ಬೆಂಗಳೂರು: ತಮ್ಮ ಕ್ರಿಕೆಟ್ ವೃತ್ತಿ ಬದುಕನ್ನು ರೂಪಿಸಿಕೊಳ್ಳಲು ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಮುಖ್ಯ ಕಾರಣರಾಗಿದ್ದಾರೆ ಎಂದು ಕರ್ನಾಟಕ ರಣಜಿ ತಂಡದ ನಾಯಕ ಕರುಣ್ ನಾಯರ್ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಕೋಚ್ ಆಗಿ ಮಾರ್ಗದರ್ಶನ ನೀಡಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ತಂಡಗಳಲ್ಲಿ ನಾನು ಆಡಿದ್ದೆ. ಈ ವೇಳೆ ಅವರು ನೀಡಿದ ಕೆಲವು ಸಲಹೆ, ಮಾರ್ಗದರ್ಶನದಿಂದಾಗಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಹಕಾರ ನೀಡಿದೆ ಎಂದು ಹೇಳಿದ್ದಾರೆ.
“ನಾನಿಂದು ಈ ಹಂತದ ಕ್ರಿಕೆಟರ್ ಆಗಿ ಗುರುತಿಸಿಕೊಳ್ಳುವಲ್ಲಿ ರಾಹುಲ್ ದ್ರಾವಿಡ್ ಅವರ ಪಾತ್ರ ದೊಡ್ಡದು. ಐಪಿಎಲ್‌ನಲ್ಲಿ ನನಗೆ ರಾಜಸ್ಥಾನ ಪರ ಆಡುವ ಅವಕಾಶವನ್ನು ಅವರು ನೀಡಿದ್ದರು. ನನ್ನಂತಹ ದೇಶಿ ಕ್ರಿಕೆಟಿಗನ ಮೇಲೆ ದ್ರಾವಿಡ್ ಅವರಂತಹ ದಿಗ್ಗಜ ಬ್ಯಾಟ್ಸ್ ಮನ್ ವಿಶ್ವಾಸ ಮತ್ತು ನಂಬಿಗೆ ಇರಿಸಿದ್ದು ನನಗೆ ತೃಪ್ತಿ ತಂದಿದೆ. ಐಪಿಎಲ್‌ನಲ್ಲಿ ನಾನೂ ಕೂಡ ಮಿಂಚಬಹುದು ಎಂಬ ಆತ್ಮವಿಶ್ವಾಸ ನನ್ನಲ್ಲಿ ಉದಯಿಸಿತ್ತು. ಕ್ರಿಕೆಟ್ ಕ್ಷೇತ್ರದಲ್ಲಿ ಅವರಿಂದ ಹಲವಾರು ಅವಕಾಶಗಳನ್ನು ಪಡೆದುಕೊಂಡಿದ್ದೇನೆ ಎಂದು ಯೂಟ್ಯೂಬ್ ಸಂದರ್ಶನದಲ್ಲಿ ಕರುಣ್ ಹೇಳಿಕೊಂಡಿದ್ದಾರೆ.
ರಾಹುಲ್ ಜತೆ ಒಳ್ಳೆಯ ಬಾಂಧವ್ಯ
ಕೆ.ಎಲ್. ರಾಹುಲ್ ಜತೆಗಿನ ಒಡನಾಟದ ಬಗ್ಗೆಯೂ ಮಾತನಾಡಿದ ಕರುಣ್, ರಾಹುಲ್ ಜತೆ ವಿವಿಧ ವಯೋವರ್ಗದಲ್ಲಿ ಕರ್ನಾಟಕ ತಂಡದ ಪರ ಆಡಿದ್ದೇನೆ. 2014-15ರ ಸಾಲಿನ ರಣಜಿ ಫೈನಲ್‌ನಲ್ಲಿ ತಮಿಳುನಾಡು ಮತ್ತು 2016-17ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈಯಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ದಾಖಲಿಸಿದ ತಮ್ಮ ತ್ರಿಶತಕಗಳ ವೇಳೆ ರಾಹುಲ್ ಜತೆ ಆಡಿರುವುದು ನನ್ನ ಕ್ರಿಕೆಟ್ ಬದುಕಿನ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ ಎಂದರು.
13 ವರ್ಷದೊಳಗಿನ ಕ್ರಿಕೆಟ್ ಮೂಲಕ ನಾನು ಮತ್ತು ರಾಹುಲ್ ಕ್ರಿಕೆಟ್ ಬಾಳ್ವೆ ಆರಂಭಿಸಿದೆವು. ಹೀಗಾಗಿ ಬಹಳ ದೀರ್ಘಕಾಲದಿಂದ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿದ್ದೇವೆ. ನಮ್ಮಿಬ್ಬರಲ್ಲಿ ಒಳ್ಳೆಯ ಬಾಂಧವ್ಯವಿದೆ. ನಾವಿಬ್ಬರೂ ಹೆಚ್ಚು ಮಾತನಾಡದೇ ಇದ್ದರೂ, ನಮ್ಮ ಆಟ ಹೇಗಿದೆ ಎಂಬುದನ್ನು ಚೆನ್ನಾಗಿ ಅರಿತಿದ್ದೇವೆ ಎಂದು ಕರುಣ್ ಹೇಳಿದ್ದಾರೆ.