Advertisement

ಮೊಣಕಾಲ್ಮೂರಿಗೆ ಕುಡಿಯುವ ನೀರಿನ ಟ್ಯಾಂಕ್‌ ಕೊಡುಗೆ

12:55 AM Apr 30, 2019 | sudhir |

ಮಡಿಕೇರಿ : ಸಾಮಾಜಿಕ ಕಳಕಳಿಯೊಂದಿಗೆ ಜನಸೇವೆಯಲ್ಲಿ ತೊಡಗಿಸಿಕೊಂಡು ಮಳೆಹಾನಿ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ್ದ ಹ್ಯುಮಾನಿಟಿ ಫ‌ಸ್ಟ್‌ ಇಂಡಿಯಾ ಸಂಸ್ಥೆ ಇದೀಗ ಕರ್ಣಂಗೇರಿ ಗ್ರಾಮದ ಮೊಣಕಾಲ್ಮೂರಿನಲ್ಲಿ ಸಾರ್ವ ಜನಿಕರಿಗೆ ಕುಡಿಯುವ ನೀರಿನ ಟ್ಯಾಂಕ್‌ನ್ನು ನಿರ್ಮಿಸಿಕೊಡುವ ಮೂಲಕ ಮಾನವೀಯತೆಯನ್ನು ಮೆರೆದಿದೆ.
ನೂತನ ಟ್ಯಾಂಕ್‌ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸ್ಥೆಯ ದಕ್ಷಿಣ ವಲಯದ ಉಸ್ತುವಾರಿ ಜಿ.ಎಂ.ಮುಹಮ್ಮದ್‌ ಶರೀಫ್, ಹ್ಯೂಮಾನಿಟಿ ಫ‌ಸ್ಟ್‌ ಇಂಡಿಯಾ ಸಂಸ್ಥೆಯು ಜಾಗತಿಕ ಅಹ್ಮದಿಯಾ ಮುಸ್ಲಿಮ್‌ ಜಮಾಅತ್‌ನ ಸಹೋದರ ಸಂಸ್ಥೆಯಾಗಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ, ಆರೋಗ್ಯ ಹಾಗೂ ಪ್ರಾಣ ರಕ್ಷಣೆಗೆ ಆದ್ಯತೆ ನೀಡುತ್ತಿದೆ. ಇದರೊಂದಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವುದು ಮತ್ತು ಬಡತನ ನಿರ್ಮೂಲನೆಯ ಗುರಿಯನ್ನು ಹೊಂದಿದೆ ಎಂದರು.
ಕಳೆದ ಆಗಸ್ಟ್‌ ತಿಂಗಳಿನಲ್ಲಿ ಕೊಡಗಿನಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದ 250ಕ್ಕೂ ಅಧಿಕ ನಿರಾಶ್ರಿತರಿಗೆ ಊಟ, ವಸತಿ ಸೌಲಭ್ಯವನ್ನು ಕಲ್ಪಿಸುವುದರೊಂದಿಗೆ ಪರಿಹಾರವನ್ನೂ ನೀಡಲಾಗಿದೆ. ಕೂರ್ಗ್‌ ಕಮ್ಯುನಿಟಿ ಹಾಲ್‌ನಲ್ಲಿ ಸಂತ್ರಸ್ತರಿಗೆ ಆಶ್ರಯ ನೀಡಿ ನೆರವನ್ನು ಒದಗಿಸಲಾಗಿದೆ. ಹಾನಿಗೀಡಾದ 15ಕ್ಕೂ ಹೆಚ್ಚಿನ ಮನೆಗಳನ್ನು ದುರಸ್ತಿ ಪಡಿಸಲಾಗಿದೆ ಎಂದರು.
ಗ್ರಾ.ಪಂ ಅಧ್ಯಕ್ಷೆ ರೀಟಾ ಮುತ್ತಣ್ಣ ಮಾತನಾಡಿ, ಕುಡಿಯುವ ನೀರನ್ನು ಒದಗಿಸುವುದಕ್ಕಿಂತ ಶ್ರೇಷ್ಠ ಸೇವೆ ಬೇರೊಂದಿಲ್ಲಎಂದರು. ಗ್ರಾ.ಪಂ. ಸದಸ್ಯ ಜಾನ್‌ಸನ್‌ ಪಿಂಟೋ, ಅಹ್ಮಮದಿಯಾ ಮುಸ್ಲಿಮ್‌ ಜಮಾಅತಿನ ಅಧ್ಯಕ್ಷ ಎಂ.ಬಿ.ಝಹೀರ್‌ ಅಹ್ಮದ್‌, ಗ್ರಾ.ಪಂ. ಸದಸ್ಯರಾದ ಬಿ.ಕೆ.ದೇವಕಿ ದಿನೇಶ್‌, ಪ್ರೇಮ್‌ಕುಮಾರ್‌, ಸಂಸ್ಥೆಯ ಮಡಿಕೇರಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕೆ.ಎಂ.ಇಬ್ರಾಹಿಂ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next