Advertisement

ಇನ್ನೂ ಬಗೆಹರಿದಿಲ್ಲ ದ್ರಾವಿಡ್‌ ಸ್ವಹಿತಾಸಕ್ತಿ ವಿವಾದ

04:09 PM Aug 09, 2019 | Team Udayavani |

ಮುಂಬಯಿ: ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ಮುಖ್ಯಸ್ಥರಾಗಿ ಕಳೆದ ತಿಂಗಳು ಅಧಿಕಾರ ಸ್ವೀಕರಿಸಿದ ರಾಹುಲ್‌ ದ್ರಾವಿಡ್‌ ಸ್ವಹಿತಾಸಕ್ತಿ ವಿವಾದ ಸದ್ಯದಲ್ಲಿ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.

Advertisement

ಇಂಡಿಯಾ ಸಿಮೆಂಟ್ಸ್‌ ಉಪಾಧ್ಯಕ್ಷರಾಗಿರುವ ದ್ರಾವಿಡ್‌, ಸಂಬಳರಹಿತ ರಜೆ ಪಡೆದಿ ದ್ದೇನೆಂದು ಬಿಸಿಸಿಐಗೆ ತಿಳಿಸಿ, ಸ್ವಹಿತಾಸಕ್ತಿಯಿಂದ ಪಾರಾಗಲು ಯತ್ನಿಸಿ ದ್ದರು. ಆದರೆ ಇದು ಸ್ವಹಿತಾಸಕ್ತಿ ವಿವಾದದಿಂದ ಪಾರಾಗಲು ಸಾಕಾಗುವುದಿಲ್ಲ ಎಂದು ಬಿಸಿಸಿಐ ವಿಶೇಷ ವಿಚಾರಣಾಧಿಕಾರಿ ಜೈನ್‌ ತಿಳಿಸಿದ್ದಾರೆ. ಅಲ್ಲಿಗೆ
ದ್ರಾವಿಡ್‌ ಎರಡರಲ್ಲೊಂದು ಹುದ್ದೆ ತೊರೆಯುವುದು ಅನಿವಾರ್ಯ.

ದ್ರಾವಿಡ್‌ ಎನ್‌ಸಿಎ ಮುಖ್ಯಸ್ಥರಾಗಿರುವ ಜತೆಗೆ, ಎನ್‌. ಶ್ರೀನಿವಾಸನ್‌ ಮಾಲಕತ್ವದ ಇಂಡಿಯಾ ಸಿಮೆಂಟ್ಸ್‌ ಕಂಪೆನಿಯ ಉಪಾಧ್ಯಕ್ಷರೂ ಆಗಿದ್ದಾರೆ. ಇಂಡಿಯಾ ಸಿಮೆಂಟ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ತಂಡದ ಮಾಲಕ ಸಂಸ್ಥೆ ಕೂಡ ಆಗಿರುವುದು ಸ್ವಹಿತಾಸಕ್ತಿಗೆ ಕಾರಣವಾಗಿದೆ.

ದ್ರಾವಿಡ್‌ ಎನ್‌ಸಿಎ ಹುದ್ದೆ ಸ್ವೀಕರಿಸುವಾಗಲೇ ಈ ವಿಚಾರ ಬಿಸಿಸಿಐಗೆ ತಿಳಿದಿತ್ತು. ಆದರೂ ದ್ರಾವಿಡ್‌ ಅಧಿಕಾರ ಸ್ವೀಕರಿಸಿದ್ದರಿಂದ, ವಿವಾದ ಬಗೆಹರಿದಿದೆ ಎಂದೇ ಭಾವಿಸಲಾಗಿತ್ತು. ಆದರೆ ದ್ರಾವಿಡ್‌ಗೆ ಸಂಬಳರಹಿತ ರಜೆ ಪಡೆಯುವಂತೆ ಸೂಚಿಸಿ ವಿವಾದವನ್ನು ಬಗೆಹರಿಸಲು ಯತ್ನಿಸಿದ್ದೇ ಬಿಸಿಸಿಐ ಆಡಳಿತಾಧಿಕಾರಿಗಳು ಎಂಬ ಕುತೂಹಲಕಾರಿ ಸಂಗತಿ ಈಗ ಬೆಳಕಿಗೆ ಬಂದಿದೆ. ಇದನ್ನು ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆ ಸದಸ್ಯ ಸಂಜೀವ್‌ ಗುಪ್ತಾ ಪ್ರಶ್ನಿಸಿ, ಡಿ.ಕೆ. ಜೈನ್‌ಗೆ ದೂರು ಸಲ್ಲಿಸಿದ್ದರು.

ಸಂಬಳ ರಹಿತ ರಜೆ ಸಾಲದು
ದ್ರಾವಿಡ್‌ ಇಂಡಿಯಾ ಸಿಮೆಂಟ್ಸ್‌ ಉಪಾಧ್ಯಕ್ಷರಾಗಿ ಸಂಬಳರಹಿತ ರಜೆ ಪಡೆದಿರುವುದು, ಅವರು ಸ್ವಹಿತಾಸಕ್ತಿಯಿಂದ ಪಾರಾಗಲು ಸಾಕಾಗುವುದಿಲ್ಲ. ರಜೆ ಪಡೆದಿದ್ದಾರೆಂದರೆ ಹುದ್ದೆಯಿಂದಲೇ ಕೆಳಗಿಳಿದಿದ್ದಾರೆ ಎಂದು ಅರ್ಥವಲ್ಲ. ಸ್ವಹಿತಾಸಕ್ತಿ ನಿಯಮದಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ನಿಯಮವೇ ಇದೆ ಎಂದು ಡಿ.ಕೆ. ಜೈನ್‌ ಹೇಳಿದ್ದಾರೆ.

Advertisement

ಕಿರಿಯರ ಕೋಚ್‌ ಆಗಿದ್ದಾಗ ಸಮಸ್ಯೆ ಇರಲಿಲ್ಲವೇ?
ಅಚ್ಚರಿಯೆಂದರೆ, ದ್ರಾವಿಡ್‌ಗೆ ಸ್ವಹಿತಾಸಕ್ತಿ ಸಮಸ್ಯೆ ಈ ಹಿಂದೆ ಏಕೆ ಉದ್ಭವವಾಗಲಿಲ್ಲ ಎನ್ನುವುದು. ಅವರು ಭಾರತ ಕಿರಿಯರ ಕ್ರಿಕೆಟ್‌ ತಂಡದ ತರಬೇತುದಾರರಾಗಿದ್ದಾಗ ಇಂಡಿಯಾ ಸಿಮೆಂಟ್ಸ್‌ ಉಪಾಧ್ಯಕ್ಷರಾಗಿದ್ದದ್ದು ಯಾರಿಗೂ ಗೊತ್ತಿರಲಿಲ್ಲವೇ? ಅಥವಾ ಈ ಹುದ್ದೆಯನ್ನು ದ್ರಾವಿಡ್‌ ಇತ್ತೀಚೆಗಷ್ಟೇ ಸ್ವೀಕರಿಸಿದ್ದೇ? ಎಂಬ ಬಗ್ಗೆ ಇನ್ನೂ ಖಚಿತವಾಗಿಲ್ಲ. ಒಂದು ವೇಳೆ ದ್ರಾವಿಡ್‌ ಬಹಳ ಹಿಂದೆಯೇ ಈ ಹುದ್ದೆ ಸ್ವೀಕರಿಸಿದ್ದರೂ, ಇದುವರೆಗೆ ಅದು ಗಮನಕ್ಕೆ ಬರಲಿಲ್ಲವೆಂದರೆ, ಬಿಸಿಸಿಐ ಬಗ್ಗೆಯೇ ಪ್ರಶ್ನೆ ಉದ್ಭವಿಸುತ್ತದೆ!

Advertisement

Udayavani is now on Telegram. Click here to join our channel and stay updated with the latest news.

Next