ಬಟ್ಟೆಯ ರಾಶಿ ಎದುರೇ ನಿಂತು, “ನನ್ನ ಹತ್ರ ಬಟ್ಟೇನೇ ಇಲ್ಲಾ’ ಅಂತ ಗೊಣಗುತ್ತಾ, “ಯಾವ ಡ್ರೆಸ್ ಹಾಕೋದಪ್ಪಾ ಇವತ್ತು’ ಅಂತ ಗೊಂದಲಗೊಳ್ಳುವವಳೇ ಸ್ತ್ರೀ ಅಂತೆ!
ಈ ವ್ಯಾಖ್ಯಾನವನ್ನು ಕೊಟ್ಟವನು ನನ್ನ ಗಂಡನೇ ಇರಬೇಕು ಅಂತ ನಿಮ್ಮ ಪತಿರಾಯನ ಮೇಲೆ ಗುರ್ ಅನ್ನಬೇಡಿ. ಯಾಕಂದ್ರೆ, ಮಹಿಳೆಯರ ವಸ್ತ್ರ ಸಂಹಿತೆಯ ಬಗ್ಗೆ ಅನೇಕ ಸಮೀಕ್ಷೆಗಳು ನಡೆದಿವೆ. ಅದರಲ್ಲೊಂದು ಸಮೀಕ್ಷೆಯ ಪ್ರಕಾರ, ಮಹಿಳೆಯೊಬ್ಬಳು ತನ್ನ ಜೀವಿತಾವಧಿಯ 287 ದಿನಗಳನ್ನು, ಯಾವ ಬಟ್ಟೆ ಹಾಕೋದು ಅನ್ನೋ ಚಿಂತೆಯಲ್ಲಿಯೇ ಕಳೆಯುತ್ತಾಳಂತೆ. ಅಂದ್ರೆ, ಎಂಟು- ಒಂಬತ್ತು ತಿಂಗಳನ್ನು ಆಕೆ ವಾರ್ಡ್‌ರೋಬ್ ಎದುರೇ ಕಳೆಯುತ್ತಾಳೆ ಅನ್ನುತ್ತೆ ಸಮೀಕ್ಷೆ.
“ನಿನ್ನೆ ಹಾಕಿದ್ದು ತಿಳಿ ನೀಲಿ ಚೂಡಿ, ಹಾಗಾದ್ರೆ ಇವತ್ತು ಈ ನೀಲಿ ಟಾಪ್ ಹಾಕೋದು ಬೇಡ’, “ಈ ಟಾಪ್‌ಗೆ ಬ್ಲಾಕ್ ಜೀನ್ಸಾ, ಬ್ಲೂ ಜೀನ್ಸಾ?’, “ಆಫೀಸ್ ಫಂಕ್ಷನ್‌ಗೆ ಸೀರೇನಾ, ಚೂಡೀನಾ?’… ಇಂಥ ಗೊಂದಲಗಳೇ ಮಹಿಳೆಯರನ್ನು ಕಾಡುವುದು. ಕೆಂಪು, ಗಾಢ ಕೆಂಪು, ಗುಲಾಬಿ ಕೆಂಪು, ಕಪ್ಪು ಮಿಶ್ರಿತ ಕೆಂಪು… ಹೀಗೆ ಗಂಡಸರ ಕಣ್ಣಿಗೆ ಒಂದು ಬಣ್ಣವಾಗಿ ಕಾಣುವುದನ್ನೇ ಹತ್ತಾರು ಬಣ್ಣವಾಗಿ ನೋಡುವ ಕೆಲ ಹುಡುಗಿಯರು, ನಿನ್ನೆ ಹಾಕಿದ ಬಣ್ಣದ ಡ್ರೆಸ್ ಅನ್ನು ಇವತ್ತು ಹಾಕಲು ಒಪ್ಪುವುದಿಲ್ಲ. ಒಂದು ವಾರದಲ್ಲಿ ಒಂದೇ ಡ್ರೆಸ್ ಅನ್ನು ಎರಡು ಬಾರಿ ಹಾಕುವುದಂತೂ ಮಹಾ ಅಪರಾಧ! ಹೀಗಾಗಿ ಮಹಿಳೆಗೆ, ವಾರದ ದಿನಗಳಲ್ಲಿ ದಿನಕ್ಕೆ ಸರಾಸರಿ 17 ನಿಮಿಷ ಹಾಗೂ ವಾರಾಂತ್ಯಗಳಲ್ಲಿ 14 ನಿಮಿಷ ಬೇಕಂತೆ, ಧರಿಸುವ ಬಟ್ಟೆಯನ್ನು ಕಪಾಟಿನಿಂದ ಆರಿಸಲು. ಹಾಗಂತ ನಾವು ಹೇಳಿದ್ದಲ್ಲ, ಸಮೀಕ್ಷೆಯಲ್ಲಿ ಭಾಗಿಯಾದ ಮಹಿಳೆಯರೇ ಒಪ್ಪಿಕೊಂಡಿದ್ದು.