Advertisement

ಇನ್ನೂ 2 ವರ್ಷ ದ್ರಾವಿಡ್‌ ಕಿರಿಯರ ಕೋಚ್‌

03:45 AM Jul 01, 2017 | Team Udayavani |

ಹೊಸದಿಲ್ಲಿ: ವಿಶ್ವ ಕ್ರಿಕೆಟ್‌ ಕಂಡ ಸರ್ವಶ್ರೇಷ್ಠ ಆಟಗಾರರಲ್ಲೊಬ್ಬರಾದ ರಾಹುಲ್‌ ದ್ರಾವಿಡ್‌ ಭಾರತ ಕಿರಿಯರ ತಂಡದ ಕೋಚ್‌ ಆಗಿ ಇನ್ನೆರಡು ವರ್ಷದ ಗುತ್ತಿಗೆ ಪಡೆದಿದ್ದಾರೆ. ದ್ರಾವಿಡ್‌ ಅವರನ್ನೇ ಮುಂದಿನ 2 ವರ್ಷ ಕೋಚ್‌ ಆಗಿ ಮುಂದುವರಿಸುವುದಾಗಿ ಬಿಸಿಸಿಐ ಘೋಷಣೆ ಮಾಡುವುದರೊಂದಿಗೆ ಒಂದು ಹಂತದ ಗೊಂದಲ ತಣ್ಣಗಾಗಿದೆ. ಇನ್ನು ಹಿರಿಯರ ತಂಡದ ಕೋಚ್‌ ಹೆಸರು ಅಂತಿಮಗೊಂಡರೆ ಭಾರತ ಕ್ರಿಕೆಟ್‌ನ ಬಹುತೇಕ ಗೊಂದಲಗಳು ತಹಬಂದಿಗೆ ಬರಲಿವೆ.

Advertisement

ದ್ರಾವಿಡ್‌ ಅವರು 2015ರಂದು ಭಾರತ ಎ ಮತ್ತು 19 ವಯೋಮಿತಿಯೊಳಗಿನ ತಂಡದ ಕೋಚ್‌ ಆಗಿ ಆಯ್ಕೆಯಾಗಿದ್ದರು. ಅದರಲ್ಲಿ ದೊಡ್ಡ ಯಶಸ್ಸು ಕಂಡಿದ್ದರು. ಅವರನ್ನು ಹಿರಿಯರ ತಂಡದ ಕೋಚ್‌ ಹುದ್ದೆಗೂ ಪರಿಗಣಿಸಲಾಗಿತ್ತು ಎನ್ನುವುದು ವಿಶೇಷ.

ದ್ರಾವಿಡ್‌ ಸಾಧನೆಗಳು: ಒಬ್ಬ ಕ್ರಿಕೆಟಿಗನಾಗಿ ದ್ರಾವಿಡ್‌ ಸಾಧನೆಯನ್ನು ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಒಬ್ಬ ಕೋಚ್‌ ಆಗಿಯೂ ದ್ರಾವಿಡ್‌ ಭಾರೀ ಯಶಸ್ಸನ್ನೇ ಕಂಡಿದ್ದಾರೆ. ಯುವ ಕ್ರಿಕೆಟಿಗರು ದ್ರಾವಿಡ್‌ರನ್ನು ತಮ್ಮ ಆದರ್ಶ ಎಂದು ಪರಿಗಣಿಸುವಷ್ಟರ ಮಟ್ಟಿಗೆ ಅದರಲ್ಲಿ ಯಶಸ್ಸು ಕಂಡಿದ್ದಾರೆ. 2015ರಂದು ದ್ರಾವಿಡ್‌ ಮೊದಲ ಬಾರಿ ಕೋಚ್‌ ಆದಾಗ ಭಾರತ ಎ ತಂಡ ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ, ಆಫ್ರಿಕಾದಂತಹ ಬಲಿಷ್ಠ ತಂಡಗಳು ಭಾಗವಹಿಸಿದ್ದ  ತ್ರಿಕೋನ ಸರಣಿಯನ್ನು ಗೆದ್ದಿತ್ತು. 2016ರಲ್ಲಿ ನಡೆದ ಕಿರಿಯರ ವಿಶ್ವಕಪ್‌ನಲ್ಲಿ ಭಾರತ ಫೈನಲ್‌ಗೇರಿತ್ತು. ಪಂದ್ಯದ ಅಂತಿಮ ಹಂತದಲ್ಲಿ ರೋಚಕ ಸೋಲು ಕಂಡಿತ್ತು. ಅವರ ನೇತೃತ್ವದಲ್ಲಿ ಭಾರತ ಹಲವು ಎ ತಂಡದ ಸರಣಿಗಳು, 19 ವಯೋಮಿತಿಯೊಳಗಿನ ಸರಣಿಯನ್ನು ಭಾರತ ಗೆದ್ದಿದೆ. ಶ್ರೇಯಸ್‌ ಐಯ್ಯರ್‌, ರಿಷಭ್‌ ಪಂತ್‌, ಕರುಣ್‌ ನಾಯರ್‌, ಮನೀಶ್‌ ಪಾಂಡೆಯಂತಹ ಪ್ರತಿಭಾವಂತರನ್ನು ದೇಶಕ್ಕೆ ಪರಿಚಯಿಸಿದ್ದಾರೆ.

ಬಿಸಿಸಿಐ ಸಂತಸ
ಕಳೆದ 2 ವರ್ಷಗಳಲ್ಲಿ ರಾಷ್ಟ್ರೀಯ ತಂಡಕ್ಕೆ ಅತ್ಯುತ್ತಮ ಕಿರಿಯ ಆಟಗಾರರು ಪ್ರವೇಶಿಸುವಲ್ಲಿ ದ್ರಾವಿಡ್‌ ನೆರವಾಗಿದ್ದಾರೆ. ಈ ಕಿರಿಯರು ರಾಷ್ಟ್ರೀಯ ತಂಡದಲ್ಲಿ ಸೇರಿಕೊಂಡು ತಾವು ಯೋಗ್ಯರು ಎಂದು ಸಾಬೀತು ಮಾಡಿದ್ದಾರೆ. ಇನ್ನೂ ಎರಡು ವರ್ಷ ಅವರ ಸೇವೆ ವಿಸ್ತರಣೆಗೊಂಡಿರುವುದಕ್ಕೆ ನಮಗೆ ಬಹಳ ಸಂತೋಷವಾಗಿದೆ. ಇದು ಭಾರತ ಕ್ರಿಕೆಟ್‌ ಮಟ್ಟಿಗೆ ಶುಭಸೂಚನೆ, ಇನ್ನಷ್ಟು ಕಿರಿಯ ಪ್ರತಿಭೆಗಳು ಹೊರಹೊಮ್ಮುವುದಕ್ಕೆ ರಹದಾರಿಯಾಗಲಿದೆ.

-ಸಿ.ಕೆ.ಖನ್ನಾ, ಬಿಸಿಸಿಐ ಹಂಗಾಮಿ ಅಧ್ಯಕ್ಷ

ಹಿರಿಯರ ತಂಡದ ಕೋಚ್‌ ಪೈಪೋಟಿಯಿಂದ ಹೊರಕ್ಕೆ
ದ್ರಾವಿಡ್‌ ಅವರು ಕಿರಿಯರ ತಂಡಕ್ಕೆ 2 ವರ್ಷಗಳ ಮಟ್ಟಿಗೆ ಕೋಚ್‌ ಆಗಿ ನೇಮಕಗೊಂಡಿರುವುದರಿಂದ ಅವರು ಸದ್ಯದ ಮಟ್ಟಿಗೆ ಹಿರಿಯರ ತಂಡಕ್ಕೆ ಕೋಚ್‌ ಆಗುವುದಿಲ್ಲ ಎನ್ನುವುದು ಖಚಿತಗೊಂಡಿದೆ. ಅಲ್ಲಿಗೆ ಭಾರತ ಹಿರಿಯರ ತಂಡಕ್ಕೆ ಬೇರೊಬ್ಬ ಕೋಚ್‌ ನೇಮಕಗೊಳ್ಳುವುದು ಸ್ಪಷ್ಟವಾಗಿದೆ. ದ್ರಾವಿಡ್‌ ಉಮೇದುವಾರಿಕೆ ಕುರಿತು ಇದ್ದ ಗುಲ್ಲಿಗೆ ಇನ್ನು ತಡೆ ಬೀಳಲಿದೆ. ಸೆಹವಾಗ್‌, ಟಾಮ್‌ ಮೂಡಿ, ರವಿಶಾಸಿŒ ನಡುವೆ ಯಾರ ಹೆಸರು ಅಂತಿಮಗೊಳ್ಳುತ್ತದೆ ಎಂದು ಕಾದು ನೋಡಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next