Advertisement

ಕುಡಿವ ನೀರು ಯೋಜನೆ; ಮತ್ತೆ ತಪಾಸಣೆ

01:13 PM Oct 14, 2019 | Team Udayavani |

ಕೊಪ್ಪಳ: ತಾಲೂಕಿನ ಬಹು ನಿರೀಕ್ಷಿತ ಮುಂಡರಗಿ-ಕಾಸನಕಂಡಿ 84 ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿನ ಲೋಪದೋಷಗಳ ಕುರಿತು ನಿವೃತ್ತ ಚೀಪ್‌ ಇಂಜನಿಯರ್‌ ಅವರಿಂದ ಮತ್ತೆ ತಪಾಸಣೆ ನಡೆದಿದ್ದು, ಜಿಪಂ ಮೂಲಕ ಸರ್ಕಾರಕ್ಕೂ ಸಮಗ್ರ ವರದಿ ಸಲ್ಲಿಕೆಯಾಗಿದೆ.  ಆದರೆ ತಪಾಸಣೆ ಬಳಿಕ ಮತ್ತಾವ ಬೆಳವಣಿಗೆಯು ನಡೆದಿಲ್ಲ.

Advertisement

ಹೌದು.. ತುಂಗಭದ್ರಾ ಜಲಾಶಯ ಜಿಲ್ಲೆಯಲ್ಲೇ ಇದ್ದರೂ ಕೊಪ್ಪಳ ತಾಲೂಕಿನ ಹಲವಾರು ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಅದರಲ್ಲೂ ಮಳೆಗಾಲದ ವೇಳೆ ನೀರಿಗೆ ಹಾಹಾಕಾರವಾಗಿರುವ ಉದಾಹರಣೆ ತಾಲೂಕಿನಲ್ಲಿವೆ. ಇಲ್ಲಿನ ನೀರಿನ ಭವಣೆ ತಪ್ಪಿಸಿ ಜನತೆಗೆ ಶಾಶ್ವತ ಕುಡಿಯವ ನೀರಿನ ಪೊರೈಸಬೇಕೆಂಬ ಉದ್ದೇಶದಿಂದ ಸರ್ಕಾರ 2010-11ರಲ್ಲಿ ತುಂಗಭದ್ರಾ ನದಿಯಿಂದ ಮುಂಡರಗಿ-ಕಾಸನಕಂಡಿ ಸಮೀಪದಿಂದ ಕುಡಿಯುವ ನೀರಿನ ಯೋಜನೆ ಆರಂಭಿಸಿತ್ತು. ಯೋಜನೆಗೆ ಕೋಟ್ಯಂತರ ವ್ಯಯವಾದರೂ ಈ ವರೆಗೂ ಹನಿ ನೀರೂ ಜನರಿಗೆ ತಲುಪಿಲ್ಲ. ಇಲ್ಲಿ ಗುತ್ತಿಗೆದಾರ, ಅ ಧಿಕಾರಿಗಳು ಮಾಡಿದ ಎಡವಟ್ಟಿನಿಂದ ಜನತೆ ನೀರಿನ ಭವಣೆಯಿಂದ ಪರಿತಪಿಸುತ್ತಿದ್ದಾರೆ. ಈ ಕಾಮಗಾರಿಯಲ್ಲಿ ಡಿಸೈನ್‌ ವಿಫಲವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಈಗ 40 ಕೋಟಿಗೂ ಅಧಿಕ ವ್ಯಯವಾದ ಯೋಜನೆಯ ಸ್ಥಿತಿಗತಿ ಅವಲೋಕಿಸಲು ಈ ಹಿಂದೆ ಹಲವು ಸಚಿವರು, ಶಾಸಕ, ಸಂಸದರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಯಾವುದೇ ಪರಿಹಾರ ಕಂಡುಕೊಳ್ಳುತ್ತಿಲ್ಲ. ಕಳೆದ ಮೈತ್ರಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೃಷ್ಣಭೈರೇಗೌಡ ಅವರೇ ಕಾಸನಕಂಡಿ ಯೋಜನಾ ಸ್ಥಳಕ್ಕೆ ಆಗಮಿಸಿ ಅಲ್ಲಿನ ಸ್ಥಿತಿಗತಿ ಅವಲೋಕಿಸಿ ವರದಿ ಅಧ್ಯಯನಕ್ಕೆ ಸಮ್ಮತಿಸಿದ್ದರು.

ಇತ್ತೀಚೆಗೆ ಬೆಂಗಳೂರು ಮುಖ್ಯ ಇಂಜನಿಯರ್‌ ವಿಭಾಗದ ನಿವೃತ್ತ ಸಿಇ ರಾಘವೇಂದ್ರ ರಾವ್‌ ಅವರ ತಂಡವೂ ಕಾಸನಕಂಡಿ ಬಳಿ ಆರಂಭಿಸಿದ ಯೋಜನೆಯ ಲೋಪದೋಷಗಳನ್ನು ಅವಲೋಕನ ಮಾಡಿದೆ. ಯಾವ ಹಂತದಲ್ಲಿ ಯೋಜನೆ ವಿಫಲವಾಗಿದೆ. ಜನತೆಗೆ ನೀರು ಏಕೆ ಪೂರೈಕೆಯಾಗುತ್ತಿಲ್ಲ. ಅದಕ್ಕೆ ಪರಿಹಾರವೇನು ಎನ್ನುವ ಕುರಿತಂತೆ ಸಮಗ್ರವಾಗಿ ಅಧ್ಯಯನ ನಡೆಸಿ ಜಿಪಂ ಗಮನಕ್ಕೆ ತಂದಿದೆ. ಜಿಪಂ ಸಹಿತ ಅಲ್ಲಿನ ಲೋಪಗಳನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ನಿವೃತ್ತ ಅಧಿಕಾರಿ ತಂಡವು ಅದಕ್ಕೆ ಮುಂದೇನು ಮಾಡಬೇಕು ಎನ್ನುವ ಸಲಹೆಗಳನ್ನೂ ವರದಿಯಲ್ಲಿ ಉಲ್ಲೇಖೀಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವರದಿಯೇನೋ ಸರ್ಕಾರಕ್ಕೆ ಇತ್ತೀಚೆಗೆ ಸಲ್ಲಿಕೆಯಾಗಿದೆ. ಆದರೆ ಬದಲಾದ ರಾಜಕೀಯದಲ್ಲಿ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕೋಟ್ಯಂತರ ರೂ. ಯೋಜನೆ ಹಳ್ಳಹಿಡಿಯುತ್ತಿವೆ. 2010-11ರಲ್ಲೇ ಆರಂಭವಾದ ಯೋಜನೆ 8 ವರ್ಷ ಗತಿಸುತ್ತಾ ಬಂದರೂ ಜನತೆಗೆ ನೀರು ಕೊಡಲಾಗಿಲ್ಲ. ಗುತ್ತಿಗೆದಾರನಿಗೆ ಶೇ. 90ರಷ್ಟು ಅನುದಾನ ಬಿಡುಗಡೆಯಾಗಿದೆ. ಯೋಜನೆಯಲ್ಲಿ ಆದ ಲೋಪ ಅಧ್ಯಯನದ ವರದಿಗಳು ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿವೆ. ಆದರೆ ಅವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತಿಲ್ಲ. ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಇದು ಜಿಲ್ಲೆಯ ಜನರ ದುರಂತವೇ ಸರಿ.

Advertisement

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next