Advertisement

ಶುದ್ಧ ನೀರು ಘಟಕದಲ್ಲಿ ಹಣವೂ ವೇಸ್ಟ್‌-ನೀರೂ ವೇಸ್ಟ್‌

08:02 PM Mar 31, 2021 | Team Udayavani |

ತೆಲಸಂಗ: ಗ್ರಾಮೀಣ ಭಾಗದ ಶುದ್ಧ ಕುಡಿಯುವ ನೀರು ಘಟಕಗಳ ಸಮರ್ಪಕ ನಿರ್ವಹಣೆಗಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ತಾಲೂಕಿನ 104 ಘಟಕಗಳನ್ನು ವ್ಯಕ್ತಿಗಳಿಗೆ ಟೆಂಡರ್‌ ನೀಡಿದ್ದು, ಉತ್ತಮ ನಿರ್ವಹಣೆ ನೆಪದಲ್ಲಿ ಜನರ ಹಿತ ಕಾಯುವುದನ್ನು ಮರೆತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

ಈ ಮೊದಲು 1 ರೂ.ಗೆ ಹತ್ತು ಲೀಟರ್‌ ನೀರು ದೊರಕುತ್ತಿದ್ದುದು ಈಗ ಕೇವಲ ನಾಲ್ಕು ಲೀ. ಸಿಗುತ್ತಿದೆ. ಮೊದಲಿದ್ದ ನಾಣ್ಯದ ಪದ್ಧತಿ ತೆಗೆದುಹಾಕಿ ಸ್ಮಾರ್ಟ್‌ ಕಾರ್ಡ್‌ ಪದ್ಧತಿ ಅಳವಡಿಸಿದ್ದಕ್ಕೆ ಜನರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಚಿತವಾಗಿ ನೀಡಬೇಕಾದ ಸ್ಮಾರ್ಟ್‌ ಕಾರ್ಡ್‌ಗೆ ಟೆಂಡರ್‌ದಾರರು ಜನರಿಂದ ನೂರು ರೂ. ವಸೂಲು ಮಾಡುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಜನ ಆಗ್ರಹಿಸಿದ್ದಾರೆ. ಏನೀ ಕಾರ್ಡ್‌ ವ್ಯವಸ್ಥೆ: ಈ ಸ್ಮಾರ್ಟ್‌ಕಾರ್ಡ್‌ನ್ನು ಕೇವಲ ಒಂದು ಘಟಕಕ್ಕೆ ಮಾತ್ರ ಬಳಸಬಹುದು. ಗ್ರಾಮದಲ್ಲಿ 3 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಒಂದು ಘಟಕ ಬಂದ್‌ ಇದ್ದಾಗ ಅಥವಾ ಸರತಿ ಸಾಲು ಹೆಚ್ಚಿದ್ದಾಗ ಇನ್ನೊಂದು ಘಟಕದಿಂದ ನೀರು ಪಡೆಯಲು ಸಾಧ್ಯವಾಗುವಂತೆ ಕಾರ್ಡ್‌ನಲ್ಲಿ ವ್ಯವಸ್ಥೆ ಮಾಡಬೇಕು. ಕಾರ್ಡ್‌ಲ್ಲಿ ಹಣ ಇದ್ದರೆ ಎಟಿಎಂ ತರಹ ಎಲ್ಲೆಡೆ ಬಳಕೆ ಮಾಡಲು ಬರಬೇಕು. ಇಂತಹ ಪದ್ಧತಿ ಜಾರಿಯಾಗಬೇಕು ಇಲ್ಲದಿದ್ದರೆ ಮೊದಲಿನಂತೆ ನಾಣ್ಯ ಹಾಕಿ ನೀರು ಪಡೆಯುವಂತಾಗಬೇಕು ಎಮದು ಒತ್ತಾಯಿಸಿದ್ದಾರೆ.

ಹೊಸ ಪದ್ಧತಿಯಿಂದ ನೀರು ಪೋಲು: ಕಾರ್ಡ್‌ ಬಳಕೆ ಮಾಡಿ ನೀರು ಪಡೆದ ತಕ್ಷಣ ಹಣ ಕಡಿತಗೊಂಡ ಬಗ್ಗೆ ಯಾವೊಂದು ಮೆಸೆಜ್‌ ಕೂಡ ಬರುವುದಿಲ್ಲ. ಎಷ್ಟು ಹಣ ಕಡಿತವಾಯಿತು, ಎಷ್ಟು ಹಣ ಬ್ಯಾಲೆನ್ಸ್‌ ಇದೆ ಎಂಬುದೇ ತಿಳಿಯುವದಿಲ್ಲ. ಅಲ್ಲದೆ ಒಮ್ಮೇ ಕಾರ್ಡ್‌ ಬಳಕೆ ಮಾಡಿದರೆ 5 ರೂ. ಕಡಿತಗೊಂಡು 20 ಲೀಟರ್‌ ನೀರು ಪಡೆಯುವುದನ್ನು ಕಡ್ಡಾಯ ಮಾಡಿದ್ದಾರೆ. ಇಲ್ಲಿ 15 ಲೀಟರ್‌ ಕೊಡ ತಂದ ವ್ಯಕ್ತಿ ಹೆಚ್ಚಿನ ನೀರನ್ನು ಚೆಲ್ಲಬೇಕು, ಅಲ್ಲದೆ ಚೆಲ್ಲಿದ ನೀರಿಗೂ ಹಣ ಕೊಡಬೇಕು. ಇದೆಂತಹ ತಂತ್ರಜ್ಞಾನ ಅಳವಡಿಕೆ ಎಂದು ಜನ ಗರಂ ಆಗಿದ್ದಾರೆ. ನಳದ ನೀರೇ ಗತಿ: ಈ ಮೊದಲು 1 ರೂಗೆ 10 ಲೀ. ನೀರು ದೊರೆಯುತ್ತಿತ್ತು. ಅದನ್ನು ಕಡಿತಗೊಳಿಸಿ 1ರೂ.ಗೆ 4 ಲೀಟರ್‌ ನೀರು ಕೊಡಲು ಆರಂಭಿಸಿದರು. ಕಡಿಮೆ ವೆಚ್ಚದಲ್ಲಿ ಶುದ್ಧ ಕುಡಿವ ನೀರನ್ನು ಗ್ರಾಮೀಣ ಜನರಿಗೆ ಒದಗಿಸುವ ಉದ್ದೇಶದಿಂದ ಆರಂಭಗೊಂಡಿದ್ದ ಸರಕಾರದ ಶುದ್ಧ ಕುಡಿಯುವ ನೀರಿನ ಘಟಕಗಳ ಯೋಜನೆ ಈಗ ದುಬಾರಿಯಾಗಿದೆ. ದರವನ್ನು ಒಮ್ಮೆಲೇ ಡಬಲ್‌ಗಿಂತ ಜಾಸ್ತಿ ಮಾಡಿದ್ದರಿಂದ ಬಡ ರೈತಾಪಿ, ಕೂಲಿ ಜನರು ಬೋರ್‌ವೆಲ್‌ ಹಾಗೂ ನಳದ ನೀರನ್ನು ಕುಡಿಯಲು ಬಳಕೆ ಮಾಡುತ್ತಿದ್ದಾರೆ.

ವ್ಯವಸ್ಥೆ ಸರಿಪಡಿಸಿ: ಒಂದು ಬಾರಿ ಸ್ಮಾರ್ಟ್‌ ಕಾರ್ಡ್‌ ಬಳಸಿದರೆ 20 ಲೀ.ಟರ್‌ ನೀರು ಪಡೆಯಲೇಬೇಕು ಎಂಬುದು ಬದಲಾಗಬೇಕು. ಸ್ಮಾರ್ಟ್‌ಕಾರ್ಡ್‌ ಕಡ್ಡಾಯ ಮಾಡುವುದಾದರೆ ಲೀಟರ್‌ ಲೆಕ್ಕದಲ್ಲಿ ನೀರು ಸಿಗಬೇಕು. ಮತ್ತು ನೀರು ಪಡೆದಷ್ಟೇ ಹಣ ಕಡಿತಗೊಳ್ಳಬೇಕು. ಕಾರ್ಡ್‌ ಬಳಸಿದಾಗಲೆಲ್ಲ ಮೊಬೈಲ್‌ಗೆ ಹಣ ಕಡಿತಗೊಂಡ ಬಗ್ಗೆ ಮೆಸೆಜ್‌ ಬರಬೇಕು. ಒಂದು ಕಾರ್ಡ್‌ ಎಲ್ಲ ಘಟಕಗಳಲ್ಲಿ ಉಪಯೋಗಕ್ಕೆ ಬರುವಂತಿರಬೇಕು. ಕಾರ್ಡ್‌ ವಿತರಣೆಗೆ ಅಕ್ರಮ ಹಣ ಪಡೆಯುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು. ಇದ್ಯಾವುದನ್ನು ಮಾಡದಿದ್ದರೆ ಉಳ್ಳವರಿಗೆ ಮಾತ್ರ ಈ ಘಟಕಗಳು ಎನ್ನುವಂತಾಗುತ್ತದೆ. ಬಡವರಿಗೆ ಮತ್ತೆ ಮೊದಲಿನಂತೆ ನಳದ ನೀರು ಅನಿವಾರ್ಯವಾಗುತ್ತದೆ.

Advertisement

ಜಗದೀಶ ಎಂ. ಖೊಬ್ರಿ

Advertisement

Udayavani is now on Telegram. Click here to join our channel and stay updated with the latest news.

Next