“ಅವರ ಮಗನಿಗೆ ವಯಸ್ಸು 19. ತಮ್ಮ ಪ್ರೀತಿಯ ಮಗನಿಗೋಸ್ಕರ ಆ ತಂದೆ ಸುಮಾರು ಇಪ್ಪತ್ತು ಸಲ ಮಗನ ಕಾಲೇಜ್‌ಗೆ ಹೋಗಿ, ಪ್ರಿನ್ಸಿಪಾಲ್ ಮುಂದೆ ಕೈ ಕಟ್ಟಿಕೊಂಡು ನಿಂತಿದ್ದರಂತೆ! ಅದಕ್ಕೆ ಕಾರಣ, ಆ ಮಗನಿಗೆ ಸಿನಿಮಾ ಮೇಲಿರುವ ಒಲವು. ಕೊನೆಗೆ ಮಗನ ಆಸೆ ಈಡೇರಿಸುವುದಕ್ಕಾಗಿಯೇ, “19 ಏಜ್ ಈಸ್ ನಾನ್ಸೆನ್ಸ್’ ಹೆಸರಿನ ಚಿತ್ರ ಮಾಡಿ ಇದೀಗ ಬಿಡುಗಡೆ ಮಾಡಲು ರೆಡಿಯಾಗಿದ್ದಾರೆ. ಅಂಥದ್ದೊಂದು ಸಿನಿಮಾ ನಿರ್ಮಿಸಿರೋದು ಲೋಕೇಶ್. ಆ ಸಿನಿಮಾಗೆ ಹೀರೋ ಆಗಿರೋದು ಮನುಶ್. ಅಂದಹಾಗೆ, ಈ ಚಿತ್ರದ ಮೂಲಕ ನಿರ್ದೇಶಕರಾಗಿರೋದು ಸುರೇಶ್ ಎಂ.ಗಿಣಿ. ಚಿತ್ರದ ಕುರಿತು ಹೇಳಲೆಂದೇ ಪತ್ರಕರ್ತರ ಮುಂದೆ ತಂಡದೊಂದಿಗೆ ಬಂದಿದ್ದರು ಗಿಣಿ.
ಮೊದಲು ಮಾತು ಶುರುಮಾಡಿದ ಗಿಣಿ ಹೇಳಿದ್ದಿಷ್ಟು. “ಇದೊಂದು ವಿಭಿನ್ನ ಕಥೆ. 19ರ ವಯಸ್ಸು ತುಂಬಾ ಕಾಡುವಂಥದ್ದು. ಹೆತ್ತವರಿಗೆ ಒಂದು ರೀತಿ ಆ ವಯಸ್ಸಿನ ಮಕ್ಕಳನ್ನು ತುಂಬಾ ಜೋಪಾನವಾಗಿ ನೋಡಿಕೊಳ್ಳುವ ಜವಾಬ್ದಾರಿ. ಮಕ್ಕಳು ಆ ವಯಸ್ಸಲ್ಲಿ ತಪ್ಪು ದಾರಿ ಎಲ್ಲಿ ಹಿಡಿದುಬಿಡುತ್ತಾರೆ ಎಂಬ ಭಯವೂ ಹೌದು. ಅದೇ ಕಥೆ ಇಲ್ಲೂ ಇದೆ. ಹೆಂಡ್ತಿ ಸತ್ತರೆ ಗಂಡ ಇನ್ನೊಂದು ಮದ್ವೆ ಆಗಬಹುದು. ಆದರೆ, ಗಂಡ ಸತ್ತರೆ ಹೆಂಡ್ತಿ ಇನ್ನೊಂದು ಮದ್ವೆ ಆಗುವಂತಿಲ್ಲ. ಸಮಾಜ ಅದನ್ನು ಅಷ್ಟಾಗಿ ಸ್ವೀಕರಿಸಲ್ಲ. ಇಲ್ಲಿ ಮದ್ವೆಯಾದ ಟೀನೇಜ್ ಹುಡುಗಿ, ಹುಡುಗನ ನಡುವೆ ನಡೆಯೋ ಕಥೆ ಇಲ್ಲಿದೆ. ಅದು ಏನೆಂಬುದೇ ಸಸ್ಪೆನ್ಸ್. ಸುಮಾರು 31 ದಿನಗಳ ಕಾಲ ಬೆಂಗಳೂರು, ರಾಮನಗರ ಇತರೆಡೆ ಚಿತ್ರೀಕರಣ ಮಾಡಲಾಗಿದೆ. ಸದ್ಯಕ್ಕೆ ಸಿನಿಮಾ ರೆಡಿಯಾಗಿದ್ದು ಇಷ್ಟರಲ್ಲೇ ಬಿಡುಗಡೆಗೆ ಮುಂದಾಗುತ್ತೇವೆ’ ಎಂದು ಹೇಳಿಕೊಂಡರು ಗಿಣಿ.
ನಿರ್ಮಾಪಕ ಲೋಕೇಶ್ ಅವರಿಗೆ ಇದು ಮೊದಲ ಅನುಭವ. ಮಗನಿಗೆ ಸಿನಿಮಾ ಮೇಲೆ ಆಸಕ್ತಿ ಹೆಚ್ಚು ಇದ್ದುದಕ್ಕೆ ಅವರು ಸಿನಿಮಾ ಮಾಡಿದ್ದಾರೆ. ಹಲವು ಸಲ ಮಗನ ಕಾಲೇಜ್‌ಗೆ ಹೋಗಿ, ಪ್ರಿನ್ಸಿಪಾಲ್ ಬಳಿ ಹೇಳಿಸಿಕೊಂಡಿದ್ದೇ ಆಯ್ತು. ಸದಾ ಸಿನಿಮಾ ಧ್ಯಾನ ಮಾಡುತ್ತಿದ್ದ ಮಗನನ್ನು ಕಂಡು ಕೊನೆಗೆ ಮಗನಿಗೆ ಓದುವುದರ ಜೊತೆಗೆ ಅವನ ಆಸೆಯನ್ನೂ ಈಡೇರಿಸಬೇಕು ಅಂತ ನಿರ್ಧರಿಸಿದ್ದರಿಂದ ಈ ಚಿತ್ರ ಆಗಿದೆಯಂತೆ. ಅವರೇ ಹೇಳುವಂತೆ, “ನಿರ್ದೇಶಕ ಗಿಣಿ ಅವರು ಹೇಳಿದ ಕಥೆ ಚೆನ್ನಾಗಿತ್ತು. ಟೀನೇಜ್ ಸ್ಟೋರಿ ಇದ್ದುದರಿಂದ ಮಗನಿಗೆ ಅದು ಸೂಕ್ತ ಆಗುತ್ತೆ ಎನಿಸಿ, ಸಿನಿಮಾ ಮಾಡಿದ್ದಾಗಿ ಹೇಳಿಕೊಂಡರು.
ಮನುಶ್ ಚಿತ್ರದ ಹೀರೋ. ಅವರಿಗಿದು ಮೊದಲ ಅನುಭವ. ಸಿನಿಮಾ ಮೇಲೆ ಪ್ರೀತಿ ಇತ್ತು. “ನನ್ನ ತಂದೆ ನನಗೆ ತಕ್ಕದಾದ ಕಥೆ ಹುಡುಕಿ ಈ ಚಿತ್ರ ಮಾಡಿಸಿದ್ದಾರೆ. ಕ್ಯಾಮೆರಾ ಮುಂದೆ ಬರುವ ಮುನ್ನ, ನಟನೆ ತರಬೇತಿ ಕಲಿತು, ಇಲ್ಲಿಗೆ ಬಂದಿದ್ದೇನೆ. ಹೊಸ ತಂಡಕ್ಕೆ ನಿಮ್ಮೆಲ್ಲರ ಬೆಂಬಲ ಇರಲಿ’ ಎಂದರು ಮನುಶ್.
ಮಧುಮಿತ ಈ ಚಿತ್ರದ ನಾಯಕಿ. ಚೆನ್ನೈ ಮೂಲದ ಮಧುಮಿತ ಅವರಿಗೆ ಇದು ಮೊದಲ ಚಿತ್ರ. ಅವರಿಗಿಲ್ಲಿ ಒಳ್ಳೆಯ ಅನುಭವ ಆಗಿದೆಯಂತೆ. “ಚಿತ್ರೀಕರಣ ಸಮಯದಲ್ಲಿ ಸಾಕಷ್ಟು ತಿಳಿದುಕೊಳ್ಳಲು ಸಹಾಯವಾಯ್ತು. ಸಿನಿಮಾ ನೋಡಿದವರಿಗೆ ಈಗಲೂ ಇಂತಹ ಘಟನೆಗಳು ನಡೆಯುತ್ತವೆ ಎನ್ನುವಷ್ಟರ ಮಟ್ಟಿಗೆ ಚಿತ್ರ ಮೂಡಿಬಂದಿದೆ’ ಎಂದರು ಅವರು.
ಲಕ್ಷ್ಮೀ ಮಂಡ್ಯ ಚಿತ್ರದ ಎರಡನೇ ನಾಯಕಿ. ಅವರಿಲ್ಲಿ ಬಬ್ಲಿ ಪಾತ್ರ ಮಾಡಿದ್ದಾರಂತೆ. ಹೊಸಬರಿಗೆ ನಿಮ್ಮ ಸಹಕಾರ, ಪ್ರೋತ್ಸಾಹ ಬೇಕು ಎಂಬುದು ಅವರ ಮಾತು.
ಇನ್ನು, “ಅನು’ ಮತ್ತು “ಮೇಸ್ತ್ರಿ’ ಮೂಲಕ ಹೀರೋ ಆಗಿದ್ದ ಬಾಲು ಈ ಚಿತ್ರದಲ್ಲೊಂದು ವಿಶೇಷ ಪಾತ್ರ ಮಾಡಿದ್ದಾರಂತೆ. ಒಂದು ರೀತಿಯ ನೆಗೆಟಿವ್ ಶೇಡ್ ಇದ್ದರೂ, ಹೊಸತರಹದ ಪಾತ್ರ ಮಾಡಿದ್ದಕ್ಕೆ ಖುಷಿ ಇದೆ. ಈಗಿನ ಟ್ರೆಂಡ್‌ಗೆ ತಕ್ಕ ಕಥೆ ಇಲ್ಲಿದೆ ಎಂಬುದು ಬಾಲು ಮಾತು.
ಎಸ್.ಕೆ.ಕುಟ್ಟಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಂದು ಲಹರಿ ವೇಲು, ಭಾ.ಮ.ಹರೀಶ್, ಭಾ.ಮ.ಗಿರೀಶ್ ಸೇರಿದಂತೆ ಇತರರು ಹೊಸ ತಂಡಕ್ಕೆ ಶುಭಕೋರಿದರು.