ನವದೆಹಲಿ:ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ತಾನು ದೇಶೀಯವಾಗಿ ಅಭಿವೃದ್ಧಿಪಡಿಸಿರುವ “ಸ್ಮಾರ್ಟ್’ಕ್ಷಿಪಣಿಯ ಪರೀಕ್ಷೆಯನ್ನು ಸೋಮವಾರಯಶಸ್ವಿಯಾಗಿ ನಡೆಸಿದೆ. ಒಡಿಶಾದ ವ್ಹೀಲರ್ ದ್ವೀಪದಲ್ಲಿ ನಡೆದ ಪರೀಕ್ಷೆಯಲ್ಲಿ ಕ್ಷಿಪಣಿಯು ನಿರೀಕ್ಷಿತ ಫಲಿತಾಂಶ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಸ್ಮಾರ್ಟ್ ಕ್ಷಿಪಣಿ?
SMART ಎಂದರೆ, “ಸೂಪರ್‌ಸಾನಿಕ್ ಮಿಸೈಲ್ ಅಸಿಸ್ಟೆಡ್ ರಿಲೀಸ್ ಆಫ್ ಟೊರ್ಪೆಡೊ’ (ಸ್ಮಾರ್ಟ್) ಎಂದರ್ಥ. ಇದು ಎರಡು ಅಸ್ತ್ರಗಳ ಸಂಯುಕ್ತ ರೂಪ.
ಒಂದು- ಕ್ಷಿಪಣಿ, ಮತ್ತೂಂದು-ಟೊರ್ಪೆಡೊ (ಕ್ಷಿಪಣಿಯ ಶಿರದಲ್ಲಿರುವ ಸ್ಫೋಟಕ). ಇವರಡನ್ನೂ ಸೂಪರ್‌ಸಾನಿಕ್ ತಂತ್ರಜ್ಞಾನದೊಂದಿಗೆ ಬೆಸೆಯಲಾ
ಗಿದೆ. ಹಾಗಾಗಿ, ಇದು ಸಾಮಾನ್ಯಕ್ಷಿಪಣಿಗಿಂತ ಹೆಚ್ಚು ವೇಗವಾಗಿ, ಹೆಚ್ಚು ದೂರದವರೆಗೆ ಸಾಗಬಲ್ಲದು.
ಉಪಯೋಗಗಳೇನು?
*ಕ್ಷಿಪಣಿಯನ್ನು ಮುಖ್ಯವಾಗಿ ಸಮುದ್ರದ ಆಳದಲ್ಲಿ ಗುಪ್ತವಾಗಿ ಸಂಚರಿಸುವ ಶತ್ರುಗಳ ಜಲಾಂತರ್ಗಾಮಿಗಳನ್ನು (ಸಬ್‌ಮರೀನ್) ನಾಶಪಡಿಸಲು ಬಳಸಲಾಗುತ್ತದೆ.
*ಯುದ್ಧ ನೌಕೆಯಿಂದ, ಜಲಾಂತರ್ಗಾಮಿಯಿಂದ ಅಥವಾ ಯುದ್ಧ ವಿಮಾನಗಳಿಂದ ಇದನ್ನು ಬಳಸಬಹುದು.
Related Articles
* ಯುದ್ಧ ವಿಮಾನಗಳ ಮೂಲಕ ಆಕಾಶದಿಂದ ಇದನ್ನು ಉಡಾಯಿಸಿದಾಗ, ಸಮುದ್ರದೊಳಕ್ಕೆ ಬಿದ್ದ ತಕ್ಷಣ ಜಲಾಂತರ್ಗಾಮಿ ಇರುವ ದಿಕ್ಕಿನ ಕಡೆಗೆ ಸಾಗಿ ಅದನ್ನು ಧ್ವಂಸ ಗೊಳಿಸುವ ಛಾತಿಯನ್ನು ಇದು ಹೊಂದಿದೆ.
*ಸಮುದ್ರದೊಳಗೆ 350 ನಾಟಿಕಲ್ ಮೈಲುಗಳವರೆಗೆ (ಸುಮಾರು 650 ಕಿ.ಮೀ.) ಕ್ಷಿಪಣಿ ಸಾಗಬಲ್ಲದು.
ಜಲಾಂತರ್ಗಾಮಿ ನಿಗ್ರಹ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾರತಕ್ಕೆ ಸಿಕ್ಕ ಅತಿ ದೊಡ್ಡ ಯಶಸ್ಸು ಇದು. ಇದಕ್ಕಾಗಿ ಡಿಆರ್‌ಡಿಒ ಹಾಗೂ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ನೆರವಾದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
●ರಾಜನಾಥ್ ಸಿಂಗ್, ರಕ್ಷಣಾ ಸಚಿವ