ಮೈಸೂರು: ಜನರ ಆರೋಗ್ಯದ ದೃಷ್ಟಿಯಿಂದ ದೇಶದಲ್ಲಿ ಮದ್ಯಪಾನ ನಿಷೇಧ ಜಾರಿಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು. ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಸಂಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾರಾಯಿ ದಂಧೆ: ರಾಜ್ಯದಲ್ಲಿ ಮದ್ಯಪಾನ ನಿಷೇಧಕ್ಕೆ ಗಂಭೀರ ಚಿಂತನೆ ನಡೆಸುತ್ತೇನೆ. ಆದರೆ, ಒಂದು ರಾಜ್ಯದಲ್ಲಿ ನಿಷೇಧಿಸುವುದರಿಂದ ಪರಿಣಾಮ ಬೀರುವುದಿಲ್ಲ. ಬದಲಿಗೆ ಮದ್ಯವ್ಯಸನಿಗಳು ಪಕ್ಕದ ರಾಜ್ಯಗಳಿಂದ ತಂದು ಕುಡಿಯುವವರಿದ್ದಾರೆ. ಕರ್ನಾಟಕದಲ್ಲಿ ಸಾರಾಯಿ ನಿಷೇಧ ಮಾಡಿದ್ದರಿಂದ ಹಳ್ಳಿ ಜನರು ಕುಡಿಯುವುದನ್ನು ಬಿಟ್ಟಿಲ್ಲ. ಜತೆಗೆ ಹಳ್ಳಿಗಳಲ್ಲಿ ಕದ್ದು ಮದ್ಯ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದರು.
ಹೆಚ್ಚಾಯಿತು: ಹಲವು ರಾಜ್ಯಗಳು ಸಾರಾಯಿ ನಿಷೇಧವನ್ನು ಹಿಂಪಡೆದಿವೆ, ಜತೆಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು, ಗದಗ್‌ನ ಶಾಸಕ ಡಿ.ಆರ್.ಪಾಟೀಲ ಹಾಗೂ ಸಂಡೂರು ಶಾಸಕ ಎಂ.ವೈ.ಘೋರ್ಪಡೆ ಅವರುಗಳು ಸಾರಾಯಿ ಹರಾಜು ಮಾಡದಂತೆ ಆಗ್ರಹಿಸಿದ್ದರು, ಹೀಗಾಗಿ ಆ ವರ್ಷ ಬೆಳ್ತಂಗಡಿ, ಗದಗ ಹಾಗೂ ಸಂಡೂರು ತಾಲೂಕುಗಳಲ್ಲಿ ಸಾರಾಯಿ ಹರಾಜು ಮಾಡಲಿಲ್ಲ. ಇದರಿಂದಾಗಿ ಆ ತಾಲೂಕುಗಳಲ್ಲಿ ಕುಡಿಯುವವರ ಸಂಖ್ಯೆ ಕಡಿಮೆಯಾಗಲಿಲ್ಲ. ಬದಲಿಗೆ ಭಟ್ಟಿ ಸಾರಾಯಿ ಹೆಚ್ಚಾಯ್ತು ಎಂದು ಹೇಳಿದರು.
ದೇಶದಲ್ಲಿ ನಿಷೇಧವಾಗಬೇಕು: ವಾಣಿಜ್ಯ ತೆರಿಗೆ ನಂತರ, ರಾಜ್ಯದ 2ನೇ ದೊಡ್ಡ ಆದಾಯದ ಮೂಲ ಅಬಕಾರಿ, ಹಾಗೆಂದು ಜನರ ಆರೋಗ್ಯ ಹಾಳು ಮಾಡುವುದು ನಮ್ಮ ಉದ್ದೇಶವಲ್ಲ, ಆದರೆ, ಒಂದು ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸುವುದರಿಂದ ಪರಿಣಾಮ ಬೀರುವುದಿಲ್ಲ. ಹೀಗಾಗಿ ಇಡೀ ದೇಶದಲ್ಲಿ ಮದ್ಯಪಾನ ನಿಷೇಧವಾಗಬೇಕು ಎಂದರು. 1.86 ಲಕ್ಷ ಕೋಟಿ ರೂ.ನ ಕರ್ನಾಟಕ ಬಜೆಟ್‌ನಲ್ಲಿ ಅಬಕಾರಿ ಆದಾಯವೇ 15 ಸಾವಿರ ಕೋಟಿಯಷ್ಟಿದೆ. ಹಾಗೆಂದು ಜನರ ಆರೋಗ್ಯ ಹಾಳುಮಾಡಬೇಕು ಎಂಬುದು ಸರ್ಕಾರದ ಉದ್ದೇಶವಲ್ಲ. ಕೆಲವರು ಕುಡುವುದನ್ನೇ ದೊಡ್ಡ ಪ್ರತಿಷ್ಠೆ ಎಂದು ಭಾವಿಸಿದ್ದಾರೆ ಅವರಿಗೆ ಅರಿವು ಮೂಡಿಸಬೇಕು ಎಂದರು.
ಸಂಯಮ ಪ್ರಶಸ್ತಿ: ಖ್ಯಾತ ಮನೋವೈದ್ಯ ಡಾಸಿ.ಆರ್.ಚಂದ್ರಶೇಖರ್, ಹುಣಸೂರು ತಾಲೂಕು ಕಟ್ಟೆಮಳಲವಾಡಿಯ ಬೆಳಕು ಸಂಸ್ಥೆ ಸಂಸ್ಥಾಪಕ ನಿಂಗರಾಜ್ ಮಲ್ಲಾಡಿ ಹಾಗೂ ತುಮಕೂರಿನ ಆಚರ್ಡ್ ಸಂಸ್ಥೆ ಅಧ್ಯಕ್ಷ ಡಾ.ಎಚ್.ಜಿ.ಸದಾಶಿವಯ್ಯ ಅವರಿಗೆ ಸಿಎಂ ಸಿದ್ದರಾಮಯ್ಯ ಸಂಯಮ ಪ್ರಶಸ್ತಿ ನೀಡಿ ಗೌರವಿಸಿದರು.
ಸುತ್ತೂರು ಮಹಾ ಸಂಸ್ಥಾನ ಮಠದ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು. ಹುಲಿಯೂರು ದುರ್ಗ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ದಿವ್ಯ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮೇಯರ್ ಎಂ.ಜೆ.ರವಿಕುಮಾರ್, ಮಂಡಳಿ ಅಧ್ಯಕ್ಷ ಎಚ್.ಸಿ.ರುದ್ರಪ್ಪ, ಶಾಸಕರಾದ ಎಚ್.ಪಿ.ಮಂಜುನಾಥ್, ಕಳಲೆ ಕೇಶವಮೂರ್ತಿ ಹಾಜರಿದ್ದರು. ಶಾಸಕ ವಾಸು ಅಧ್ಯಕ್ಷತೆ ವಹಿಸಿದ್ದರು.
ನನಗೆ ನೈತಿಕತೆ ಇಲ್ಲ!: ಈ ಪ್ರಶಸ್ತಿ ಪ್ರದಾನ ಮಾಡಲು ನನಗೆ ನೈತಿಕತೆ ಇಲ್ಲ. ಆದರೂ ಸಂಯಮದಿಂದಿದ್ದೇನೆ ಎಂದು ಪ್ರದಾನ ಮಾಡುತ್ತಿದ್ದೇನೆ. ಹೀಗೆಂದವರು ಮುಖ್ಯಮಂತ್ರಿ ಸಿದ್ದರಾಮಯ್ಯ. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನಾನು ವಿದ್ಯಾರ್ಥಿ ದಿಸೆಯಲ್ಲಿ ಹಾಗೂ ಲಾಯರ್ ಆಗಿದ್ದಾಗ ಮದ್ಯಪಾನ ಮಾಡಿದ್ದೇನೆ. ಹೀಗಾಗಿ ಈ ಪ್ರಶಸ್ತಿ ಪ್ರದಾನ ಮಾಡಲು ನನಗೆ ನೈತಿಕತೆ ಇಲ್ಲ ಎಂದರು.