ಹುಮನಾಬಾದ: ತಾಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆ ಅತ್ಯಲ್ಪವಾಗಿದೆ. ಇದರ ಪರಿಣಾಮವಾಗಿ ಕುಡಿಯುವ ನೀರು, ಮೇವು ಒಳಗೊಂಡಂತೆ ನಿರೀಕ್ಷೆಯಂತೆ ಕೃಷಿ ಉತ್ನನ್ನ ಬಾರದಿರುವ ಸಮಸ್ಯೆಗಳ ಗಂಭೀರತೆ ಅರಿತು ಸರ್ಕಾರ ಜಿಲ್ಲೆಯ ಇತರೆ ತಾಲೂಕುಗಳ ಜೊತೆಗೆ ಹುಮನಾಬಾದನ್ನೂ ಬರಪೀಡಿತ ಎಂದು ಘೋಷಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆ ಶೇ.50ರಷ್ಟು ಇಳಿಮುಖವಾದ ಕಾರಣ ತಾಲೂಕಿನಲ್ಲಿರುವ ಬಹುತೇಕ ಕೆರೆಗಳು ಸಂಪೂರ್ಣ ಬತ್ತಿವೆ. ಅಂತರ್ಜಲ ಕುಸಿತದಿಂದಾಗಿ ಬಾವಿಗಳಲ್ಲಿನ ನೀರು ಬಹುತೇಕ ಖಾಲಿಯಾಗಿದ್ದು, ಹೊಸದಾಗಿ ಕೊಳವೆ ಬಾವಿ ತೋಡುವುದನ್ನು ಸರ್ಕಾರ ಕಳೆದ
ವರ್ಷದಿಂದಲೇ ನಿಷೇಧಿಸಿದೆ. ಈ ಬಾರಿ ಸದ್ಯ ಲಾಲಧರಿ ತಾಂಡಾದಲ್ಲಿ ನೀರಿನ ಸಮಸ್ಯೆ ಗಂಭೀರವಿದೆ. ಅದನ್ನು ಹೊರತುಪಡಿಸಿದರೆ ತಾಲೂಕಿನ ಘಾಟಬೋರಾಳ, ಸೇಡೋಳ, ಕನಕಟ್ಟಾ ಒಳಗೊಂಡಂತೆ ಇನ್ನೂ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆಉಲ್ಬಣ ಆಗುವ ಲಕ್ಷಣಗಳು ಈಗಲೇ ಕಾಣಿಸಿಕೊಳ್ಳುತ್ತಿವೆ. ಈ ಬಾರಿ ಹೊಸದಾಗಿ ಕೊಳವೆ ಬಾವಿ ತೋಡಲು ಅವಕಶ ಇಲ್ಲದಿರುವುದರಿಂದ ಹಳೆ ಕೊಳವೆ ಬಾವಿಗಳನ್ನು ದುರುಸ್ತಿಗೊಳಿಸಿ ನೀರು ಒದಗಿಸಬೇಕು. ಅದೂ ತಾತ್ಕಾಲಿಕವಾಗಿದ್ದು, ಹೇಗಾದೂ ಕೂಡ ನವೆಂಬರ್ ಕೊನೆ ವಾರದಿಂದ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆಯಲಿದೆ. ಇ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸಲು ಟ್ಯಾಂಕರ್ ಮೊರೆ ಹೋಗಲೇಬೇಕಾದ ಪರಿಸ್ಥಿತಿ ಇದೆ ಎನ್ನುವ ಮಾಹಿತಿಯನ್ನು ಇತ್ತೀಚೆಗೆ ಕೆಡಿಪಿ ಸಭೆಯಲ್ಲಿ ನಡೆದ ಚರ್ಚೆ ವೇಳೆ ಜಲಮಂಡಳಿ ಎಇಇ ರಾಚಪ್ಪ ಪಾಟೀಲ ಅವರು ಈಗಾಗಲೇ ತಿಳಿಸಿದ್ದಾರೆ.
ಈಗಿನ ಸ್ಥಿತಿ ಪ್ರಕಾರ ತಾಲೂಕಿನಲ್ಲಿ ಮೇವಿನ ಅಭಾವ ಅಷ್ಟಾಗಿ ತಲೆದೋರುವ ಸಾಧ್ಯತೆಗಳಿಲ್ಲ. ಆದರೂ ಬೇಸಿಗೆಯಲ್ಲಿ ಉದ್ಭವ ಆದಲ್ಲಿ ಅದಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ| ಗೋವಿಂದ ಹೇಳುತ್ತಾರೆ. ಮಳೆ ಅಭಾವದಿಂದ ನೀರಾವರಿ ಮತ್ತು ಮಳೆ ಅಧಾರಿತ ಬೆಳೆಗಳ ಹಾನಿಯನ್ನು ತಹಶೀಲ್ದಾರ್ ಡಿ.ಎಂ.ಪಾಣಿ ಅವರ ನೇತೃತ್ವದಲ್ಲಿ ಕಂದಾಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ| ಪಿ.ಎಂ. ಮಲ್ಲಿಕಾರ್ಜುನ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ| ಶಂಕರ ಪಟವಾರಿ ಅವರ ತಂಡ ಜಂಟಿ ಸಮೀಕ್ಷೆ ಕೈಗೊಂಡು ತಾಲೂಕಿನಲ್ಲಿ 27,000 ಹೆಕ್ಟೇರ್ ಬೆಳೆ ಹಾನಿ ಇತ್ಯಾದಿಯಿಂದ 19 ಕೋಟಿ ರೂ. ಹಾನಿಯಾಗಿರುವ ಕುರಿತು ಈಗಾಗಲೇ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿವೆ.
ಬರಗಾಲ ಸಮಸ್ಯೆ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳು ಕೈಗೊಂಡ ಜಂಟಿ ಸಮೀಕ್ಷೆಯಂತೆ ವಿವಿಧ ಇಲಾಖೆ ಅಧಿಕಾರಿಗಳು ರೈತರಿಗೆ ವಾಸ್ತವ ಸ್ಥಿತಿಯನ್ನರಿತು ಸಮಸ್ಯೆಗೆ ಸ್ಪಂದಿಸಿ, ಯುಧ್ದೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಈಗಿನಿಂದಲೇ ಅಣಿಯಾಗಬೇಕು. “ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿಸಿದಂತೆ’ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದಾಗಲೇ ಪರಿಹಾರ ಕಾರ್ಯಕ್ಕೆ ಕೈ ಹಾಕುವ ಬದಲು ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಸಮಸ್ಯೆ ಉಲ್ಬಣವಾಗದಂತೆ ನೋಡಿಕೊಳ್ಳಬೇಕು. ಈ ಸಮಸ್ಯೆಯನ್ನು ಅಧಿಕಾರಿಗಳು ಹೇಗೆ ನಿಭಾಯಿಸುತ್ತಾರೋ ಕಾದು ನೋಡಬೇಕು.
ಸರ್ಕಾರದ ನಿರ್ದೇಶನದಂತೆ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಈಗಾಗಲೇ ಕೈಗೊಂಡ ಸಮೀಕ್ಷೆಯಂತೆ ಉದ್ದು, ಹೆಸರು, ಜೋಳ, ಮೆಕ್ಕೆ ಜೋಳ ಸೇರಿ 27 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. 19 ಕೋಟಿ ರೂ. ಹಾನಿ ಕುರಿತು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ತಾಲೂಕಿನಾದ್ಯಂತ ರೈತರು ನೀರಾವರಿ ಬೆಳೆಗಳಾದ ಕಬ್ಬು ಇತ್ಯಾದಿಗೂ ಪರಿಹಾರ ಒದಗಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರದ ನಿರ್ದೇಶನ ಆಧರಿಸಿ ಕ್ರಮ ಕೈಗೊಳ್ಳಲಾಗುವುದು.
ಡಿ.ಎಂ.ಪಾಣಿ, ತಹಶೀಲ್ದಾರ್
ನಮ್ಮದು ಎರಡು ಎಕರೆ ಜಮೀನಿದೆ. ಕಳೆದ ವರ್ಷ ಪ್ರತೀ ಎಕರೆಗೆ 60 ಟನ್ ಟನ್ ಉತ್ಪನ್ನವಾಗಿತ್ತು. ಈ ಬಾರಿ ಮಳೆ ಅಭಾವದಿಂದಾಗಿ ಬಾವಿಯ ನೀರು ಸಂಪೂರ್ಣ ಬತ್ತಿದೆ. ಕಬ್ಬು ಬೆಳೆ ಸಂಪೂರ್ಣ ಒಣಗಿದೆ. ಪರಿಣಾಮ ಈ ಬಾರಿ 10-15 ಟನ್ ಕಬ್ಬು ಉತ್ಪನ್ನ ಆಗುವುದು ಕಷ್ಟಸಾಧ್ಯವಿದೆ. ನಿರ್ವಹಣೆಗೆ 1 ಲಕ್ಷಕ್ಕೂ ಅಧಿಕ ರೂ. ವೆಚ್ಚ ಮಾಡಿದ್ದೇವೆ. ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು.
ಯಮುನಪ್ಪ ರೆಡ್ಡಿ, ವಾಂಜ್ರಿ ರೈ
ಶಶಿಕಾಂತ ಕೆ.ಭಗೋಜಿ