Advertisement

ನಗರದ ಕುಡಿವ ನೀರಿಗೆ ಮಳೆ ಕೊಯ್ಲು ಪದ್ಧತಿ ಮೊರೆ

12:12 PM Feb 27, 2018 | Team Udayavani |

ಬೆಂಗಳೂರು: ರಾಜಧಾನಿಗೆ ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಎಚ್ಚೆತ್ತಿರುವ ಬಿಬಿಎಂಪಿ, ಅಂತರ್ಜಲ ಮಟ್ಟ ಹೆಚ್ಚಿಸಲು ಮಳೆನೀರು ಕೊಯ್ಲು ವ್ಯವಸ್ಥೆಗೆ ಮುಂದಿನ ಬಜೆಟ್‌ನಲ್ಲಿ 100 ಕೋಟಿ ರೂ. ಅನುದಾನ ಮೀಸಲಿಡಲು ಮುಂದಾಗಿದೆ. ಹಾಗೇ ಮಳೆಕೊಯ್ಲು ಪದ್ಧತಿ ಅಳವಡಿಸಿದ್ದರೆ ಮಾತ್ರ ನಕ್ಷೆ ಮಂಜೂರು ಮಾಡಲು ನಿರ್ಧರಿಸಿದೆ.

Advertisement

ಇತ್ತೀಚೆಗೆ ಅಂತಾರಾಷ್ಟ್ರೀಯ ಸುದ್ದಿವಾಹಿನಿಯೊಂದು ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಜಗತ್ತಿನ ಪ್ರಮುಖ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಎಂದು ವರದಿ ಮಾಡಿತ್ತು. ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುವುದು ಮೈಸೂರಿನ ಕೆಆರ್‌ಎಸ್‌ ಜಲಾಶಯದಿಂದ. ಒಂದೊಮ್ಮೆ ಮಳೆ ಕಡಿಮೆಯಾಗಿ ಕೆಆರ್‌ಎಸ್‌ನಲ್ಲಿ ನೀರಿನ ಸಂಗ್ರಹ ಕಡಿಮೆಯಾದರೆ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ. ಹೀಗಾಗಿ ಅಂತರ್ಜಲ ಪ್ರಮಾಣ ಹೆಚ್ಚಿಸಲು ಆದ್ಯತೆ ನೀಡಲಾಗಿದೆ. 

ವಾರ್ಡ್‌ಗೆ 50 ಲಕ್ಷ ಅನುದಾನ: ನಗರದ 40*60 ಅಡಿ ನಿವೇಶನದಲ್ಲಿ ನಿರ್ಮಿಸುವ ಪ್ರತಿ ಕಟ್ಟಡಕ್ಕೂ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಕೆ ಕಡ್ಡಾಯ ಎಂಬ ಜಲಮಂಡಳಿ ಆದೇಶ ಸಮರ್ಪಕವಾಗಿ ಪಾಲನೆಯಾಗಿಲ್ಲ. ಹೀಗಾಗಿ  ಪಾಲಿಕೆಯೇ ಆಸಕ್ತಿ ವಹಿಸಿ, ತನ್ನ ವ್ಯಾಪ್ತಿಯ ಎಲ್ಲ ಉದ್ಯಾನ, ಪಾಲಿಕೆ ಶಾಲೆ, ಕಾಲೇಜು ಕಟ್ಟಡ, ವಾರ್ಡ್‌ ಕಚೇರಿ, ಖಾಲಿ ನಿವೇಶನಗಳು ಹಾಗೂ ವಿವಿಧ ಇಲಾಖೆ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಅನುಷ್ಠಾನಗೊಳಿಸುತ್ತಿದೆ.

ಈ ಕಾರ್ಯಕ್ಕಾಗಿ ಪ್ರತಿ ವಾರ್ಡ್‌ಗೆ 50 ಲಕ್ಷ ರೂ.ನಂತೆ ಒಟ್ಟು 100 ಕೋಟಿ ರೂ. ಮೀಸಲಿಡಲು ಯೋಜನೆ ರೂಪಿಸಲಾಗಿದೆ. ನಗರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 12 ಸಾವಿರ, ಜಲಮಂಡಳಿಯ ನಿಯಂತ್ರಣದಲ್ಲಿ 8,550 ಹಾಗೂ 3 ಲಕ್ಷಕ್ಕೂ ಹೆಚ್ಚು ಖಾಸಗಿ ಕೊಳವೆ ಬಾವಿಗಳಿವೆ. ವುಗಳಿಗೆ ಜಲಮರುಪೂರಣ ಮಾಡುವುದು ಪಾಲಿಕೆಯ ಉದ್ದೇಶವಾಗಿದೆ.

ನಕ್ಷೆ ಪಡೆಯುವಾಗಲೂ ಪರಿಶೀಲನೆ: ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸುವವರು ಬಿಬಿಎಂಪಿಯಿಂದ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ಹಾಗೂ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯಬೇಕು. ಇನ್ನು ಮುಂದೆ ಹೀಗೆ ನಕ್ಷೆ ಮಂಜೂರಾತಿ ಪಡೆಯುವ ಮೊದಲೇ ನಿವೇಶನದಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿರಬೇಕು. ಪದ್ಧತಿ ಅಳವಡಿಸಿರುವುದನ್ನು ಖಚಿತಪಡಿಸಿಕೊಂಡ ನಂತರವೇ ನಕ್ಷೆ ಮಂಜೂರು ಮಾಡುವ ಕುರಿತು ಬಜೆಟ್‌ನಲ್ಲಿ ಹೊಸ ನಿಯಮ ರೂಪಿಸಲು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ನಿರ್ಧರಿಸಿದೆ.

Advertisement

* ವೆಂ. ಸುನೀಲ್‌ ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next