ಮಹಾನಗರ: ಪಾಲಿಕೆ ವ್ಯಾಪ್ತಿಯ ಹೆಚ್ಚು ಜನಸಂದಣಿ ಇರುವ 5 ಬಸ್‌ತಂಗುದಾಣಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮಹತ್ವದ ಯೋಜನೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈಗ ಸಾಕಾರಗೊಳ್ಳುತ್ತಿದೆ.
‘ಬಸ್ ತಂಗುದಾಣಗಳಲ್ಲಿ ನೆರಳಿದೆ- ನೀರಿರಲಿ’ ಎಂಬ ಶೀರ್ಷಿಕೆಯೊಂದಿಗೆ ಉದಯವಾಣಿ ‘ಸುದಿನ’ ಎ. 8ರಂದು ವಿಶೇಷ ವರದಿಯನ್ನು ಪ್ರಕಟಿಸಿತ್ತು. ನಗರದ ವಿವಿಧ ಬಸ್ ತಂಗುದಾಣಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಅಳವಡಿಸುವ ನೆಲೆಯಲ್ಲಿ ವರದಿ ಪ್ರಕಟವಾಗಿತ್ತು.
ದ.ಕ. ಆಟೋಮೊಬೈಲ್ ಆ್ಯಂಡ್ ಟಯರ್ ಡೀಲರ್ ಅಸೋಸಿ ಯೇಶನ್ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸಹಕಾರದಿಂದ 5 ಕಡೆಯ ಬಸ್ ತಂಗುದಾಣಗಳಲ್ಲಿ ಕುಡಿಯುವ ನೀರು ಸಂಪರ್ಕ ಯೋಜನೆ ಅನುಷ್ಠಾನವಾಗುತ್ತಿದೆ. ಲೇಡಿಗೋಶನ್ ಮುಂಭಾಗದ ಬಸ್‌ನಿಲ್ದಾಣ, ಹಂಪನಕಟ್ಟೆ ವಿ.ವಿ. ಕಾಲೇಜಿನ ಮುಂಭಾಗ, ಬಂಟ್ಸ್‌ಹಾಸ್ಟೆಲ್ ಬಸ್ ನಿಲ್ದಾಣ, ಎಂ.ಜಿ.ರಸ್ತೆಯ ಟಿಎಂಎ ಪೈ ಸಭಾಂಗಣ ಮುಂಭಾಗ, ಪಾಲಿಕೆ ಕಚೇರಿ ಮುಂಭಾಗ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಲೇಡಿಹಿಲ್, ಪಂಪ್ ವೆಲ್ ಸಹಿತ ಇತರ ಕಡೆಗಳಲ್ಲಿಯೂ ನೀರಿನ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತಿಸಲಾಗಿದೆ.
Related Articles
ಒಂದೆರಡು ದಿನದಲ್ಲಿ ಉದ್ಘಾಟನೆ
5 ಬಸ್ ನಿಲ್ದಾಣಗಳಲ್ಲಿ ತಲಾ 75 ಲೀ. ಸಾಮರ್ಥ್ಯದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ಯಂತ್ರ, ಮುಂದಿನ ನಿರ್ವಹಣೆಯನ್ನು ದ.ಕ. ಆಟೋಮೊಬೈಲ್ ಆ್ಯಂಡ್ ಟಯರ್ ಡೀಲರ್ ಅಸೋಸಿಯೇಶನ್ ನಡೆಸಲಿದ್ದು, ನೀರು, ವಿದ್ಯುತ್ ಸಂಪರ್ಕವನ್ನು ಪಾಲಿಕೆ ನಡೆಸಿದೆ. ಒಂದೆರಡು ದಿನದಲ್ಲಿ ಉದ್ಘಾಟನೆ ನಡೆಯಲಿದೆ’ ಎನ್ನುತ್ತಾರೆ ಅಸೋಸಿಯೇಶನ್‌ನ ಸಮಿತಿ ಪ್ರಮುಖರಾದ ರತ್ನಾಕರ ಪೈ.
ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ
ಉದಯವಾಣಿ ಸುದಿನ ಪ್ರಕಟಿಸಿರುವ ವರದಿಯ ಆಧಾರದಲ್ಲಿ ನಗರದ ವಿವಿಧ ಬಸ್‌ತಂಗುದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಇದರ ಪ್ರಾರಂಭಿಕ ನೆಲೆಯಲ್ಲಿ ದ.ಕ. ಆಟೋಮೊಬೈಲ್ ಆ್ಯಂಡ್ ಟಯರ್ ಡೀಲರ್ ಅಸೋಸಿಯೇಶನ್ ವತಿಯಿಂದ 5 ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದೆ ಇನ್ನಷ್ಟು ಕಡೆ ಪ್ರತ್ಯೇಕವಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು. –ಪ್ರೇಮಾನಂದ ಶೆಟ್ಟಿ, ಮೇಯರ್, ಮಹಾನಗರ ಪಾಲಿಕೆ
ಸುದಿನ ವರದಿ ಪರಿಗಣಿಸಿ ನೀರಿನ ವ್ಯವಸ್ಥೆ
ಬಸ್‌ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇದ್ದರೆ ಉತ್ತಮ ಎಂಬ ಉದಯವಾಣಿ ಸುದಿನ ವರದಿಯನ್ನು ಪರಿಗಣಿಸಿ, ಜನರಿಗೆ ಅನುಕೂಲವಾಗುವ ನೆಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ. –ಕಸ್ತೂರಿ ಪ್ರಭಾಕರ ಪೈ, ಅಧ್ಯಕ್ಷರು, ದ.ಕ. ಆಟೋಮೊಬೈಲ್ ಆ್ಯಂಡ್ ಟಯರ್ ಡೀಲರ್ ಅಸೋಸಿಯೇಶನ್