Advertisement

ಜಿಲ್ಲಾಡಳಿತದ ನಿರ್ಲಕ್ಷ್ಯ: ಬಿಜೆಪಿ

07:53 AM May 11, 2019 | mahesh |

ಉಡುಪಿ: ಜಿಲ್ಲಾಡಳಿತಕ್ಕೆ ಇಚ್ಛಾಶಕ್ತಿ ಇಲ್ಲದ ಕಾರಣ ಉಡುಪಿ ನಗರ ಸಹಿತ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಆರೋಪಿಸಿದ್ದಾರೆ.

Advertisement

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿಯಲ್ಲಿಯೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ ಜಿಲ್ಲಾಡಳಿತ ಈಗ ಎಚ್ಚೆತ್ತುಕೊಂಡಿದೆ. ಜಿಲ್ಲಾಧಿಕಾರಿ ಮತ್ತು ಪೌರಾಯುಕ್ತರು ನಿರ್ಲಕ್ಷ್ಯ ವಹಿಸಿದ್ದಾರೆ. ನಗರಸಭೆ ಚುನಾವಣೆ ಯಲ್ಲಿ ಒಟ್ಟು 35 ಸ್ಥಾನಗಳಲ್ಲಿ 34ರಲ್ಲಿ ಬಿಜೆಪಿ ಗೆದ್ದಿದೆ. ಪ್ರಮಾಣ ವಚನ ಸ್ವೀಕರಿಸಲು ಕೂಡ ಸಾಧ್ಯವಾಗಿಲ್ಲ ದಿದ್ದರೂ ಆಯ್ಕೆ ಯಾದ ಅಭ್ಯರ್ಥಿಗಳು ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಶಾಸಕರು ಹಿಂದೆಯೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಬಜೆ ಅಣೆಕಟ್ಟು ಪ್ರದೇಶದಲ್ಲಿ ಸ್ವತಃ ಶಾಸಕರೇ ಶ್ರಮದಾನದಲ್ಲಿ ಪಾಲ್ಗೊಂಡಿದ್ದಾರೆ. ಒಂದು ವೇಳೆ ಜನಪ್ರತಿನಿಧಿಗಳ ಆಡಳಿತ ಇರುತ್ತಿದ್ದರೆ ಸಮಸ್ಯೆ ಇಷ್ಟು ಉಲ್ಬಣಿಸುತ್ತಿರಲಿಲ್ಲ. ಈಗನ ಸಮಸ್ಯೆಗೆ ನಗರಸಭೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತವೇ ಹೊಣೆ ಎಂದು ಆರೋಪಿಸಿದರು.

ಮತ್ತೆ ರಕ್ಷಣಾ ಸಚಿವರ ಭೇಟಿ
ಸುವರ್ಣ ತ್ರಿಭುಜ ಬೋಟ್ ಅವಶೇಷಗಳನ್ನು ಮೇಲೆತ್ತಬೇಕೆಂದು ಒತ್ತಾಯಿಸಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಬಳಿ ತೆರಳಲು ನಿರ್ಧರಿಸಲಾಗಿದೆ. ಈ ಹಿಂದೆ ರಕ್ಷಣಾ ಸಚಿವರು ಮೀನುಗಾರರ ಜತೆ ಮಾತನಾಡಿ ನೌಕಾದಳಕ್ಕೆ ಆದೇಶ ನೀಡಿಅವಶೇಷ ಪತ್ತೆ ಮಾಡಿಸಿದ್ದಾರೆ. ಮೀನುಗಾರರ ಮನೆಗೂ ಭೇಟಿ ನೀಡಿ ಸಾಂತ್ವನಹೇಳಿದ್ದಾರೆ. ಈಗ ಮತ್ತೂಮ್ಮೆ ಮೇ14ಕ್ಕೆ ಹೊಸದಿಲ್ಲಿಗೆ ತೆರಳಲು ತೀರ್ಮಾನಿಸಲಾಗಿದೆ. ಅವರ ಲಭ್ಯತೆಯನ್ನು ತಿಳಿದುಕೊಂಡು ದಿನಾಂಕ ಅಂತಿಮಗೊಳಿಸಲಾಗುವುದು. ಮೀನುಗಾರ ಕುಟುಂಬಗಳಿಗೆ ತಲಾ 1 ಕೋ.ರೂ.ಪರಿಹಾರ ನೀಡಿದರೂ ಸಾಲದು. ಹಾಗಾಗಿ ಗರಿಷ್ಠ ಪರಿಹಾರ ನೀಡಬೇಕು ಎಂಬುದಾಗಿಯೂ ಒತ್ತಾಯಿಸಲಾಗುವುದು ಎಂದರು.

ರೆಸಾರ್ಟ್‌ನಿಂದ ರೆಸಾರ್ಟ್‌ಗೆ
ರಾಜ್ಯ ಬರಗಾಲದಿಂದ ತತ್ತರಿಸಿದ್ದರೆ ಸಿಎಂ ರೆಸಾರ್ಟ್‌ಗೆ ಹೋಗುತ್ತಿದ್ದಾರೆ. ಆರೋಗ್ಯ ದೃಷ್ಟಿಯಿಂದ ಚಿಕಿತ್ಸೆ ಪಡೆದು ಕೊಂಡರೆ ತೊಂದರೆ ಇಲ್ಲ. ಆದರೆ ಜನರ ಸಮಸ್ಯೆಗೂ ಸ್ಪಂದಿಸಬೇಕು ಎಂದರು.

ಮರಳು ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಮಳೆ ಬಂದರೆ ಮರಳು ತೆಗೆಯುವಂತೆಯೇ ಇಲ್ಲ. ಚುನಾವಣ ನೀತಿ ಸಂಹಿತೆ ಕಾರಣ ನೀಡಿ ಜಿ.ಪಂ. ಅಧ್ಯಕ್ಷರ ಕಚೇರಿಯನ್ನು ತೆರೆ ಯಲು ಕೂಡ ಜಿಲ್ಲಾಧಿಕಾರಿ ಅವಕಾಶ ನೀಡುತ್ತಿಲ್ಲ. ಅವರ ಕಾರನ್ನು ಕೂಡ ವಾಪಸ್‌ ಮಾಡಿಲ್ಲ. ಸಂಸದರ ಕಚೇರಿಗೂ ಬೀಗ ಹಾಕಲಾಗಿದೆ. ಆಯುಷ್ಮಾನ್‌ ಭಾರತ್‌ ಸೌಲಭ್ಯವನ್ನೂಜನರಿಗೆ ಸಿಗದಂತೆ ಮಾಡ ಲಾಗಿದೆ. ಜಿ.ಪಂ. ಕಚೇರಿ ಮುಚ್ಚಿರುವುದ ರಿಂದ ತುರ್ತು ಅರ್ಜಿ ವಿಲೇ ವಾರಿಯೂ ಸಾಧ್ಯವಾಗುತ್ತಿಲ್ಲ. ಉಡುಪಿ ನಗರ ಸೇರಿದಂತೆ 19 ಗ್ರಾಮಗಳನ್ನು ಸೇರಿಸಿ ಮಾಸ್ಟರ್‌ ಪ್ಲಾನ್‌ ಮಾಡಲು ಡಿಸಿ ಹೊರಟಿದ್ದಾರೆ. ಇರುವ ಪ್ರದೇಶಗಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಅವಕಾಶ ಕೊಡಲಿ ಎಂದರು.

Advertisement

ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ ಗಣೇಶ್‌, ಪ್ರ.ಕಾರ್ಯದರ್ಶಿಗಳಾದ ಯಶ್‌ಪಾಲ್ ಸುವರ್ಣ, ಸಂಧ್ಯಾ ರಮೇಶ್‌, ಕುತ್ಯಾರು ನವೀನ್‌ ಶೆಟ್ಟಿ, ಮುಖಂಡರಾದ ಸುರೇಶ್‌ ಶೆಟ್ಟಿ ಗುರ್ಮೆ, ಶಿವಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next