ನವದೆಹಲಿ: ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಪಕ್ಕ 500 ಮೀ. ವರೆಗೆ ಮದ್ಯದಂಗಡಿ ಇಡುವುದನ್ನು ನಿಷೇಧಿಸಿದ ಸುಪ್ರೀಂ ಕೋರ್ಟ್ ಆದೇಶ ವಿರುದ್ಧ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಕೋರ್ಟ್ ಬುಧವಾರ ಕೈಗೆತ್ತಿಕೊಳ್ಳಲಿದೆ. 2016 ಡಿಸೆಂಬರ್‌ನಲ್ಲಿ ಕೋರ್ಟ್ ಈ ಆದೇಶ ಹೊರಡಿಸಿದ್ದು, ಇದರ ವಿರುದ್ಧ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಸಂಬಂಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ಎಸ್.ಕೆ. ಕೌಲ್ ಅವರಿದ್ದ ನ್ಯಾಯಪೀಠ ಬುಧವಾರ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದೆ. ಏ.1ರಿಂದ ಸುಪ್ರೀಂ ಆದೇಶ ಜಾರಿಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಅರ್ಜಿ ತ್ವರಿತ ವಿಚಾರಣೆ ನಡೆಸುವಂತೆ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಹೇಳಿದ್ದಾರೆ. ಈ ವೇಳೆ ನ್ಯಾ.ಡಿ.ವೈ.ಚಂದ್ರಚೂಡ್ ಅವರು ಬುಧವಾರ ಲಭ್ಯವಿದ್ದಲ್ಲಿ ವಿಚಾರಣೆ ಅದೇ ದಿನ ನಡೆಸುವುದಾಗಿ ಮತ್ತು ಲಭ್ಯವಿಲ್ಲದ್ದಲ್ಲಿ ಪ್ರತ್ಯೇಕ ನ್ಯಾಯಪೀಠ ರಚಿಸುವುದಾಗಿ ಮುಖ್ಯನ್ಯಾಯ ಮೂರ್ತಿಗಳು ಹೇಳಿದ್ದಾರೆ. ಸುಪ್ರೀಂ ತನ್ನ ಆದೇಶದಲ್ಲಿ ಮಾರ್ಪಾಡು ಮಾಡಬೇಕು ಎಂದು ಕೇರಳ, ಪಂಜಾಬ್, ತೆಲಂಗಾಣ ಮತ್ತು ತಮಿಳುನಾಡು ಅರ್ಜಿ ಸಲ್ಲಿಸಿದ್ದವು.