ಮೂಡುಬಿದಿರೆ : ಪುರಸಭಾ ವ್ಯಾಪ್ತಿಯಲ್ಲಿ ಈಗ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ. ಆಳ್ವಾಸ್ ಮತ್ತು ಇತರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ನಿಲಯಗಳಲ್ಲಿರುವ ಸುಮಾರು ಇಷ್ಟೇ ಸಂಖ್ಯೆಯ ವಿದ್ಯಾರ್ಥಿಗಳ ನೀರಿನ ಬೇಡಿಕೆಯನ್ನು ಬಹುತೇಕ ಖಾಸಗಿ ಮೂಲಗಳಿಂದ ಪೂರೈಸಲಾಗುತ್ತಿದ್ದು, ಎಲ್ಲಿಯೂ ಜಲ ಸಮಸ್ಯೆ ಕಂಡು ಬಂದಿಲ್ಲ.
23 ವಾರ್ಡ್‌ಗಳಲ್ಲಿ ವಾಸವಾಗಿರುವ ಸುಮಾರು 35,000 ಮಂದಿ ನಾಗರಿಕರಿಗೆ, ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಮಾರ್ಪಾಡಿ, ಪ್ರಾಂತ್ಯ, ಕಲ್ಲಬೆಟ್ಟು, ಕರಿಂಜೆ, ಮಾರೂರು ಗ್ರಾಮಗಳಲ್ಲಿ ಸುಮಾರು 15,000 ಮನೆಗಳಿದ್ದು ಗ್ರಾಮಾಂತರ ಪ್ರದೇಶದಲ್ಲಿ ಮೂರನೇ ಎರಡರಷ್ಟು ಸಿಹಿನೀರ ಬಾವಿಗಳಿದ್ದು ಹೆಚ್ಚಿನವರಿಗೆ ಸದ್ಯ ನೀರಿನ ಕೊರತೆ ಕಾಡಿದಂತಿಲ್ಲ. ಪುರಸಭಾ ವ್ಯಾಪ್ತಿ ಯಲ್ಲಿ ಸುಸ್ಥಿತಿಯಲ್ಲಿರುವ ಬಾವಿಗಳು 6 ಮಾತ್ರ. ಖಾಸಗಿ ಬಾವಿಗಳೆಲ್ಲ ಕಲುಷಿತಗೊಂಡಿದ್ದು ಪುರಸಭಾ ನಳ್ಳಿ ನೀರನ್ನೇ ಅವಲಂಬಿಸುವ ಸ್ಥಿತಿ.
5800 ಮನೆಗಳಿಗೆ ಈಗಾಗಲೇ ನಳ್ಳಿ ನೀರಿನ ಸಂಪರ್ಕ ನೀಡಲಾಗಿದೆ.
ಮೂಡುಬಿದಿರೆಗೆ ನೀರು ಪೂರೈಸುವ ಜಲ ನಿಧಿ ಪುಚ್ಚಮೊಗರು ಮೂಲಕ ಹಾದುಹೋಗುವ ಫಲ್ಗುಣಿ ನದಿಯಲ್ಲಿದೆ. ಪುಚ್ಚಮೊಗರಿನಲ್ಲಿ ನಿರ್ಮಿಸಲಾಗಿರುವ ಅಣೆಕಟ್ಟಿನ ನೀರಿನ ಮಟ್ಟ 3.77 ಮೀ (ಅಂದರೆ ಈ ಬಾರಿ ಇಳಿತ ಕೇವಲ 0.23 ಮೀ. ಮಾತ್ರ) ಇದೆ. ಹಾಗಾಗಿ ಇನ್ನೆರಡು ತಿಂಗಳು ಮೂಡುಬಿದಿರೆಗೆ ಬೇಕಾದಷ್ಟು ನೀರನ್ನು ಪೂರೈಸಲು ಯಾವುದೇ ಅಡ್ಡಿ ಇಲ್ಲ. ಕಳೆದ ಬಾರಿ ನೀರು ಪೂರೈಸಲು ತೊಂದರೆ ಆಗಿದ್ದಿರಲಿಲ್ಲ; ಈ ಬಾರಿಯೂ ಕಾಡಲಿಕ್ಕಿಲ್ಲ’ ಎಂದು ಪುರಸಭಾ ಎಂಜಿನಿಯರ್ ದಿನೇಶ್ ಹೇಳುತ್ತಾರೆ.
ಪುರಸಭಾ ವ್ಯಾಪ್ತಿಯಲ್ಲಿ 148 ಬೋರ್‌ವೆಲ್‌ಗಳಿವೆ ಅಗತ್ಯವಿರುವಲ್ಲಿ ಕೆಲವು ಬೋರ್‌ವೆಲ್‌ಗಳನ್ನು ಫ್ಲಶಿಂಗ್ ಪ್ರಕ್ರಿಯೆಗೊಳಪಡಿಸಲಾಗುತ್ತಿದೆ. ಕಳೆದ ಬಾರಿ ಮರಿಯಾಡಿ, ಕಕ್ಕೆಬೆಟ್ಟು, ಬೋರು ಗುಡ್ಡೆ, ನೆತ್ತೋಡಿ ಇಂಥ ಎತ್ತರದ ಜಾಗಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗಿತ್ತು. ಈ ಬಾರಿಯೂ ಈ ಕ್ರಮವನ್ನು ಅನುಸರಿಸಬೇಕಾಗಿದೆ.ಅಣೆಕಟ್ಟಿನ ನೀರು ಎರಡು ತಿಂಗಳಿಗೆ ಸಾಕಾಗಬಹುದಾದರೂ ಅನಿವಾರ್ಯ ಪರಿಸ್ಥಿತಿ ಎದುರಾದಲ್ಲಿ ಅಣೆಕಟ್ಟಿನಿಂದ ಕೊಂಚ ದೂರವಿರುವ ಆನೆಗುಂಡಿಯಿಂದ ನೀರನ್ನು ಸೆಳೆಯಲು 10 ಲಕ್ಷ ರೂ. ವೆಚ್ಚದಲ್ಲಿ ಪೈಪ್‌ಲೈನ್ ವ್ಯವಸ್ಥೆ ಆಗಿದೆ. ಅಣೆಕಟ್ಟಿನಿಂದ ಸುಮಾರು 1 ಕಿ.ಮೀ. ದೂರದಲ್ಲಿರುವ ಮದ್ಮಲ್ ಗುಂಡಿಯಿಂದ ನೀರನ್ನು ತೆಗೆಯಲು ಸುಮಾರು ರೂ. 80 ಲಕ್ಷ ವೆಚ್ಚದಲ್ಲಿ ಪಂಪಿಂಗ್ ಮತ್ತು ಪೈಪ್‌ಲೈನ್ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದ್ದು ಸದ್ಯವೇ ಕಾಮಗಾರಿ ಆರಂಭವಾಗಲಿದೆ. ಎರಡು ತಿಂಗಳ ಬಳಿಕ ಅವಶ್ಯ ಕಂಡಲ್ಲಿ ಈ ಗುಂಡಿಯಿಂದ ಕನಿಷ್ಠ 15 ದಿನ ನೀರನ್ನು ಸೆಳೆಯಬಹುದು. ಈ ಬಾರಿ ನೀರಿನ ಸಮಸ್ಯೆ ಕಾಡಲಿಕ್ಕಿಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ನೀರಿನ ಸಮಸ್ಯೆ ಇಲ್ಲ
ಈಗಿನ ಸ್ಥಿತಿಯಲ್ಲಿ ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಖಂಡಿತ ಕಾಡಲಿಕ್ಕಿಲ್ಲ. ಎತ್ತರದ ಜಾಗಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. 2019-20ರ 14ನೇ ಹಣಕಾಸು ಯೋಜನೆಯಡಿ 52 ಲಕ್ಷ ರೂ. ವೆಚ್ಚದಲ್ಲಿ 9 ಬೋರ್‌ವೆಲ್ ನಿರ್ಮಾಣ, ಪೈಪ್ ಲೈನ್ ವಿಸ್ತರಣೆ ನಡೆಸಲು ಕ್ರಿಯಾಯೋಜನೆ ಮಾಡಲಾಗಿದ್ದು ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿದೆ. ಚುನಾವಣ ನೀತಿ ಸಂಹಿತೆ ಇರುವ ಕಾರಣ ಕೊಂಚ ತಡವಾಗಬಹುದು. ಏನಿದ್ದರೂ ಯಾರಿಗೂ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು.
– ಇಂದು ಎಂ.
ಮುಖ್ಯಾಧಿಕಾರಿ, ಪುರಸಭೆ, ಮೂಡುಬಿದಿರೆ
ಧನಂಜಯ ಮೂಡುಬಿದಿರೆ