Advertisement

ಕರಾವಳಿಯಲ್ಲೂ ಕುಡಿಯುವ ನೀರಿಗೆ ಉಂಟಾಗಿದೆ ಹಾಹಾಕಾರ

04:42 PM May 20, 2019 | pallavi |

ಭಟ್ಕಳ: ಸಮುದ್ರದಾ ತಡಿಯಲ್ಲಿ ಮನೆಯ ಮಾಡಿ ನೀರಿಲ್ಲವೆಂದರೆಂತಯ್ಯ ಎನ್ನುವಂತಾಗಿದೆ ಕರಾವಳಿಗರ ಪರಿಸ್ಥಿತಿ. ಕರಾವಳಿ ಭಾಗದಲ್ಲಿ ಬೋರ್ಗೆರೆವ ಸಮುದ್ರವಿದೆ. ಮಳೆಗಾಲದಲ್ಲಿ ಅತ್ಯಂತ ತುಂಬಿ ತುಳುಕುವ ನದಿ, ಹಳ್ಳಗಳಿವೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೇ ನೀರನ್ನು ಹಿಡಿದಿಟ್ಟುಕೊಳ್ಳಲು ಯಾವುದೇ ಯೋಜನೆಯಿಲ್ಲದೇ ಲಕ್ಷಾಂತರ ಜನರು ಹನಿ ನೀರಿಗಾಗಿ ಪರಿತಪಿಸುವ ಕಾಲ ಬಂದೊದಗಿದೆ.

Advertisement

ಕರಾವಳಿಯಲ್ಲಿ ಹಿಂದೆಂದೂ ಕಾಣದ ಬರ ಇಂದು ಕಂಡು ಬಂದಿದ್ದು ಕುಡಿಯಲು ಹನಿ ನೀರಿಗೂ ತತ್ವಾರ ಎನ್ನುವಂತಾಗಿದೆ. ಗಿಡ ಮರಗಳು ಬಾಡಿ ಹೋಗಿದ್ದು ಇನ್ನೇನು ಒಣಗಿ ಹೋಗುವುದೊಂದೇ ಬಾಕಿ ಇದೆ. ಇನ್ನು 15 ದಿನ ಮಳೆಯಾಗದೇ ಇದ್ದರೆ ಇರುವ ಅಡಕೆ ತೋಟದಲ್ಲಿ ಅರ್ಧದಷ್ಟು ಮರಗಳ ಸುಳಿಗಳು ಒಣಗಿ ಹೋಗುವುದರಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ. ಮಕ್ಕಳಂತೆ ಸಾಕಿದ ಮರಗಿಡಗಳು ಒಣಗಿ ಹೋಗುವುನ್ನು ಕಂಡು ಮನೆಯಲ್ಲಿ ಊಟ ಸೇರದ ಪರಿಸ್ಥಿತಿಗೆ ರೈತ ತಲುಪಿದ್ದಾನೆ.

ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚುತ್ತಿದ್ದು ಗರಿಷ್ಠ ತಾಪಮಾನ ಬಯಲು ಸೀಮೆಯಂತೆ 33 ಡಿಗ್ರಿ 34 ಡಿಗ್ರಿಗೆ ತಲುಪಿರುವುದು ಜನತೆ ಮನೆಯಿಂದ ಹೊರಕ್ಕೆ ಬರುವುದೇ ಕಷ್ಟಕರವಾಗಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಮರಗಳ ಮಾರಣ ಹೋಮ ಮಾಡಿರುವುದು ಬಿಸಿಲ ಝಳ ಇನ್ನಷ್ಟು ಹೆಚ್ಚಲು ಕಾರಣವಾಗಿದೆ.

ತಾಲೂಕಿನ 16 ಗ್ರಾಪಂಚ ವ್ಯಾಪ್ತಿಯಲ್ಲಿ 11 ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಬರ ಉಂಟಾಗಿದ್ದು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ದಿನಾಲೂ ಸುಮಾರು 16 ಹಳ್ಳಿಗಳಲ್ಲಿ 60 ಮಜಿರೆಗಳಿಗೆ 4.39 ಲಕ್ಷ ಲೀಟರ್‌ ನೀರನ್ನು ಸರಬರಾಜು ಮಾಡಲಾಗುತ್ತಿದೆ. ದಿನಕ್ಕೆರಡು ಬಾರಿ ನೀರು ಸರಬರಾಜು ಮಾಡಲಾಗುತ್ತಿದ್ದು ಇನ್ನೂ ಕೂಡಾ ಬೇಡಿಕೆ ಬಂದರೆ ನೀರು ಪೂರೈಸಲು ಹಣದ ಕೊರತೆ ಇಲ್ಲ ಎನ್ನುತ್ತವೆ ತಹಶೀಲ್ದಾರ್‌ ಕಚೇರಿ ಮೂಲಗಳು.

ಪ್ರತಿ ವರ್ಷವೂ ಕಡವಿನಕಟ್ಟೆ ಡ್ಯಾಂನಲ್ಲಿ ನೀರು ಬರಿದಾಗಿ ಕೊನೆಯಲ್ಲಿ ಇದ್ದ ಅಲ್ಪಸ್ವಲ್ಪ ನೀರನ್ನೇ ಸರಬರಾಜು ಮಾಡಲಾಗುತ್ತಿದೆ. ಈ ಬಾರಿಯೂ ಅದೇ ಪರಿಸ್ಥಿತಿ ಇದ್ದು ಭಟ್ಕಳ ನಗರ, ಶಿರಾಲಿ, ಜಾಲಿ ಮತ್ತು ಮಾವಿನಕುರ್ವೆ ನೀರು ಸರಬರಾಜು ಯೋಜನೆಗೆ ಇದ್ದ ಒಂದೇ ಜಲಮೂಲವೂ ಬತ್ತಿ ಬರಡಾಗಿದೆ.

Advertisement

ಡ್ಯಾಂ ಮಧ್ಯದಲ್ಲಿ ಸಬ್‌ಮರ್ಸಿಬಲ್ ಪಂಪ್‌ ಅಳವಡಿಸಿ ನೀರೆತ್ತುವ ಯೋಜನೆಯೊಂದು ರೂಪುಗೊಳ್ಳುತ್ತಿದ್ದು ಕಾರ್ಯಗತಗೊಂಡರೆ ನದಿಯ ಸಂಪೂರ್ಣ ನೀರು ಖಾಲಿಯಾಗಲು ಹೆಚ್ಚು ದಿನ ಬೇಕಾಗುವುದಿಲ್ಲ.

ನಗರದಲ್ಲಿ ರಾಬಿತಾ ಸೊಸೈಟಿ ಹಾಗೂ ಮುಸ್ಲಿಂ ಯುತ್‌ ಫೆಡರೇಶನ್‌ ಕೂಡಾ ಉಚಿತವಾಗಿ ನೀರು ಸರಬರಾಜು ಮಾಡುತ್ತಿದೆ. ಕಾರ್ಯಕರ್ತರು ಸರದಿ ಮೇಲೆ ನೀರು ಬಿಡಲು ಬರುತ್ತಿರುವುದು ಸಮಾಜ ಸೇವೆಯ ಧ್ಯೋತಕವಾಗಿದೆ. ಬೇಡಿಕೆಯಿರುವಲ್ಲಿ ನೀರು ಸರಬರಾಜು ಮಾಡುತ್ತಿರುವುದು ಶ್ಲಾಘನೀಯ.

ತಾಲೂಕಿನಲ್ಲಿ ಬೇಡಿಕೆ ಬಂದಲ್ಲಿಗೆ ನೀರಿನ ಸರಬರಾಜು ಸರಿಯಾಗಿ ಮಾಡುತ್ತಿದ್ದು ಹೊಸದಾಗಿ ಬೇಡಿಕೆ ಬಂದರೆ ತಕ್ಷಣ ನೀರು ಸರಬರಾಜು ಮಾಡಲು ತಾಲೂಕಾಡಳಿತ ಸನ್ನದ್ಧವಾಗಿದೆ. ಹಲವು ಕಡೆಗಳಲ್ಲಿ ಜಲಮೂಲ ಕಂಡು ಕೊಂಡಿದ್ದು ಅಲ್ಲಲ್ಲಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಡವಿನಕಟ್ಟಾ ಡ್ಯಾಂ ಸಮಸ್ಯೆಯನ್ನು ಚಿಕ್ಕ ನೀರಾವರಿ ಇಲಾಖೆಯವರು ನಿರ್ವಹಣೆ ಮಾಡಬೇಕಾಗಿದೆ. ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಅಗತ್ಯವಿದ್ದಲ್ಲಿ ತಮ್ಮ ಕಚೇರಿ ಸಂಖೆ 08385-226422ಗೆ ಕರೆ ಮಾಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು.
•ಎನ್‌.ಬಿ. ಪಾಟೀಲ್ ತಹಶೀಲ್ದಾರ್‌, ಭಟ್ಕಳ.

ಆರ್ಕೆ, ಭಟ್ಕಳ

Advertisement

Udayavani is now on Telegram. Click here to join our channel and stay updated with the latest news.

Next