ಐನಾಪುರ: ಈ ಭಾಗದ ಜನ ಹಾಗೂ ಜಾನುವಾರುಗಳ ಜೀವನಾಡಿ ಆಗಿರುವ ಕೃಷ್ಣಾ ನದಿ ನೀರಿನ ಮಟ್ಟ ಇಳಿಕೆಯಾಗುತ್ತಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಮಂಗಾವತಿ ಬಳಿ ರಾಜಾಪುರ ಬ್ಯಾರೇಜ್ ನೀರಿಲ್ಲದೆ ಬರಿದಾಗಿದೆ. ಮೊದಲೇ ಬರಗಾಲದ ಛಾಯೆ ಇರುವ ಈ ಪ್ರದೇಶದಲ್ಲಿ ನೀರಿನ ಮೂಲಾಧಾರವಾಗಿದ್ದ ಕೃಷ್ಣಾ ನದಿ ಒಡಲು ಬತ್ತುತ್ತಿರುವುದನ್ನು ಗಮನಿಸಿದರೆ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಲಕ್ಷಣಗಳು ಕಾಣುತ್ತಿವೆ.
ಹಿಪ್ಪರಗಿ ಆಣೆಕಟ್ಟೆಯ ಅಧಿಕಾರಿಗಳ ಅಂಕಿ ಅಂಶಗಳ ಪ್ರಕಾರ ಕೃಷ್ಣಾ ನದಿಯಲ್ಲಿ ಈಗ ಸುಮಾರು 1 ಟಿಎಂಸಿ ಅಡಿ ನೀರು ಲಭ್ಯವಿದ್ದು, ಜನರ ಬಳಕೆ ಹಾಗೂ ಬಿರು ಬಿಸಿಲಿನ ತಾಪದಿಂದಾಗಿ ಪ್ರತಿದಿನ ಸುಮಾರು ಅರ್ಧ ಅಡಿ ನೀರು ಇಳಿಕೆಯಾಗುತ್ತಿದೆ. ಇದೇ ಸ್ಥಿತಿ ಮುಂದುವರಿದಲ್ಲಿ ಮಾರ್ಚ್ ಕೊನೆ ಒಳಗಾಗಿಯೇ ಕೃಷ್ಣೆಯ ಒಡಲು ಬರಿದಾಗುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ನದಿಗೆ ಕೂಡಲೇ ಮಹಾರಾಷ್ಟ್ರದ ಡ್ಯಾಂಗಳಿಂದ ನೀರು ಬಿಡಿಸುವ ವ್ಯವಸ್ಥೆ ಮಾಡುವಂತೆ, ಅಥಣಿ, ಚಿಕ್ಕೋಡಿ, ರಾಯಬಾಗ ಹಾಗೂ ಜಮಖಂಡಿ ಭಾಗದ ರೈತರು ಜನಪ್ರತಿನಿ ಧಿಗಳು ಹಾಗೂ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.
ಡ್ಯಾಂಗಳು ಭರ್ತಿ: ಕಳೆದ ಬಾರಿ ಮಹಾರಾಷ್ಟ್ರದಲ್ಲಿ ಮಳೆ ಚೆನ್ನಾಗಿ ಸುರಿದಿರುವುದರಿಂದ ಸದ್ಯ ಅಲ್ಲಿನ ಎಲ್ಲ ಪ್ರಮುಖ ಡ್ಯಾಂಗಳು ಸಂಪೂರ್ಣ ಭರ್ತಿಯಾಗಿವೆ. ಹೀಗಾಗಿ ಕೊಯ್ನಾ ಸೇರಿದಂತೆ ಅಗತ್ಯವಿರುವ ಎಲ್ಲ ಡ್ಯಾಂಗಳಿಂದ ನೀರು ಬಿಡಿಸುವಲ್ಲಿ ಜನಪ್ರತಿನಿ ಧಿಗಳು ಆಸಕ್ತಿ ತೋರಿಸಬೇಕಾಗಿದೆ. ಮಾರ್ಚ್ ಕೊನೆಯೊಳಗಾಗಿ ಕೃಷ್ಣಾ ನದಿಗೆ 2ಟಿಎಂಸಿ ಅಡಿ ನೀರು ಬಿಡುವ ವ್ಯವಸ್ಥೆ ಆಗಬೇಕಿದೆ. ಏಕೆಂದರೆ ಸಂಪೂರ್ಣ ಬರಿದಾದ ನಂತರ ನದಿಗೆ ನೀರು ಬಿಟ್ಟರೆ ಪ್ರಯೋಜನವಿಲ್ಲ ಎಂಬುದು ಈ ಭಾಗದ ಜನರ ಅಭಿಪ್ರಾಯ.
ನೀರು ಹರಿಯುತ್ತಿರುವ ಈ ಸಂದರ್ಭದಲ್ಲಿಯೇ ಜನಪ್ರತಿನಿಧಿಗಳು ನದಿಗೆ ನೀರು ಹರಿಸಬೇಕು. ನೀರು ಬತ್ತಿದಾಗ ನೀರು ಹರಿಸಿದರೆ ಮರಳು ಮತ್ತು ತಗ್ಗು ಪ್ರದೇಶದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತು ಬಹಳಷ್ಟು ಪ್ರದೇಶಗಳ ಜನರಿಗೆ ನೀರು ಲಭ್ಯವಾಗುವುದಿಲ್ಲ. ಹೀಗಾಗಿ, ಜನಪ್ರತಿನಿಧಿಗಳು ಈಗಲೇ ಎಚ್ಚೆತ್ತುಕೊಳ್ಳಬೇಕಿದೆ.
ಕಳೆದ ಒಂದು ವಾರದಿಂದ ಕೃಷ್ಣಾ ನದಿಯ ನೀರಿನ ಪಾತ್ರ ಇಳಿಕೆಯಾಗುತ್ತಿದ್ದು, ಬರುವ 8-10 ದಿನಗಳಲ್ಲಿ ಕೃಷ್ಣೆಯ ಒಡಲು ಬತ್ತುವ ಆತಂಕ ಎದುರಾಗಿದೆ. ಜಿಲ್ಲಾಡಳಿತ ಇತ್ತ ಗಮನ ಹರಿಸಿ ನದಿಯಲ್ಲಿಯ ನೀರು ಬತ್ತುವುದಕ್ಕಿಂತ ಮುಂಚೆ ಮಹಾರಾಷ್ಟ್ರದ ಕೊಯ್ನಾ ಇಲ್ಲವೇ ಬೇರೆ ಡ್ಯಾಂನಿಂದ ನೀರನ್ನು ಹರಿ ಬಿಡಬೇಕು. ನದಿ ಬತ್ತಿದ ಮೇಲೆ ಬಿಟ್ಟರೆ ಪ್ರಯೋಜನವಾಗುವುದಿಲ್ಲ.ಅದಕ್ಕಾಗಿ ಜಿಲ್ಲಾಡಳಿತ ಇತ್ತ ಗಮನ ಹರಿಸಿ ನೀರು ಬಿಡಿಸುವ ವ್ಯವಸ್ಥೆ ಮಾಡಬೇಕು.
ಪ್ರೇಮಕುಮಾರ ಬಾಲೋಜಿ
ಅಧ್ಯಕ್ಷರು, ಜನಪರ ಹೋರಾಟ ಸಮಿತಿ
ಒಂದೆಡೆ ಕಬ್ಬಿಗೆ ಸಕ್ಕರೆ ಕಾರ್ಖಾನೆಗಳು ಅವೈಜ್ಞಾನಿಕ ಬೆಲೆ ನೀಡಿದರೆ, ಇನ್ನೊಂದೆಡೆ ಪ್ರಕೃತಿ ಕೈ ಕೊಟ್ಟಿದೆ ಇದರ ಪರಿಣಾಮ ಕೃಷ್ಣೆಯ ಒಡಲು ಬರಿದಾಗಿದೆ. ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಇಲ್ಲವೆ ಕಾಳಮ್ಮವಾಡಿ ಡ್ಯಾಂನಿಂದ ತಕ್ಷಣವೇ 2 ಟಿಎಂಸಿ ಅಡಿ ನೀರನ್ನು ಬಿಟ್ಟರೆ ಮಾತ್ರ ರೈತ
ಬದುಕುಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿವಹಿಸಿ ಕೃಷ್ಣಾ ನದಿಗೆ ನೀರು ಬಿಡಿಸುವ ವ್ಯವಸ್ಥೆ ಮಾಡಬೇಕು.
ಶೀತಲಗೌಡ ಪಾಟೀಲ
ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕ್ ಅಥಣಿ