Advertisement

ಕಾಡುಪ್ರಾಣಿಗಳ ದಾಹ ನೀಗಿಸುವ ಕುರಿ

08:40 PM May 05, 2021 | Team Udayavani |

ವರದಿ: ಮಲ್ಲಪ್ಪ ಮಾಟರಂಗಿ

Advertisement

ಯಲಬುರ್ಗಾ: ತಾಲೂಕಿನಲ್ಲಿ ಪ್ರತಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಎದುರಾಗುತ್ತದೆ. ಈ ವೇಳೆ ಕಾಡು ಪ್ರಾಣಿಗಳಿಗೆ ನೀರು ಸಿಗುವುದು ದುಸ್ತರವಾಗುತ್ತದೆ. ಇದನ್ನು ಮನಗಂಡ ಉಪ ವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ ವನ್ಯಜೀವಿಗಳಿಗೆ ನೀರು ಪೂರೈಸುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಸ್ವಂತಃ ಖರ್ಚು ಮಾಡುತ್ತಿದ್ದಾರೆ.

ಕಾಡುಪ್ರಾಣಿಗಳು ನೀರಿಲ್ಲದೇ ಪರದಾಡಬಾರದು ಎಂಬ ಉದ್ದೇಶದಿಂದ ಅರಣ್ಯ ಪ್ರದೇಶದಲ್ಲಿನ ಹೊಂಡ, ಗುಂಡಿಗಳಲ್ಲಿ ಟ್ಯಾಂಕರ್‌ನಿಂದ ನೀರು ಹಾಕಿ ವನ್ಯಜೀವಿಗಳಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಹೊಂಡದ ಸುತ್ತ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಪ್ರಾಣಿಗಳು ನೀರು ಕುಡಿಯುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಉಪ ವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದ್ದು, ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್‌ ಆಗಿದೆ. ತಮ್ಮ ಸ್ವಂತ ಹಣದಲ್ಲಿಯೇ ಮಂಡಲಮರಿ, ಹುಲೇಗುಡ್ಡ, ಮಕ್ಕಳಿ, ಸಾಲಭಾವಿ, ಹಿರೇವಡ್ರಕಲ್‌, ಕಟಗಿಹಳ್ಳಿ ಇತರೆಡೆ ಹೊಂಡಗಳಿಗೆ ನೀರು ತುಂಬಿಸಿದ್ದಾರೆ. ಹೊಂಡಗಳ ಸುತ್ತಮುತ್ತ ಪ್ರಾಣಿಗಳು ಸುಳಿದಾಡುತ್ತಿವೆ. ನರಿ, ಜಿಂಕೆ, ಮುಂಗಸಿ, ನವಿಲು ಸೇರಿದಂತೆ ವಿವಿಧ ಪಕ್ಷಿಗಳು ಹಾಗೂ ಪ್ರಾಣಿಗಳು ಬಂದು ನೀರು ಕುಡಿಯುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Advertisement

ತೃಪ್ತಿ ತಂದಿದೆ ಕಾರ್ಯ: ಕಾಡು ಪ್ರಾಣಿಗಳು ನೀರು ಕುಡಿದು ಹೋಗುತ್ತಿವೆ. ಪ್ರಾಣಿಗಳು ನೀರಿನ ದಾಹ ತೀರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ಅಂದಪ್ಪ ಕುರಿ. ಸಸಿಗಳ ಆರೈಕೆ: ತಾಲೂಕಿನ ವಿವಿಧ ಪ್ರೌಢಶಾಲೆ, ಕಾಲೇಜುಗಳಲ್ಲಿ ರಸ್ತೆ ಬದಿಗಳಲ್ಲಿ ಇವರು ಸಸಿಗಳನ್ನು ನೆಟ್ಟು ಅವುಗಳನ್ನು ಸಹ ಪೋಷಣೆ ಮಾಡುತ್ತಿದ್ದಾರೆ. ಅವರ ಕರ್ತವ್ಯ ನಿಷ್ಠೆಗೆ ಬಿ. ಮಾರೆಪ್ಪ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಇವರ ಕಾರ್ಯ ಮೆಚ್ಚಿ ಸನ್ಮಾನಿಸಿ, ಗೌರವಿಸುವ ಕಾರ್ಯ ಮಾಡಿವೆ.

ಕಿಟ್‌ ಹಂಚಿಕೆ: ಉಪವಲಯ ಅರಣ್ಯಾಧಿ ಕಾರಿ ಅಂದಪ್ಪ ಕುರಿ 2020ರಲ್ಲಿ ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ತಮ್ಮ ಇಲಾಖೆಯಲ್ಲಿ ಹೊರ ಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುವ 50 ಕಾರ್ಮಿಕರಿಗೆ ಹಾಗೂ ಕೊರೊನಾ ನಿರ್ಮೂಲನೆಗೆ ಶ್ರಮಿಸುತ್ತಿರುವ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರಿಗೆ ಸ್ವಂತ ಹಣದಲ್ಲಿ ದವಸ-ಧಾನ್ಯಗಳ ಕಿಟ್‌ ಹಂಚಿಕೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next