ಹುಮನಾಬಾದ್: ಕುಡಿಯುವ ನೀರು ಸಮಸ್ಯೆ ಬಗೆಹರಿಸದ ಹಿನ್ನೆಲೆಯಲ್ಲಿ ನಿಂಬೂರ್ ಗ್ರಾಮಸ್ಥರು ಗ್ರಾಮದಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಸದಸ್ಯರನ್ನು ಬಸವಣ್ಣ ದೇವಸ್ಥಾನದಲ್ಲಿ ಕೂಡಿ ಹಾಕಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಸೀತಾಳಗೇರಾ ಗ್ರಾಮ ಪಂಚಾಯತ್ ಜೆ.ಇ ರಾಜು, ಪಿಡಿಓ ಸವೀತಾ, ಸೀತಾಳಗೇರಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಕಸ್ತೂರಬಾಯಿ ಸೇರಿದಂತೆ ಇತರೆ ನಾಲ್ಕು ಜನ ಗ್ರಾಮ ಪಂಚಾಯತ್ ಸದಸ್ಯರನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿದ ಘಟನೆ ನಡೆದಿದ್ದು, ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಒಂದು ತಿಂಗಳಿಂದ ನಿಂಬೂರ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಈ ಕುರಿತು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಸೀತಾಳಗೇರ ಗ್ರಾಮ ಪಂಚಾಯತ್ ಗೆ ನಿಂಬೂರ್ ಗ್ರಾಮಸ್ಥರು ಮುತ್ತಿಗೆ ಹಾಕಿ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆತಂದಿದ್ದಾರೆ.ಈ ವೇಳೆ ನಿಂಬೂರ್ ಗ್ರಾಮದ ಬಸವಣ್ಣ ದೇವಸ್ಥಾನದಲ್ಲಿ ಕೂಡಿ ಹಾಕಿದ್ದಾರೆ. ಸ್ಥಳಕ್ಕೆ ಹಳ್ಳಿಖೇಡ (ಬಿ) ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ.