Advertisement

ಹೆಗ್ಗುಂಜೆ, ಕಾಡೂರಿನಲ್ಲಿ ಜಲಕ್ಷಾಮ: ಟ್ಯಾಂಕರ್‌ ನೀರಿಗೆ ಆಗ್ರಹ 

07:00 AM Apr 06, 2018 | Team Udayavani |

ಬ್ರಹ್ಮಾವರ: ಮಳೆಗಾಲ ಪ್ರಾರಂಭಕ್ಕೆ ಇನ್ನೂ ಭರ್ತಿ ಎರಡು ತಿಂಗಳು ಇರುವಾಗಲೇ ಹೆಗ್ಗುಂಜೆ ಮತ್ತು ಕಾಡೂರು ಗ್ರಾ.ಪಂ. ವ್ಯಾಪ್ತಿಯ ಹಲವೆಡೆ ಜಲಕ್ಷಾಮ ಬಾಧಿಸಿದೆ. 
 
ಬಾವಿ,ಬೋರ್‌ವೆಲ್‌ ಬರಿದು 
ಹೆಗ್ಗುಂಜೆ ವ್ಯಾಪ್ತಿಯ ಹಲವು ಬಾವಿ, ಬೋರ್‌ವೆಲ್‌ಗ‌ಳು ನಿರುಪಯುಕ್ತವಾಗಿವೆ. ಅಂತರ್ಜಲ ಮಟ್ಟ ತೀವ್ರ ಇಳಿಕೆಯಿಂದ ಈ ಭಾಗದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಕಳೆದ ವರ್ಷ ಪಂಚಾಯತ್‌ ವತಿಯಿಂದ ವಿತರಣೆ ವಿಳಂಬವಾದಾಗ ಜನಪ್ರತಿನಿಧಿಗಳು ಸ್ವಂತ ಖರ್ಚಿನಲ್ಲಿ ಟ್ಯಾಂಕರ್‌ ನೀರು ಪೂರೈಸಿದ್ದರು. ಈ ಬಾರಿ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನೀರು ಪೂರೈಕೆಯಾಗಿಲ್ಲ.  

Advertisement

ಖಾಸಗಿ ನೀರಿಗೆ ಒಡಂಬಡಿಕೆ 
ಬೇಸಗೆಯಲ್ಲಿ ದಿನಕ್ಕೆ ಒಂದು ಟ್ಯಾಂಕರ್‌ ನೀರು ನೀಡಬೇಕೆನ್ನುವ ಒಡಂಬಡಿಕೆಯಂತೆ ಖಾಸಗಿಯವರಿಗೆ ಬೋರ್‌ವೆಲ್‌ ತೋಡಲು ಅನುಮತಿ ನೀಡಲಾಗಿದೆ. ಸರಕಾರಿ ಬಾವಿ, ಬೋರ್‌ವೆಲ್‌ ಬರಿದಾದ ಹಿನ್ನಲೆಯಲ್ಲಿ ಇದು ಅನಿವಾರ್ಯವಾಗಿದೆ.

ಹನೆಹಳ್ಳಿಗೆ ಪರಿಹಾರ 
ಎರಡು ವರ್ಷಗಳ ಹಿಂದೆ ಈ ಪಂಚಾಯತ್‌ವ್ಯಾಪ್ತಿಯ ಮಾಸ್ತಿನಗರ, ನವಗ್ರಾಮದಲ್ಲಿ ತೀವ್ರ ನೀರಿನ ಸಮಸ್ಯೆ ಇತ್ತು. ಈ ವರ್ಷ ಸಮಸ್ಯೆ ಅಷ್ಟಾಗಿ ಇಲ್ಲ. ಮೂಡುತೋಟ, ಶೇಡಿಗುಡ್ಡೆ, ಕೂರಾಡಿ, ಬಂಡೀಮಠದಲ್ಲಿ ತೆರೆದ ಬಾವಿಗಳಿವೆ. ನೀಲಾವರ ಕಿಂಡಿ ಅಣೆಕಟ್ಟಿನಿಂದ ನೀರನ್ನು ಶುದ್ಧೀಕರಿಸಿ ಪೂರೈಸುವ ಯೋಜನೆ ಜಾರಿಯಾದರೆ ಶಾಶ್ವತ ಪರಿಹಾರ ದೊರೆಯಲಿದೆ.

ಎಲ್ಲೆಲ್ಲಿ ನೀರಿಲ್ಲ? 
ಹೆಗ್ಗುಂಜೆ ವ್ಯಾಪ್ತಿಯ ಹೆಮ್ಮಣಿಕೆ ಗುಡ್ಡೆ, ಹೊಳೆಬಾಗಿಲು, ಮೈರ್ಕೊಮೆ,ನಾಕೋಡಿ ಎಸ್‌ಸಿ ಕಾಲನಿ, ಸುರ್ಗಿಕಟ್ಟೆ, ನೀರ್ಜೆಡ್ಡು, ಚಟ್ಟಾರಿಕಲ್ಲು, ಒಳಮಕ್ಕಿ, ಬಾರಾಳಿ, ಜಾರ್ಕಲ್‌ಗ‌ಳಲ್ಲಿ ನೀರಿಲ್ಲ. ಪರಿಣಾಮ ಜನ ಟ್ಯಾಂಕರ್‌ ನೀರು ಪೂರೈಕೆಗೆ ಬೇಡಿಕೆ ಇಟ್ಟಿದ್ದಾರೆ.  

ಶಾಶ್ವತ ಪರಿಹಾರಕ್ಕೆ ಮೊರೆ 
ಪಂಚಾಯತ್‌ ತುತ್ತತುದಿಯಾದ ಕಾಡಿನಕೊಡೆR ಬಳಿ ಸೀತಾನದಿಗೆ ಅಡ್ಡಲಾಗಿ ಯಾಪಿಕಡು ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಇಲ್ಲಿ ಯತೇತ್ಛ ನೀರಿನ ಸಂಪನ್ಮೂಲವಿದೆ. ಇಲ್ಲಿರುವ ಬಾವಿಯಿಂದ ನೀರನ್ನು ಪೂರೈಸುವ ಶಾಶ್ವತ ಯೋಜನೆ ಕೈಗೊಂಡರೆ ಪಂಚಾಯತ್‌ ವ್ಯಾಪ್ತಿಯ ನೀರಿನ ಸಮಸ್ಯೆ ಬಗೆಹರಿಯುತ್ತದೆ. ವಾರಾಹಿ ನೀರು ಉಡುಪಿ ಕೊಂಡೊಯ್ಯುವ ಯೋಜನೆಯಲ್ಲಿ, ಪೈಪ್‌ಲೈನ್‌ ಹೆಗ್ಗುಂಜೆ ಪಂಚಾಯತ್‌ ವ್ಯಾಪ್ತಿಯಲ್ಲಿ ಹಾದುಹೋಗುವುದರಿಂದ ವಾರಾಹಿ ನೀರನ್ನು ನೀಡಬೇಕೆಂದು ಆಗ್ರಹಿಸಿ ಪಂಚಾಯತ್‌ ನಿರ್ಣಯ ಕೈಗೊಂಡಿದೆ.

Advertisement

ನಡೂರು ತೀವ್ರ ಸಮಸ್ಯೆ
ಕಾಡೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ನಡೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ರೂಪದಲ್ಲಿದೆ. ನಡೂರು, ಬರದಕಲ್ಲು, ಪ್ರಗತಿನಗರ, ರಂಗನಕೆರೆ ಮೊದಲಾದ ಪ್ರದೇಶಗಳಲ್ಲಿ ಅಂತರ್ಜಲ ಪಾತಾಳಕ್ಕಿಳಿದಿದೆ. ಪುಟ್ಟುಗುಡ್ಡೆಯಲ್ಲಿ ಈ ವರ್ಷ ಕೆರೆ ಹೂಳೆತ್ತಿರುವುದರಿಂದ ಸಮಸ್ಯೆ ಸ್ವಲ್ಪ ಕಡಿಮೆ ಇದೆ. ಪ್ರಸ್ತುತ ಅಲೆಯದಲ್ಲಿ ಸೀತಾ ನದಿ ಸಮೀಪದ ಪಂಚಾಯತ್‌ ಬಾವಿಯಿಂದ ನೀರಿನ ಪೂರೈಕೆಯಾಗುತ್ತಿದೆ. ಆದರೆ ನದಿಯಲ್ಲೇ ನೀರಿನ ಪ್ರಮಾಣ ತೀವ್ರ ಕುಸಿಯುತ್ತಿರುವುದರಿಂದ ಆತಂಕ ತಪ್ಪಿದ್ದಲ್ಲ. ಇಲ್ಲೂ ಉಡುಪಿಗೆ ಸಾಗಿಸುವ ವಾರಾಹಿ ನೀರಿನಲ್ಲಿ ಕಾಡೂರಿಗೂ ನೀರು ಹರಿಸಿದರೆ ಶಾಶ್ವತ ಪರಿಹಾರ ದೊರೆಯಲಿದೆ ಎನ್ನುವ ಅಭಿಪ್ರಾಯವಿದೆ. 

ಟ್ಯಾಂಕರ್‌ ನೀರು ಪೂರೈಕೆ 
ತೀವ್ರ ನೀರಿನ ಸಮಸ್ಯೆ ಇರುವ ಜನವಸತಿ ಪ್ರದೇಶಗಳಿಗೆ ಶೀಘ್ರದಲ್ಲೇ ಟ್ಯಾಂಕರ್‌ ನೀರು ಪೂರೈಸಲಾಗುವುದು.
-ಮಹೇಶ್‌ ಕೆ.,  
ಪಿಡಿಒ, ಕಾಡೂರು ಗ್ರಾ.ಪಂ.

ಗುರುವಾರದಿಂದ ನೀರು ವಿತರಣೆ
ತೀವ್ರ ಸಮಸ್ಯೆ ಇರುವಲ್ಲಿ ಟಾಸ್ಕ್ಫೋರ್ಸ್‌ ಯೋಜನೆಯಡಿ ಗುರುವಾರದಿಂದಲೇ ಟ್ಯಾಂಕರ್‌ ಮೂಲಕ ನೀರಿನ ವಿತರಣೆ ಪ್ರಾರಂಭಿಸಲಾಗಿದೆ.    
-ಸುಭಾಸ್‌,  
ಪ್ರಭಾರ ಪಿಡಿಒ, ಹೆಗ್ಗುಂಜೆ

– ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next