Advertisement

ಓಸ್ಟಿಯೋಪೊರೋಸಿಸ್‌ ಅಪಾಯವನ್ನು ಹೆಚ್ಚಿಸಬಲ್ಲ ಪಾನ ಹವ್ಯಾಸಗಳು

03:58 PM Nov 13, 2022 | Team Udayavani |

ಓಸ್ಟಿಯೋಪೊರೋಸಿಸ್‌ ಎಂಬ ಗಂಭೀರ ಕಾಯಿಲೆಯ ಲಕ್ಷಣಗಳು ಆರಂಭಿಕವಾಗಿ ಹೆಚ್ಚು ತೋರಿಬರದಿರುವುದರಿಂದಾಗಿ ಇದನ್ನು ಸಾಮಾನ್ಯವಾಗಿ “ನಿಶ್ಶಬ್ದ ಕೊಲೆಗಾರ’ ಎಂಬುದಾಗಿ ಸಂಬೋಧಿಸಲಾಗುತ್ತದೆ.

Advertisement

ಸಣ್ಣ ಏಟಿನಿಂದ ಕೂಡ ಮೂಳೆ ಮುರಿತಗಳು ಉಂಟಾಗುವಷ್ಟು ಮಟ್ಟಿಗೆ ಓಸ್ಟಿಯೋಪೊರೋಸಿಸ್‌ ವ್ಯಕ್ತಿಯ ಎಲುಬುಗಳನ್ನು ದುರ್ಬಲ ಮತ್ತು ಬಿಧುರಗೊಳಿಸುತ್ತದೆ. ಚಿಕಿತ್ಸೆ ಒದಗಿಸದೆ ಇದ್ದಲ್ಲಿ ಇದು ಸೊಂಟ ಮತ್ತು ಬೆನ್ನೆಲುಬಿನಲ್ಲಿ ಗಂಭೀರ ಮುರಿತಗಳಿಗೆ ಕಾರಣವಾಗಬಹುದಾಗಿದ್ದು, ಇದರಿಂದ ಭಾರೀ ನೋವು, ವೈಕಲ್ಯ ಉಂಟಾಗಬಹುದು ಮತ್ತು ಅದಕ್ಕಾಗಿ ಶಸ್ತ್ರಚಿಕಿತ್ಸೆಯ ಅಗತ್ಯ ಬೀಳಬಹುದು.

ಯುವಜನರಲ್ಲಿ ಆಲಸಿ ಜೀವನಶೈಲಿಯು ಓಸ್ಟಿಯೋಪೊರೋಸಿಸ್‌ ನಂತಹ ದೀರ್ಘ‌ಕಾಲೀನ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು. ವ್ಯಕ್ತಿಯೊಬ್ಬ ಓಸ್ಟಿಯೋಪೊರೋಸಿಸ್‌ಗೆ ತುತ್ತಾಗಲು ಕಾರಣವಾಗಬಹುದಾದಂತಹ ಕೆಲವು ಪಾನ ಹವ್ಯಾಸಗಳ ಬಗ್ಗೆ ಮಾಹಿತಿ ಇಲ್ಲಿದೆ.

  • ಅತಿಯಾದ ಮದ್ಯಪಾನ ದಿನಂಪ್ರತಿ ಅತಿಯಾಗಿ ಮದ್ಯಪಾನ ಮಾಡುವುದರಿಂದ ಮೆಗ್ನಿಸಿಯಂ ಮತ್ತು ಕ್ಯಾಲ್ಸಿಯಂನಂತಹ ಖನಿಜಾಂಶಗಳು ದೇಹವು ಅವುಗಳನ್ನು ಹೀರಿಕೊಳ್ಳುವುದಕ್ಕೆ ಮುನ್ನವೇ ಮೂತ್ರದ ಮೂಲಕ ಹೊರಹಾಕಲ್ಪಡುತ್ತವೆ. ಇದರಿಂದಾಗಿ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗಿ ವಿಟಮಿನ್‌ ಡಿ ಉತ್ಪಾದನೆ ಕುಂಠಿತವಾಗಬಹುದು. ಇದಲ್ಲದೆ, ಮದ್ಯಪಾನದ ಚಟದಿಂದಾಗಿ ಮಹಿಳೆಯರಲ್ಲಿ ಈಸ್ಟ್ರೋಜೆನ್‌ ಹಾರ್ಮೋನ್‌ ಉತ್ಪಾದನೆಯ ಪ್ರಮಾಣ ಕಡಿಮೆಯಾಗಿ ಋತುಚಕ್ರ ವಿಳಂಬವಾಗಬಹುದು.
  • ಶಕ್ತಿವರ್ಧಕ ಪೇಯಗಳನ್ನು ನಿಯಮಿತವಾಗಿ ಕುಡಿಯುವುದು ಶಕ್ತಿವರ್ಧಕ ಪೇಯಗಳು ಅಥವಾ “ಎನರ್ಜಿ ಡ್ರಿಂಕ್‌’ಗಳು ಹೆಚ್ಚು ಪ್ರಮಾಣದಲ್ಲಿ ಸೋಡಿಯಂ ಅಂಶವನ್ನು ಹೊಂದಿರುತ್ತವೆ. ಇದು ದೇಹಕ್ಕೆ ಆರೋಗ್ಯಕರವಲ್ಲ. ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಿದ್ದರೆ ಕ್ಯಾಲ್ಸಿಯಂ ಅಂಶ ಕಡಿಮೆಯಾಗುತ್ತದೆ.
  • ದಿನಂಪ್ರತಿ ಸೋಡಾ ಕುಡಿಯುವುದು ಸೋಡಾದಲ್ಲಿ ಸಾಮಾನ್ಯವಾಗಿ ಕಂಡುಬರುವ ಪಾಸ್ಫಾರಿಕ್‌ ಆಮ್ಲವು ದೇಹದಿಂದ ಮೂತ್ರದ ಮೂಲಕ ಕ್ಯಾಲ್ಸಿಯಂ ಅಂಶವು ಹೊರಹೋಗಲು ಕಾರಣವಾಗುವ ಇನ್ನೊಂದು ರಾಸಾಯನಿಕ ಅಂಶ. ಸೋಡಾದಲ್ಲಿರುವ ಕೆಫಿನ್‌ ಕೂಡ ಎಲುಬು ನಷ್ಟಕ್ಕೆ ಕಾರಣವಾಗಬಹುದು.
  • ಸಕ್ಕರೆ ಬೆರೆಸಿದ ಪಾನೀಯಗಳು ಇಂತಹ ಹಣ್ಣಿನ ರಸಗಳು, ಪಾನೀಯಗಳಲ್ಲಿ ಹೆಚ್ಚುವರಿಯಾಗಿ ಸಕ್ಕರೆ/ ಸಂಸ್ಕರಿತ ಸಕ್ಕರೆಯನ್ನು ಬೆರೆಸಲಾಗಿರುತ್ತದೆ. ಇದು ದೇಹದ ಎಲುಬುಗಳ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಲ್ಲುದು. ಇದರಿಂದ ಮೂತ್ರದ ಮೂಲಕ ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂ ಅಂಶ ದೇಹದಿಂದ ಹೊರಹೋಗುವ ಪ್ರಮಾಣ ಹೆಚ್ಚುತ್ತದೆ. ಅಲ್ಲದೆ ಇದು ದೇಹದಲ್ಲಿರುವ ಸಕ್ರಿಯ ವಿಟಮಿನ್‌ ಡಿ ಅಂಶವನ್ನು ಹೀರಿಕೊಳ್ಳುತ್ತದೆ.

ಮೇಲೆ ಹೇಳಲಾದ, ಎಲುಬುಗಳ ಆರೋಗ್ಯಕ್ಕೆ ಹಾನಿಕರವಾದ ಹವ್ಯಾಸಗಳನ್ನು ತ್ಯಜಿಸಿ ಹೈನು ಉತ್ಪನ್ನಗಳು, ತಾಜಾ ಹಣ್ಣಿನ ರಸಗಳು, ಬೇಳೆಕಾಳುಗಳಿಂದ ಕೂಡಿದ ಆರೋಗ್ಯಕರ ಮತ್ತು ಪೌಷ್ಟಿಕಾಂಶಸಹಿತ ಆಹಾರ ಶೈಲಿಯನ್ನು ರೂಢಿಸಿಕೊಳ್ಳಬೇಕು. ಜತೆಗೆ ವಿಟಮಿನ್‌ ಡಿ ಅಥವಾ ಮಲ್ಟಿವಿಟಮಿನ್‌ ಪೂರಕಗಳನ್ನು ಸೇವಿಸಬೇಕು. ಮದ್ಯಪಾನ ಮತ್ತು ಧೂಮಪಾನದಿಂದ ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳು ಉಂಟಾಗುತ್ತವೆ.

ಅತಿಯಾದ ಮದ್ಯಪಾನದಿಂದ ದೇಹದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾಗುತ್ತದೆ, ಹೀಗಾಗಿ ಇದರಿಂದ ದೂರವಿರಬೇಕು. ಈಗಾಗಲೇ ಓಸ್ಟಿಯೋಪೊರೋಸಿಸ್‌ ಇದ್ದರೆ ಉಪ್ಪೂರಿದ, ಕರಿದ ಆಹಾರಗಳಿಂದ ದೂರವಿರಿ, ಏಕೆಂದರೆ ಅವು ಎಲುಬುಗಳ ರೋಗಲಕ್ಷಣಗಳನ್ನು ಇನ್ನಷ್ಟು ಉಲ್ಬಣಗೊಳಿಸುತ್ತವೆ. ಯೋಗ, ಬಿರುಸಾದ ನಡಿಗೆಯಂತಹ ವ್ಯಾಯಾಮ ಚಟುವಟಿಕೆಗಳಲ್ಲಿ ನಿಯಮಿತವಾಗಿ ತೊಡಗುವುದು, ಸಕ್ರಿಯ ಜೀವನಶೈಲಿಯನ್ನು ಅಳವಡಿಸಿ ಕೊಳ್ಳುವುದರಿಂದ ಓಸ್ಟಿಯೋಪೊರೋಸಿಸನ್ನು ದೂರ ಇರಿಸಬಹುದು.

Advertisement

-ಡಾ| ಈಶ್ವರಕೀರ್ತಿ, ಕನ್ಸಲ್ಟಂಟ್‌ ಸ್ಪೈನ್‌ ಸರ್ಜನ್‌, ಕೆಎಂಸಿ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಥೊìಪೆಡಿಕ್‌ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next