ಬೆಂಗಳೂರು: ನೇತ್ರ ಚಿಕಿತ್ಸೆ ಹಾಗೂ ನೇತ್ರದಾನ ಚಳವಳಿಗೆ ಮಹತ್ತರ ಕೊಡುಗೆ ನೀಡಿರುವ ನಾರಾಯಣ ನೇತ್ರಾಲಯದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೆ. ಭುಜಂಗ ಶೆಟ್ಟಿ ಅವರಿಗೆ 2018ರ ಸಾಲಿನ ಹೆಲೆನ್ ಕೆಲ್ಲರ್ ಸ್ಮರಣಾರ್ಥ “ಸೇವಾರತ್ನ’ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಡಾ. ಕೆ. ಮರುಳಸಿದ್ಧಪ್ಪ ಅವರು ಶನಿವಾರ ಪ್ರದಾನ ಮಾಡಿದರು.
ರಾಜಾಜಿನಗರದ ಕದಂಬ ಅಂಗವಿಕಲರ ಸಾಂಸ್ಕೃತಿಕ ಕಲ್ಯಾಣ ಸಂಸ್ಥೆ ನೀಡುವ ಈ ಪ್ರಶಸ್ತಿಯನ್ನು ಸೀಕರಿಸಿ ಮಾತನಾಡಿದ ಡಾ. ಭುಜಂಗ ಶೆಟ್ಟಿ ಅವರು “ಹೆಲೆನ್ ಕೆಲ್ಲರ್ ದೃಷ್ಟಿ ಹಾಗೂ ಶ್ರವಣ ದೋಷವುಳ್ಳ ವ್ಯಕ್ತಿಯಾಗಿದ್ದರೂ ವಿಶ್ವದ ಅತ್ಯಂತ ಗೌರವ ಗಳಿಸಿದ ರಾಜಕಾರಣಿ, ವಾಗ್ಮಿ ಹಾಗೂ ಲೇಖಕಿಯಾಗಿದ್ದರು ಎಂದರು.
ಅಂಧತ್ವದಲ್ಲಿ ಗುಣಪಡಿಸಬಲ್ಲ ಹಾಗೂ ಗುಣಪಡಿಸಲಾಗದ ವಿಧಗಳಿವೆ. ವೈದ್ಯರಾಗಿ ನಾವು ಗುಣಪಡಿಸಲಾಗದ ಅಂಧತ್ವಕ್ಕೆ ಏನೂ ಮಾಡಲಾಗದು. ಆದರೆ ಗುಣಪಡಿಸಲಾಗುವ ಅಂಧತ್ವವುಳ್ಳ ಒಬ್ಬ ವ್ಯಕ್ತಿ ಇದ್ದರೂ ಅದು ನಮ್ಮದೇ ವೈಫಲ್ಯವಾಗುತ್ತದೆ. ಹೆಲೆನ್ ಕೆಲ್ಲರ್ ಒಮ್ಮೆ ಹೇಳಿದಂತೆ, “ಅಂಧತ್ವಕ್ಕಿಂತ ನಿಕೃಷ್ಟವಾದುದು ಏನಾದರೂ ಇದ್ದರೆ ಅದು ದೂರದೃಷ್ಟಿಯಲ್ಲದ ದೃಷ್ಟಿ’ ಎನ್ನುವಂತೆ ಗುಣಪಡಿಸಬಲ್ಲ ಅಂಧತ್ವವನ್ನು ನಿವಾರಿಸುವುದೇ ನಮ್ಮ ಗುರಿ.
ಈ ಸಂಸ್ಥೆ ಅದ್ಭುತ ವ್ಯಕ್ತಿಯ ಸ್ಮರಣೆಯಲ್ಲಿ ಪ್ರಶಸ್ತಿ ನೀಡಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ದೃಷ್ಟಿ ಸಮಸ್ಯೆಯುಳ್ಳವರನ್ನು ಸಬಲೀಕರಣಗೊಳಿಸಲು ನಾನು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇನೆ. ಇದು ನನಗೆ ವೈಯಕ್ತಿಕವಾಗಿ ನೀಡಿರುವ ಪ್ರಶಸ್ತಿಯಲ್ಲ ಬದಲಿಗೆ ಕಳೆದ 35 ವರ್ಷಗಳಿಂದ ನಾರಾಯಣ ನೇತ್ರಾಲಯ ಮಾಡುತ್ತಿರುವ ಮಹತ್ತರ ಕೆಲಸಕ್ಕೆ ನೀಡಲಾದ ಪ್ರಶಸ್ತಿಯಾಗಿದೆ ಎಂದು ನುಡಿದರು.