Advertisement

ಕುಡಿವ ನೀರಿನ ಸಮಸ್ಯೆ: ಅನುದಾನಕ್ಕೆ ಬೇಡಿಕೆ

02:37 PM Jan 11, 2020 | Suhan S |

ಗಜೇಂದ್ರಗಡ: ಪಟ್ಟಣದ ಅಭಿವೃದ್ಧಿ ಜೊತೆಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರದಂತೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಕಾಯ್ದಿರಿಸುವುದಲ್ಲದೇ ಎಲ್ಲ ವಾರ್ಡ್‌ಗಳಲ್ಲಿ ಸ್ವತ್ಛತೆಗೆ ಆದ್ಯತೆ ನೀಡಿ ಎಂದು ಪುರಸಭೆ ಸದಸ್ಯರು ಸಲಹೆ ನೀಡಿದರು.

Advertisement

ಪಟ್ಟಣದ ಪುರಸಭೆ ಸಭಾಭವನದಲ್ಲಿ ಶುಕ್ರವಾರ ನಡೆದ 2020-21ನೇ ಸಾಲಿನ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಇನ್ನೆರೆಡು ತಿಂಗಳು ಕಳೆದರೆ ಬೇಸಿಗೆ ಆರಂಭವಾಗುತ್ತದೆ. ಆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಪುರಸಭೆಯವರು ಆಯಾ ವಾರ್ಡ್‌ಗಳಲ್ಲಿ ಟ್ಯಾಂಕ್‌ಗಳ ನಿರ್ಮಾಣ ಮಾಡುವುದಲ್ಲದೇ ಬೋರ್‌ ವೆಲ್‌ ಕೊರೆಸಲು ಮುಂದಾಗಬೇಕು.

ಕೆಲ ವಾರ್ಡ್‌ಗಳಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ರಸ್ತೆ ನಿರ್ಮಾಣ ಮಾಡಿಲ್ಲ. ಆ ವಾರ್ಡ್‌ನ ನಿವಾಸಿಗಳಿಗೆ ಸಮರ್ಪಕ ರಸ್ತೆ ಇಲ್ಲದ ಪರಿಣಾಮ ತೀವ್ರ ತೊಂದರೆಅನುಭವಿಸುತ್ತಿದ್ದಾರೆ. ಹೀಗಾಗಿ ಬಜೆಟ್‌ ನಲ್ಲಿ ಸಿಮೆಂಟ್‌ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಕಾಯ್ದಿರಿಸಬೇಕಿದೆ ಎಂದು ಒತ್ತಾಯಿಸಿದರು.

ಗಜೇಂದ್ರಗಡಕ್ಕೆ ಮುಕುಟ ಪಾಯವಾಗಿರುವ ಪುರಸಭೆಯ ಉದ್ಯಾನವನ ಸೂಕ್ತ ನಿರ್ವಹಣೆ ಇಲ್ಲದೇ ಅಂದ ಕಳೆದುಕೊಂಡಿದೆ. ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಉದ್ಯಾನವನ ನಿರ್ವಹಣೆಗೆ ವಿಶೇಷ ಅನುದಾನ ನೀಡುವ ಮೂಲಕ ಗಜೇಂದ್ರಗಡದ ಮಾದರಿ ಉದ್ಯಾನವನವನ್ನಾಗಿ ಮಾಡಲು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ ಎಂದು ಪುರಸಭೆ ಸದಸ್ಯರು ಆಗ್ರಹಿಸಿದರು.

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣದ ಸುರಕ್ಷತೆಯ ಜೊತೆಗೆ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದಪ್ರಮುಖ ಬೀದಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮತ್ತು ಗಜೇಂದ್ರಗಡದಲ್ಲಿ ಕಾರ್ಯನಿರತ ಪತ್ರಕರ್ತರ ಸಮುದಾಯ ಭವನ ನಿರ್ಮಾಣಕ್ಕೆ ಪುರಸಭೆ ಮುಂದಾಗಬೇಕು. ಪಟ್ಟಣದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡಲು ಮುಂದಾಗಬೇಕು. ಸಾರ್ವಜನಿಕರ ಶೌಚಾಲಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಪುರಸಭೆ ಸದಸ್ಯರು ಸಲಹೆ ನೀಡಿದರು.

Advertisement

ಈ ವೇಳೆ ಮುಖ್ಯಾಧಿಕಾರಿ ಮಹಾಂತೇಶ ಬಿಳಗಿ ಅವರು ಎಲ್ಲ ಸಲಹೆಗಳನ್ನು ಸ್ವೀಕರಿಸಿ, ಗಜೇಂದ್ರಗಡ ಅಭಿವೃದ್ಧಿಗೆ ಎಲ್ಲ ಸಲಹೆಗಳನ್ನು ಸಮಾಲೋಚಿಸಿ ಬಜೆಟ್‌ ಸಿದ್ಧಪಡಿಸಲಾಗುವುದು ಎಂದರು. ಪುರಸಭೆ ಸದಸ್ಯರಾದ ರಾಜು ಸಾಂಗ್ಲಿಕಾರ, ಕನಕಪ್ಪ ಅರಳಿಗಿಡದ, ಯು. ಆರ್‌. ಚನ್ನಮ್ಮನವರ, ಮುದಿಯಪ್ಪ ಮುಧೋಳ, ರುಪೇಶ ರಾಠೊಡ, ಸುಭಾಸ ಮ್ಯಾಗೇರಿ, ವೀರಪ್ಪ ಪಟ್ಟಣಶೆಟ್ಟಿ, ಶರಣಪ್ಪಉಪ್ಪಿನಬೆಟಗೇರಿ, ಮೂಕಪ್ಪ ನಿಡಗುಂದಿ, ಯಮನಪ್ಪ ತಿರಕೋಜಿ, ಉಮಾ ಮ್ಯಾಕಲ್‌, ಲೀಲಾವತಿ ಸವಣೂರ, ಕೌಸರಬಾನು ಹುನಗುಂದ, ಸುಜಾತಾಬಾಯಿ ಶಿಂಗ್ರಿ, ಪಿ.ಎನ್‌. ದೊಡ್ಡಮನಿ, ಜಿ.ಎನ್‌. ಕಾಳೆ, ಆರ್‌.ಎಸ್‌. ಬೋಯಿಟೆ, ಎಸ್‌.ಜಿ. ಕಡೇತೋಟದ, ರಿಯಾಜ್‌ ಒಂಟಿ, ಎಂ.ಡಿ. ದೊಡ್ಡಮನಿ, ಅಜ್ಜಪ್ಪ ನೀಲಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next