Advertisement

ವಂಡ್ಸೆ ಪೇಟೆಯಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ

09:26 PM May 05, 2021 | Team Udayavani |

ವಂಡ್ಸೆ: ಬೈಂದೂರು ತಾಲೂಕಿನ ಪ್ರಮುಖ ಕೇಂದ್ರವಾಗಿರುವ ವಂಡ್ಸೆಯಲ್ಲಿ ಕುಡಿಯುವ ನೀರಿನ  ಅಭಾವ ತೀವ್ರವಾಗಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ. ವರ್ಷವೂ ಇಲ್ಲಿ ನೀರಿನ ಅಭಾವವಿದ್ದು, ಈ ವರೆಗೂ ಪರಿಹಾರ ಕಾಣದೆ ಇರುವುದರಿಂದ ಜನರ ಗೋಳು ತಪ್ಪಿಲ್ಲ.

Advertisement

ಬಹುತೇಕ ಬಾವಿಗಳ ನೀರು ಉಪ್ಪು  :

ಅನೇಕ ಕಡೆ ಬಾವಿಗಳಲ್ಲಿ ನೀರು ಉಪ್ಪಾಗಿದೆ. ಇವುಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ನದಿಯ ನೀರೂ ಉಪ್ಪಾಗಿರುವುದರಿಂದ ಜನರು ಸಮಸ್ಯೆ ಬಗೆ ಹರಿಸಲು ಪಂಚಾಯತ್‌ ಮೊರೆ ಹೋಗಿದ್ದಾರೆ.

ಬತ್ತಿ ಹೋದ ಬಾವಿಗಳು :

ಆಯ್ದ ಪ್ರದೇಶಗಳಲ್ಲಿ 8 ತೆರೆದ ಬಾವಿಗಳನ್ನು ನಿರ್ಮಿಸ ಲಾಗಿದೆ. ಈ ಬಾರಿ ಅಷ್ಟೂ ಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ. ಜತೆಗೆ ಜನರ ಅನುಕೂಲಕ್ಕಾಗಿ 15 ಕೊಳವೆ ಬಾವಿ ನಿರ್ಮಿಸಲಾಗಿದೆ. ಆದರೆ ಕೆಲವುದರಲ್ಲಿ ನೀರಿನ ಸಮಸ್ಯೆ ಇದೆ. 120 ನಳ್ಳಿ ನೀರು ಸಂಪರ್ಕ ವ್ಯವಸ್ಥೆ ಮಾಡಲಾಗಿದ್ದರೂ ಅವುಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಗ್ರಾಮಸ್ಥರು ಸಮರ್ಪಕವಾಗಿ ನೀರು ಸರಬರಾಜು ಮಾಡಲಾಗದ ಪರಿಸ್ಥಿತಿಯಿಂದ ಗ್ರಾಮಸ್ಥರು ನೀರಿಗಾಗಿ ವಲಸೆ ಹೋಗಬೇಕಾದ ಸಂದಿಗ್ಧತೆ ಇದೆ. 3329 ಜನಸಂಖ್ಯೆ ಹೊಂದಿರುವ ವಂಡ್ಸೆ ಗ್ರಾ.ಪಂ.ವ್ಯಾಪ್ತಿಯ ನಿವಾಸಿಗಳ ಬೇಸಗೆಯಲ್ಲಿನ ನೀರಿನ ಪರದಾಟಕ್ಕೆ ಇನ್ನೂ ಮುಕ್ತಿ ದೊರಕಿಲ್ಲ.

Advertisement

ಎಲ್ಲೆಲ್ಲಿ ನೀರಿನ ಬರ? :

ವಂಡ್ಸೆ ಪೇಟೆ, ಹರಾವರಿ, ಉದ್ದಿನಬೆಟ್ಟು, ಮಾವಿನಕಟ್ಟೆ, ಆತ್ರಾಡಿ, ಬಳಿಗೇರಿ, ಹೆಸಿನಗದ್ದೆ ಮುಂತಾದೆಡೆ ನೀರಿನ ತೀವ್ರ ಸಮಸ್ಯೆಯಿದೆ. ಇಲ್ಲಿನ ನಿವಾಸಿಗಳು ದುಬಾರಿ ಬೆಲೆಗೆ ನೀರು ತರಿಸಿಕೊಳ್ಳಬೇಕಾಗಿದೆ.

ಟೆಂಡರ್‌ಗೆ “ನೋ’ :

ಲೀಟರ್‌ ನೀರಿಗೆ 10 ರಿಂದ 12 ಪೈಸೆ,  ಜಿಪಿಎಸ್‌ ಇರುವ ವಾಹನ, ಪ್ರತಿ ಸಂಚಾರಕ್ಕೆ ಮೂರು ನಿಮಿಷ ವೀಡಿಯೋ ಚಿತ್ರೀಕರಣ ಹೀಗೆ ಸರಕಾರದ ನೀರಿನ ಟೆಂಡರ್‌ನಲ್ಲಿ ಷರತ್ತುಗಳಿದ್ದು ಈ ಕಾರಣದಿಂದ ನಿಗದಿತ ದರಕ್ಕೆ ನೀರು ಪೂರೈಕೆಗೆ ಟೆಂಡರ್‌ ಹಾಕಲು ಟ್ಯಾಂಕರ್‌ ಮಾಲಕರು ಮುಂದೆ ಬರುತ್ತಿಲ್ಲ. ಇದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ಜನತಾ ಕಾಲನಿಗೆ ಪ್ರತ್ಯೇಕ ವ್ಯವಸ್ಥೆ :

ಹಲವು ವರ್ಷಗಳಿಂದ ಬೇಸಗೆಯಲ್ಲಿ ನೀರಿಗೆ ಪರದಾಡುತ್ತಿದ್ದ ಮೂಕಾಂಬಿಕಾ ಜನತಾ ಕಾಲನಿ ನಿವಾಸಿಗಳಿಗೆ ಗ್ರಾ.ಪಂ. ಪ್ರತ್ಯೇಕ ಬೋರ್‌ವೆಲ್‌ ಹಾಕಿ, ಪೈಪ್‌ಲೈನ್‌ ಜೋಡಿಸಿ ನೀರಿನ ಸಮಸ್ಯೆ ಬಗೆಹರಿಸಿದೆ.

ಟೆಂಡರ್‌ ಹಾಕಲು ಯಾರೂ ಮುಂದಾಗುತ್ತಿಲ್ಲ. ನೀರು ಸರಬರಾಜಿಗೆ ಅಡ್ಡಿಯಾದಲ್ಲಿ  ದಾನಿಗಳ ಸಹಕಾರದಿಂದ ಮನೆಗಳಿಗೆ ನೀರು ಸರಬರಾಜು ಮಾಡಲಾಗುವುದು  – ಉದಯಕುಮಾರ ಶೆಟ್ಟಿ,   ಅಧ್ಯಕ್ಷರು,ವಂಡ್ಸೆ ಪಂಚಾಯತ್‌

 

-ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next