Advertisement

ಕುದ್ರು ವಾಸಿಗಳನ್ನು ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ

10:29 PM Apr 07, 2019 | sudhir |

ಮಲ್ಪೆ: ಪ್ರತಿ ಬೇಸಗೆಯ ಕೊನೆಯಲ್ಲಿ ಪ್ರಾರಂಭವಾಗುವ ಕುಡಿಯುವ ನೀರಿನ ಸಮಸ್ಯೆಯ ತೀವ್ರತೆ ಈ ಬಾರಿ ಬೇಸಗೆ ಆರಂಭದಲ್ಲೆ ಶುರುವಾಗಿದೆ. ಈ ಬಾರಿ ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದಲ್ಲೂ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಕಲ್ಯಾಣಪುರ ಕುದ್ರು ಭಾಗದಲ್ಲಿ ಈ ಸಮಸ್ಯೆ ಹೆಚ್ಚುತ್ತಿದ್ದು, ಜನಪ್ರತಿನಿಧಿಗಳು ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುತ್ತಿದ್ದರೂ, ಶಾಶ್ವತ ಪರಿಹಾರ ಇಲ್ಲದ್ದರಿಂದ ಸಮಸ್ಯೆ ಜಟಿಲಗೊಳ್ಳುತ್ತಾ ಹೋಗುತ್ತಿದೆ.

Advertisement

ನೀರಿಗಾಗಿ ಹಾಹಾಕಾರ
ಕಲ್ಯಾಣಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಕುದ್ರುಗಳಿವೆ. ಮೂಡುಕುದ್ರು, ಹೊನ್ನಪ್ಪಕುದ್ರು, ಅರಮನೆ ಹಿತ್ಲು ಮತ್ತು ನಡುಕುದ್ರು. ಸುತ್ತ ನೀರಿನಿಂದಾವೃತಾದ ಪ್ರದೇಶವಾದ್ದರಿಂದ ಇಲ್ಲಿ ವರ್ಷಪೂರ್ತಿ ಕುಡಿಯುವ ನೀರಿನ ಬವಣೆ ತಪ್ಪಿದ್ದಲ್ಲ. ಪ್ರಸ್ತುತ ಮೂಡುಕುದ್ರುವಿನಲ್ಲಿ ಸಮಸ್ಯೆ ಉಲ್ಬಣಿಸುತ್ತಿದ್ದು, ಇಲ್ಲಿನ ಸುಮಾರು 80ಮನೆಗಳು ಇವೆ. ಈ ಭಾಗದ ಎಂಡ್‌ ಪಾಯಿಂಟ್‌ ಕಕ್ಕೆತೋಟದಲ್ಲಿ ಕಳೆದ ಕೆಲವು ದಿನಗಳಿಂದ ನೀರಿನ ಪೂರೈಕೆಯಾಗಿಲ್ಲದ ಕಾರಣ ಇಲ್ಲಿನ ಜನರು ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ಹೊನ್ನಪ್ಪಕುದ್ರುವಿನಲ್ಲಿ ಈ ಹಿಂದಿನ ವರ್ಷ ಪೈಪ್‌ಲೈನ್‌ ವಿಭಾಗವಾಗಿ ಮಾಡಿಕೊಟ್ಟಿದ್ದರಿಂದ ಸಮಸ್ಯೆ ಕಡಿಮೆಯಾಗಿದೆ ಎನ್ನಲಾಗಿದೆ.

ತೆರೆದ ಬಾವಿ ಇದ್ದರೂ…
ಕುದ್ರುವಿನಲ್ಲಿ ಬಾವಿಗಳಿದ್ದರೂ ಉಪ್ಪು ನೀರಿನಿಂದಾಗಿ ಪಯೋಗವಾಗುತ್ತಿಲ್ಲ. ಹಾಗಾಗಿ ವರ್ಷದ 12 ತಿಂಗಳೂ ಪಂಚಾಯತ್‌ ನೀರನ್ನು ಕಾಯಬೇಕಾದ ಪರಿಸ್ಥಿತಿ ಇಲ್ಲಿಯ ಜನರದ್ದು, ಗ್ರಾಮದಲ್ಲಿ ಬಹುತೇಕ ಕೂಲಿ ಕಾರ್ಮಿಕರಿದ್ದು ನೀರಿಗಾಗಿ ಕಿ.ಮೀ. ದೂರ ಸಾಗಬೇಕಾಗಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ತಯಾರಿಸಿ, ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಗ್ರಾಮ ಪಂಚಾಯತ್‌ಗಳು ಬೇಸಗೆಯಲ್ಲಿ ಕುಡಿಯುವ ನೀರು ಪೂರೈಕೆಯ ಬಗ್ಗೆ ಇತರ ಪ್ರದೇಶಕ್ಕಿಂತ ಕುದ್ರು ಪ್ರದೇಶಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂಬ ಆಗ್ರಹ ಗ್ರಾಮಸ್ಥರದ್ದು.

ಇನ್ನು ಕೆಮ್ಮಣ್ಣು ಗ್ರಾಮದ ತಿಮ್ಮಣ್ಣಕುದ್ರು, ಪಡುಕುದ್ರುವಿನ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಅಷೇrನೂ ಗಂಭೀರವಾಗಿಲ್ಲ . ಕಾರಣ ಕೆಮ್ಮಣ್ಣು ಗುಡ್ಯಾಂ ಹಾಗೂ ಇತರ ಭಾಗದಲ್ಲಿ ಬಾವಿಯಲ್ಲಿ ಬೇಕಾದಷ್ಟು ನೀರಿನ ಮೂಲ ಇದೆ. ಆದರೆ ಕಲ್ಯಾಣಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹೆಚ್ಚಿನ ಭಾಗಗಳಲ್ಲಿ ಪಾದೆ ಇರುವುದರಿಂದ ನೀರಿನ ಮೂಲ ಕಡಿಮೆ. ಹಾಗಾಗಿ ವರ್ಷವಿಡೀ ಹೆಚ್ಚು ನೀರಿನ ಸಮಸ್ಯೆ ಎದುರಾಗುತ್ತಿದೆ.

ಸಾಕಾರಗೊಳ್ಳದ ಬಹುಗ್ರಾಮ ಯೋಜನೆ
ಕಲ್ಯಾಣಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಂದಡೆ ಪಾದೆ, ಇನ್ನೊಂದೆಡೆ ಉಪ್ಪು ನೀರು ಹಾಗಾಗಿ ಇಲ್ಲಿಗೆ ಹೊರಗಿನಿಂದಲೇ ನೀರಿನ ಪೂರೈಕೆ ಮಾಡಬೇಕಾದ ಅನಿವಾರ್ಯತೆ ಇದೆ. ಈ ಹಿಂದೆ ಬಹುಗ್ರಾಮ ನೀರಿನ ಯೋಜನೆಗೆ 7ಕೋಟಿ ರೂ.ಗೆ ಎಸ್ಟಿಮೇಟ್‌ ಆಗಿದ್ದು ತಾಂತ್ರಿಕ ಕಾರಣಗಳಿಂದ ಹಿನ್ನಡೆಯಾಗಿತ್ತು. ಇದೀಗ ಮತ್ತೆ ರೀ ಎಸ್ಟಿಮೇಟ್‌ ಮಾಡಿ 15 ಕೋ ರೂ. ಪ್ರಸ್ತಾವನೆ ಹೋಗಿದೆ. ಆದರೆ ಇದುವರೆಗೆ ಅಂತಿಮ ಆದೇಶ ಬಂದಿಲ್ಲ. ಬಹುಗ್ರಾಮ ಯೋಜನೆ ಸಾಕಾರಗೊಂಡರೆ ನೀರಿನ ಸಮಸ್ಯೆ ಬಾಧಿಸದು.

Advertisement

ವಾರದೊಳಗೆ ವ್ಯವಸ್ಥೆ
ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಆಗಿದ್ದು, ತಾಲೂಕು ಪಂಚಾಯತ್‌ಗೆ ಕಳುಹಿಸಲಾಗಿದೆ. ಇನ್ನಷ್ಟೆ ಮಂಜೂರಾಗಬೇಕಾಗಿದೆ. ಈ ವಾರದೊಳಗೆ ಅಗತ್ಯವಿರುವ ಕಡೆಗೆ ಟ್ಯಾಂಕರ್‌ ನೀರನ್ನು ಒದಗಿಸುವ ವ್ಯವಸ್ಥೆ ಆಗಲಿದೆ.
-ಸುರೇಶ್‌, ಪಿಡಿಒ, ಕಲ್ಯಾಣಪುರ ಗ್ರಾ.ಪಂ.

ಮೂರ್‍ನಾಲ್ಕು ಕೊಡಪಾನ ನೀರು
ಮೂಡು ಕುದ್ರುವಿನಲ್ಲಿ ಇದೀಗ ಎರಡು ಮೂರು ದಿನಕ್ಕೆ ಒಮ್ಮೆ ನಳ್ಳಿಯಲ್ಲಿ ನೀರುಬರುತ್ತದೆ. ಕೆಲವು ಮನೆಗಳಿಗೆ ಹೆಚ್ಚೆಂದರೆ ಮೂರು ಅಥವಾ ನಾಲ್ಕು ಕೊಡಪಾನ ಮಾತ್ರ ನೀರು ಸಿಗುತ್ತದೆ. ಸ್ನಾನ ಮತ್ತು ಬಟ್ಟೆ ಒಗೆಯಲು ಬಾವಿಯ ಕೆಂಪು ನೀರನ್ನೆ ಉಪಯೋಗಿಸುತ್ತೇವೆ. ಕುಡಿಯುವ ನೀರಿಗೆ ಶಾಶ್ವತ ವ್ಯವಸ್ಥೆಯನ್ನು ಮಾಡುತ್ತಿಲ್ಲ . ಗ್ರಾ.ಪಂ. ಆಡಳಿತ ಕುದ್ರು ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು.
-ದಿನಕರ್‌ ಮೂಡುಕುದ್ರು, ಸ್ಥಳೀಯರು

ಉಪ್ಪು ನೀರು ಪ್ರದೇಶಕ್ಕೆ ಮೊದಲ ಆದ್ಯತೆ ಕೊಡಿ
ಹಣ ಕೊಟ್ಟು ನಾವು ಟ್ಯಾಂಕರ್‌ ಮೂಲಕ ನೀರು ತರಿಸುತ್ತಿದೇªವೆ. ಇದು ವರೆಗೆ ಸುಮಾರು 15ಸಾವಿರ ರೂಪಾಯಿಯ ನೀರು ತರಿಸಿದ್ದೇವೆ. ಗ್ರಾಮ ಪಂಚಾಯತ್‌ಗಳು ಉಪ್ಪು ನೀರಿನ ಪ್ರದೇಶಕ್ಕೆ ಕುಡಿಯುವ ನೀರಿನ ಬಗ್ಗೆ ಹೆಚ್ಚು ಆದ್ಯತೆಯನ್ನು ಕೊಡಬೇಕು. ಸಾಧ್ಯವಿಲ್ಲವಾದರೆ ಈ ಭಾಗದಲ್ಲಿ ಮನೆಕಟ್ಟಲು ಅನುಮತಿ ಕೊಡಬಾರದು.
-ರಮೇಶ್‌ ಕಿದಿಯೂರು, ಸಂಕೇಶ ದಡ್ಡಿ

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next