ಕಿಕ್ಕೇರಿ: ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಸುಮಾರು 1700 ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯಿತಿ ಕೇಂದ್ರವಾದರೂ ಕುಡಿಯುವ ನೀರಿನ ಸಮಸ್ಯೆ ಮಾತ್ರ ದೂರವಾಗಿಲ್ಲ. ಗ್ರಾಮದಲ್ಲಿ ಕುಡಿಯುವ ನೀರು ಪೂರೈಸಲು 50 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಿಸಲಾಗಿತ್ತು. ಟ್ಯಾಂಕ್ ನಿರ್ವಹಣೆ, ದುರಸ್ತಿ ಕಾಣದೆ ಸಂಪೂರ್ಣ ಹಾಳಾಗಿದೆ. ಪರಿಣಾಮ ಯಾವ ಸಂದರ್ಭದಲ್ಲಾದರೂ ಟ್ಯಾಂಕ್ ನೆಲಕಚ್ಚುವ ಸಂಭವವಿದೆ.
ಟ್ಯಾಂಕ್ ಒಳಗೆ ಹಾಗೂ ಹೊರಗಡೆ ಸಿಮೆಂಟ್ ಅಲ್ಲಲ್ಲಿ ಉದುರುತ್ತಿದೆ. ಟ್ಯಾಂಕ್‌ನಲ್ಲಿ ಗಿಡಗಂಟಿಗಳ ಬೇರು ಬಿಟ್ಟಿವೆ. ಕಬ್ಬಿಣದ ಸರಳುಗಳ ಶಕ್ತಿ ಕುಂದಿದ್ದು ತುಕ್ಕು ಹಿಡಿದಿದೆ. ಅಸ್ಥಿಪಂಜರದಂತೆ ಕಬ್ಬಿಣದ ಸರಳು ಹೊರಕಾಣುತ್ತಿವೆ. ಆದ ಕಾರಣ ಟ್ಯಾಂಕ್‌ನಿಂದ ಗ್ರಾಮಕ್ಕೆ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ.
ಕೊಳವೆಬಾವಿಯೇ ಆಶ್ರಯ: ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜುಗಾಗಿ 4 ಕೊಳವೆ ಬಾವಿ ಕೊರೆಸಲಾಗಿದೆ. ಸದ್ಯಕ್ಕೆ 2 ಮಾತ್ರ ಸುಸ್ಥಿತಿಯಲ್ಲಿವೆ. ಸುತ್ತಮುತ್ತಲ ಕೆರೆಕಟ್ಟೆಗಳು ಒಣಗಿರುವ ಕಾರಣ ಅಂರ್ತಜಲ ಕುಸಿದಿದ್ದು, ಈ ಕೊಳವೆ ಬಾವಿಯಲ್ಲಿ ನೀರು ಜಿನುಗುತ್ತಿದೆ. ನೀರಿನ ಟ್ಯಾಂಕ್ ಹಾಳಾಗಿರುವ ಕಾರಣ ಸಾರ್ವಜ ನಿಕರಿಗೆ ನೇರವಾಗಿ ಕೊಳವೆ ಬಾವಿಯಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ. ಆರಂಭದಲ್ಲಿ ಇರುವ ಮನೆಯವರಿಗೆ 20 ಕೊಡ ನೀರು ಸಿಕ್ಕರೆ ಕೊನೆಯ ಹಂತದ ಮನೆಯವರಿಗೆ ಒಂದು ಕೊಡ ನೀರು ಸಿಗದಂತಾಗಿದೆ. ಆರಂಭದಲ್ಲಿ ನೀರು ರಭಸವಾಗಿ ಬಂದು, ಕೊನೆಯ ಹಂತ ತಲುಪುವುದರೊಳಗೆ ಸೋರುತ್ತದೆ.
ಎರಡು ದಿನಕ್ಕೊಮ್ಮೆ ನೀರು: ಪ್ರಸ್ತುತ ಗ್ರಾಮಕ್ಕೆ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ನೀರಿನ ಸರಬರಾಜು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ರೈತರಿರುವ ಗ್ರಾಮದಲ್ಲಿ ಬೆಳಗಿನ ವೇಳೆ ಕೆಲಸ ಮುಗಿಸಿಕೊಂಡು ಕೃಷಿ ಚಟುವಟಿಕೆಗೆ ತೆರಳಲು, ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಕಳುಹಿಸಲು, ಅಡುಗೆ ಮಾಡಲಿಕ್ಕೂ ನೀರಿಲ್ಲದೆ ತೀವ್ರ ತೊಂದರೆಯಾಗಿದೆ. ಒಂದೆಡೆ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾದರೆ ಮತ್ತೂಂದೆಡೆ ಜಾನುವಾರುಗಳಿಗೆ ನೀರು ಉಣಿಸಲು ಕಷ್ಟವಾಗಿ ಮಾರುವ ಆಲೋಚನೆ ಯಲ್ಲಿ ತೊಡಗಿದ್ದಾರೆ. ಹೈನುಗಾರಿಕೆಯಿಂದಲೇ ಜೀವನ ಮಾಡುತ್ತಿರುವ ರೈತರು ನೀರಿನ ಸಮಸ್ಯೆಯಿಂದ ಆತಂಕ ಎದುರಿಸುವಂತಾಗಿದೆ.
ಖಾಲಿ ನೀರಿನ ತೊಟ್ಟಿ: ಗ್ರಾಮಸ್ಥರಿಗೆ ಕುಡಿಯಲು ನೀರಿಲ್ಲದೆ ಕಾರಣ ಜಾನುವಾರು ನೀರಿನ ತೊಟ್ಟಿಗಳಲ್ಲಿಯೂ ನೀರಿಲ್ಲದೆ ಬಣಗುತ್ತಿವೆ. ಬೇಸಿಗೆಯಲ್ಲಿ ಜಾನುವಾರು ಗಳಿಗೆ ಕುಡಿಯುವ ನೀರು ಪೂರೈಸಲು ನಿರ್ಮಿಸಿರುವ ತೊಟ್ಟಿ ಹೆಸರಿಗೆ ಮತ್ತು ಯೋಜನೆಗೆ ಸೀಮಿತವಾಗಿದ್ದು, ನೀರಿಲ್ಲದೆ ಖಾಲಿ ತೊಟ್ಟಿಯಿದ್ದರೇನು ಪ್ರಯೋಜನ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
ಕೊಳವೆಬಾವಿಗಳಲ್ಲಿಯೂ ಅಂತರ್ಜಲ ಮಟ್ಟ ಕುಸಿದು ಹನಿ ನೀರಿಗೂ ಪರಿತಪಿಸುವ ಸ್ಥಿತಿ ಗ್ರಾಮದಲ್ಲಿ ಉದ್ಭವಿಸಿದೆ. ನೀರಿನ ಟ್ಯಾಂಕ್ ಸುಸ್ಥಿತಿಯಲ್ಲಿದ್ದರೆ ನೀರು ಸಂಗ್ರಹಣೆಗೆ ಅನುಕೂಲವಾಗುತ್ತಿತ್ತು.
ಜೊತೆಗೆ ನಿಯಮಿತವಾಗಿ ಕೊನೆಯ ಹಂತದ ಮನೆಯವರಿಗೆ ಕೂಡ ನೀರು ಸರಬರಾಜು ಮಾಡಬಹುದಾಗಿತ್ತು ಎನ್ನುತ್ತಾರೆ ಇಲ್ಲಿನ ನೀರುಗಂಟಿಗಳು.
● ತ್ರಿವೇಣಿ