Advertisement
ನಗರ ಸ್ಥಳೀಯ ಸಂಸ್ಥೆಗಳಲ್ಲಿ “ದಾಹಮುಕ್ತ ಕರ್ನಾಟಕ’ ಯೋಜನೆಯಡಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವ ಸಾಧ್ಯತೆಯಿದೆ.
Related Articles
Advertisement
ರಾಜ್ಯದಲ್ಲಿ ಈಗಾಗಲೇ “ಜಲಜೀವನ್ ಮಿಷನ್ - ಮನೆ ಮನೆಗೆ ಗಂಗೆ’ ಯೋಜನೆಯಡಿ ಗ್ರಾಮೀಣ ಭಾಗಗಳ ಮನೆಗಳಿಗೆ ನಲ್ಲಿ ಮೂಲಕ ನೀರು ಪೂರೈಕೆ ಪ್ರಗತಿಯಲ್ಲಿದ್ದು, ಈಗ ನಗರ ಪ್ರದೇಶಗಳಿಗೆ ನೀರು ಪೂರೈಕೆ ಮಾಡುವ ಈ ಯೋಜನೆಗೆ ಚಾಲನೆ ದೊರೆಯುತ್ತಿದೆ. ಇದರಿಂದಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾದಂತಾಗಲಿದೆ.
ನ. 11ರಂದು ಚಾಲನೆ? :
ನ. 11ರಂದು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅದೇ ದಿನ ಈ ಕಾರ್ಯಕ್ರಮಕ್ಕೂ ಚಾಲನೆ ನೀಡುವ ನಿರೀಕ್ಷೆ ಎಂದು ಮೂಲಗಳು ತಿಳಿಸಿವೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ ಸಂಬಂಧ ಹಲವು ವರ್ಷಗಳಿಂದ ಬೇಡಿಕೆ ಇತ್ತು. ಇದಕ್ಕಾಗಿ ಬೃಹತ್ ಮೊತ್ತದ ಯೋಜನೆ ರೂಪಿಸಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ನದಿ ಮೂಲ ಹಾಗೂ ಇತರ ಜಲಮೂಲಗಳಿಂದ ನೀರು ಪಡೆದು ಪ್ರತೀ ಮನೆಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿಳಿಸಿದ್ದಾರೆ.
ಅಕ್ರಮ-ಸಕ್ರಮ :
ನಗರ ಪ್ರದೇಶಗಳಲ್ಲಿ ಕಂದಾಯ ಭೂಮಿಯಲ್ಲಿ ಬಡವರು ವಾಸಕ್ಕೆ ನಿರ್ಮಿಸಿಕೊಂಡಿರುವ ಮನೆ ಸಕ್ರಮ ಮಾಡುವ ವಿಚಾರವನ್ನು ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಿದ್ದು, ಸದ್ಯದಲ್ಲೇ ಸಂಪುಟದ ಮುಂದೆ ಬರಲಿದೆ. ನಗರ ಮತ್ತು ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯದೆ ನಕ್ಷೆ ಮಂಜೂರಾತಿ ಉಲ್ಲಂಘನೆ, ಬಡಾವಣೆ ನಿರ್ಮಾಣ ಅನುಮೋದನೆ ಪಡೆಯದೆ ನಿರ್ಮಿಸಿಕೊಂಡಿರುವ ಮನೆಗಳ ಸಕ್ರಮ ವಿಷಯವೂ ಚರ್ಚಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರು ಪೂರೈಕೆ ಬಹಳ ವರ್ಷಗಳ ಬೇಡಿಕೆ. ಕೇಂದ್ರ ಸರಕಾರದ ಅಮೃತ್-2 ಅಡಿ ನೆರವು ಪಡೆದು ರಾಜ್ಯ ಸರಕಾರ ಉಳಿದ ವೆಚ್ಚ ಭರಿಸಿ ಅನುಷ್ಠಾನ ಮಾಡಲಿದೆ. ಇದರಿಂದಾಗಿ ರಾಜ್ಯದ ಎಲ್ಲ ನಗರ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯಾಗಲಿದೆ. ಒಂದು ವರ್ಷದ ಕಾಲಮಿತಿಯಲ್ಲಿ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲಾಗುವುದು.-ಬೈರತಿ ಬಸವರಾಜ್, ನಗರಾಭಿವೃದ್ಧಿ ಸಚಿವರು