Advertisement
ಹೆಮ್ಮಾಡಿ ಗ್ರಾಮದಲ್ಲಿರುವ ಶೇ. 50 ಕ್ಕೂ ಹೆಚ್ಚು ಮನೆಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಇಲ್ಲಿನ ಹುಣ್ಸೆಬೆಟ್ಟು, ಪತ್ತಿಬೆಟ್ಟು, ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ ಕೇರಿ, ಕಟ್ಟು, ಕನ್ನಡಕುದ್ರು, ಮೂವತ್ತುಮುಡಿ, ಬುಗುರಿಕಡು, ಹೊಸ್ಕಳಿ ಸಹಿತ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಇಲ್ಲಿನ 150ಕ್ಕೂ ಹೆಚ್ಚು ಮನೆಗಳಲ್ಲಿ ಕುಡಿಯಲು ನೀರಿಲ್ಲ. ಬಾವಿಯಿದ್ದರೂ, ಉಪ್ಪು ನೀರು. ಪಂಚಾಯತ್‌ನಿಂದ ಬೋರ್‌ವೆಲ್ ನೀರು ಪೂರೈಸುತ್ತಿದ್ದರೂ, ಅದರಲ್ಲಿ ಕೂಡ ಉಪ್ಪು ನೀರಿನ ಅಂಶವಿದೆ ಎನ್ನುವುದಾಗಿ ಗ್ರಾಮಸ್ಥರು ದೂರಿದ್ದಾರೆ.
ಇಲ್ಲಿನ ಜಾನುವಾರು, ಸಾಕು ಪ್ರಾಣಿಗಳು ಕೂಡ ಇಲ್ಲಿನ ಮನೆಗಳ ಬಾವಿ ನೀರು, ಪಂಚಾಯತ್‌ನಿಂದ ಬರುವ ನಳ್ಳಿ ನೀರನ್ನು ಕುಡಿಯಲು ಹಿಂದೇಟು ಹಾಕುತ್ತಿವೆ. ನೀರು ಕೆಂಪು ಬಣ್ಣಕ್ಕೆ ತಿರುಗಿರುವುದರಿಂದ ದನ, ನಾಯಿಗಳು ಕೂಡ ನೀರು ಕುಡಿಯುತ್ತಿಲ್ಲ ಎನ್ನುವುದಾಗಿ ಊರವರು ತಿಳಿಸುತ್ತಾರೆ. 4ರಲ್ಲಿ 1 ಬೋರ್‌ವೆಲ್ ಮಾತ್ರ ಬಳಕೆ…!
ಹೆಮ್ಮಾಡಿ ಪಂಚಾಯತ್ ವತಿಯಿಂದ ಕಳೆದೊಂದು ವರ್ಷದಲ್ಲಿ 4 ಬೋರ್‌ವೆಲ್‌ಗಳನ್ನು ಕೊರೆಯಿಸಿದ್ದರೂ, ಕೂಡ ಈಗ ಬಳಕೆಯಾಗುತ್ತಿರುವುದು ಕೇವಲ 1 ಬೋರ್‌ವೆಲ್ ನೀರು ಮಾತ್ರ. ಅದರ ನೀರು ಕೂಡ ಈಗ ಕುಡಿಯಲು ಸಾಧ್ಯವಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಬಾಕಿ 3 ಬೋರ್‌ವೆಲ್‌ಗಳಲ್ಲಿ ನೀರಿಲ್ಲ. ಇದ್ದರೂ ಉಪ್ಪು ನೀರು.
Related Articles
ಹೆಮ್ಮಾಡಿ ಗ್ರಾಮದಲ್ಲಿ ಎಲ್ಲಿ ಬೋರ್‌ವೆಲ್ ಕೊರೆಯಿಸಿದರೂ ನೀರು ಸಿಕ್ಕರೂ ಉಪ್ಪು ನೀರಿನ ಅಂಶವೇ ಜಾಸ್ತಿಯಿರುತ್ತದೆ. ಬಾವಿ ತೋಡಿದರೆ ಸ್ವಲ್ಪ ದಿನಗಳವರೆಗೆ ಆದರೂ ಸಿಹಿ ನೀರು ಸಿಗಬಹುದು. ಇಲ್ಲದಿದ್ದರೆ ಸಮೀಪದ ಕಟ್‌ಬೆಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಬೋರ್‌ವೆಲ್ ಅಥವಾ ಬಾವಿ ತೋಡಿ ಅಲ್ಲಿಂದ ಇಲ್ಲಿಗೆ ನೀರು ಪೂರೈಕೆ ಮಾಡಲಿ ಎನ್ನುವುದಾಗಿ ಗ್ರಾಮಸ್ಥರು ಸಲಹೆ ನೀಡುತ್ತಾರೆ.
Advertisement
ಕೂದಲು ಉದುರುತ್ತದೆಪಂಚಾಯತ್ನಿಂದ ಕೊಡುವ ನೀರಿನಲ್ಲಿ ಸ್ನಾನ ಮಾಡಿದರೆ ಕೂದಲೆಲ್ಲ ಉದುರಿ ಹೋಗುತ್ತದೆ. ಇದರಿಂದ ಈ ನೀರನ್ನು ಕುಡಿಯುವುದು ಬಿಡಿ, ಸ್ನಾನ ಮಾಡಲು ಕೂಡ ಬಳಸುವುದು ಕಷ್ಟ. ಚುನಾವಣೆ ಮುಗಿದ ಬಳಿಕ ನೀರಿನ ಸಮಸ್ಯೆಗೆ ಪರಿಹಾರ ಮಾಡಲಾಗುವುದು ಎಂದು ಆಗ ಶಾಸಕರು ಹೇಳಿದ್ದರು. ಈಗಲಾದರೂ ಕುಡ್ಸೆಂಪು ನೀರಾವರಿ ಯೋಜನೆ ಅಥವಾ ಸೌಕೂರು ಏತ ನೀರಾವರಿ ಯೋಜನೆಯ ನೀರನ್ನು ತರುವಲ್ಲಿ ಗಮನಹರಿಸಲಿ ಎನ್ನುವುದಾಗಿ ಹುಣ್ಸೆಬೆಟ್ಟಿನ ದೀಪಕ್ ಆಗ್ರಹಿಸಿದ್ದಾರೆ.
ಇಲ್ಲಿರುವ ಕೆಲವೇ ಕೆಲವು ಬಾವಿಗಳ ನೀರು ಮಾತ್ರ ಕುಡಿಯುಲು ಯೋಗ್ಯವಾಗಿದ್ದು, ಅದಕ್ಕೆ ಭಾರೀ ಬೇಡಿಕೆ ಆರಂಭವಾಗಿದೆ. ಸುತ್ತಮುತ್ತಲಿರುವ ಮನೆಯವರು ಅದೇ ಬಾವಿಯ ನೀರನ್ನು ಉಪಯೋಗಿಸುತ್ತಿದ್ದಾರೆ. ನಮ್ಮಲ್ಲಿರುವ ಬಾವಿ ನೀರು ಸದ್ಯಕ್ಕೆ ಬಳಕೆಗೆ ಯೋಗ್ಯವಾಗಿದ್ದು, ಆಸುಪಾಸಿನ ಜನ ಇಲ್ಲಿಗೆ ಬರುತ್ತಾರೆ. ಕೆಲವರಂತೂ ದೂರದಿಂದಲೇ ನೀರು ತರಲು ಬರುತ್ತಿದ್ದಾರೆ ಎನ್ನುತ್ತಾರೆ ಮೂವತ್ತುಮುಡಿ ಹೇಮಾಪುರ ಮಠದ ಬಳಿಯ ನಿವಾಸಿ ಗೋಪಾಲ ಪೂಜಾರಿ. 990 ಮನೆಗಳು
ಹೆಮ್ಮಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 990 ಮನೆಗಳಿದ್ದು, ಒಟ್ಟು 4,326 ಜನರಿದ್ದಾರೆ. 610 ಮನೆಗಳಲ್ಲಿ ಸ್ವಂತ ಬಾವಿಯಿದ್ದರೂ, ಕೆಲವೇ ಕೆಲವು ಬಾವಿಗಳು ಮಾತ್ರ ಬಳಕೆಗೆ ಯೋಗ್ಯವಾಗಿದೆ. ಹೆಮ್ಮಾಡಿ ಗ್ರಾಮದಲ್ಲಿ 13 ಬೋರ್‌ವೆಲ್‌ಗಳಿದ್ದು, ಅದರಲ್ಲಿ ಒಂದು ಮಾತ್ರ ಪಂ. ವತಿಯಿಂದ ನೀರು ಪೂರೈಸಲಾಗುತ್ತಿದೆ. ಈ ಪೈಕಿ ಕೆಲವು ಬೋರ್‌ವೆಲ್‌ಗಳು ಕೆಲವು ಕಾಲನಿ,
ವಾರ್ಡ್‌ಗಳ ಜನ ಬಳಸುತ್ತಿದ್ದಾರೆ. ಪುರಸಭೆ ನೀರು ಪೂರೈಕೆಗೆ ಪತ್ರ
ಹೆಮ್ಮಾಡಿ ಪಂಚಾಯತ್ ವ್ಯಾಪ್ತಿಯಿಡೀ ನೀರಿನ ಸಮಸ್ಯೆ ಗಂಭೀರವಾಗುತ್ತಿದ್ದು, ಇಲ್ಲಿನ ನೀರಿನ ಮೂಲಗಳಲ್ಲಿ ಉಪ್ಪು ನೀರೇ ಹೆಚ್ಚಿದೆ. ಕಳೆದ 2 ವರ್ಷಗಳಿಂದ ಟ್ಯಾಂಕರ್ ನೀರು ಪೂರೈಸಲಾಗಿದೆ. ಇದಕ್ಕಾಗಿ ಶಾಶ್ವತ ಪರಿಹಾರ ಎನ್ನುವಂತೆ ಕುಂದಾಪುರ ಪುರಸಭೆಗೆ ಪೂರೈಸುವ ಕುಡ್ಸೆಂಪು ಕುಡಿಯುವ ನೀರನ್ನು ಅಲ್ಲಿಂದ ಸುಮಾರು 7 ಕಿ.ಮೀ. ದೂರದ ಇಲ್ಲಿಗೆ ಪೂರೈಸುವ ಸಂಬಂಧ ಸಚಿವರು, ಶಾಸಕರು, ಎಸಿ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಸ್ಪಂದನೆ ಸಿಗುವ ನಿರೀಕ್ಷೆಯಲ್ಲಿದ್ದೇವೆ.
– ಜ್ಯೋತಿ ಹರೀಶ್ ಭಂಡಾರಿ, ಗ್ರಾ.ಪಂ. ಅಧ್ಯಕ್ಷರು -ಮಂಜು ಬಿಲ್ಲವ, ಗ್ರಾ.ಪಂ. ಪಿಡಿಒ ಕೂಡಲೇ ಪರಿಶೀಲನೆ
ಪುರಸಭೆ ನೀರನ್ನು ಹೆಮ್ಮಾಡಿ ಗ್ರಾ.ಪಂ.ನ ಗ್ರಾಮಸ್ಥರಿಗೆ ಪೂರೈಸುವ ಸಂಬಂಧ ಪರಿಶೀಲನೆ ನಡೆಸಿ, ಸಂಬಂಧಪಟ್ಟ ಮೇಲಧಿಕಾರಿಗಳು ಹಾಗೂ ಜನಪ್ರನಿಧಿಗಳಿಗೆ ವರದಿ ಸಲ್ಲಿಸಿ, ಪರಿಹಾರ ಕಂಡುಕೊಳ್ಳಲಾಗುವುದು. ಆದಷ್ಟು ಬೇಗ ಅಲ್ಲಿನ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು.
-ಡಾ| ನಾಗಭೂಷಣ ಉಡುಪ, ಕಾರ್ಯನಿರ್ವಹಣಾಧಿಕಾರಿ ಕುಂದಾಪುರ ತಾ.ಪಂ.