತಾಲೂಕಿನ ಏಳೆಂಟು ಗ್ರಾಪಂಗಳಿಗೆ ಕುಡಿಯುವ ನೀರನ್ನು ಪೂರೈಸುವ ಉದ್ದೇಶದಿಂದ ಉಪ್ಪಿನಪಟ್ಟಣದ ಎರಡು ನದಿಯ ಸಂಗಮ ಸ್ಥಾನದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುವ ಯೋಜನೆಗೆ ಸ್ಥಳ ಪರಿಶೀಲನೆಗಾಗಿ ಇಲ್ಲಿಗೆ ಬಂದಿದ್ದೇವೆ. ಈ ಡ್ಯಾಮ್‌ಗೆ ಗೇಟ್‌ ವ್ಯವಸ್ಥೆ ಇರುವುದರಿಂದ ಮಳೆಗಾಳದಲ್ಲಿ ಗೇಟ್‌ ತೆರೆದಿರುತ್ತದೆ. ಬೇಸಿಗೆಯಲ್ಲಿ ಗೇಟ್‌ ಮುಚ್ಚಿರುತ್ತದೆ. ಇದರಿಂದ ಡ್ಯಾಮ್‌ನಲ್ಲಿ ನೀರು ಸಂಗ್ರಹವಾಗುತ್ತದೆ. ಆ ನೀರನ್ನು ಗ್ರಾಮಗಳಿಗೆಪೂರೈಕೆ ಮಾಡಲಾಗುವುದು. ಡ್ಯಾಮ್‌ನಲ್ಲಿ ನೀರು ಸಂಗ್ರಹವಾಗುವುದರಿಂದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅಂತರಜಲ ವೃದ್ಧಿಯಾಗುತ್ತದೆ. ಈ ಡ್ಯಾಮ್‌ ಬಗ್ಗೆ ಜನರಲ್ಲಿ ಅಪನಂಬಿಕೆ ಬೇಡ. ಕೆಲವರು ಹರಡುವ ತಪ್ಪು ಮಾಹಿತಿಯ ಬಗ್ಗೆ ಕಿವಿಗೊಡಬೇಡಿ ಎಂದರು.

Advertisement

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕತಗಾಲ, ಉಪ್ಪಿನಪಟ್ಟಣ ಭಾಗದಲ್ಲಿರುವ ನೀರಿನ ಸಮಸ್ಯೆಯನ್ನು ನೀಗಿಸಲು ಶೀಘ್ರದಲ್ಲಿ ಪ್ರಸ್ತಾಪಿತ ಯೋಜನೆ ಜಾರಿಗೊಳಿಸಲು ಅಗತ್ಯ ಕ್ರಮ ವಹಿಸಬೇಕೆಂದು ಸಚಿವರ ಬಳಿ ವಿನಂತಿಸಿದರು. ಅಲ್ಲದೇ, ಆ ಭಾಗದ ಅಭಿವೃದ್ಧಿಯ ಕುರಿತು ಕೂಡ ಚರ್ಚಿಸಿದರು. ನಂತರ ಜಿಪಂ ಸದಸ್ಯ ಗಜಾನನ ಪೈ ಉಪ್ಪಿನಪಟ್ಟಣದ ಕಮಲದ ಕೆರೆಯನ್ನು ವೀಕ್ಷಿಸಲು ಸಚಿವರನ್ನು ಸ್ಥಳಕ್ಕೆ ಕರೆದೊಯ್ದರು. ಕಮಲದ ಕೆರೆಯನ್ನು ವೀಕ್ಷಿಸಿದ ಸಚಿವರು ಕೆರೆ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next