ಮೆಲ್ಬರ್ನ್: ಐಸಿಸಿ ಟಿ20 ವಿಶ್ವಕಪ್ 2022ರಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ. ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ರೋಹಿತ್ ಶರ್ಮಾ 10 ವಿಕೆಟ್ ಗಳ ಅಂತರದ ಸೋಲನುಭವಿಸಿದೆ.
ಈ ಸೋಲಿನ ಬಳಿಕ ತಂಡದ ಹಿರಿಯ ಆಟಗಾರರನ್ನು ಟಿ20 ತಂಡದಿಂದ ಕೈಬಿಡಬೇಕು ಎಂಬ ಕೂಗು ಬಲವಾಗಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಶ್ವಿನ್ ಅಂತರವರಿಗೆ ಇನ್ನು ಟಿ20 ತಂಡದ ಅವಕಾಶ ಸಾಕು ಎಂಬ ಮಾತುಗಳು ಕೇಳಿಬರುತ್ತಿದೆ.
ಮುಂದಿನ ವರ್ಷ ಅಂದರೆ 2023 ರಲ್ಲಿ ಏಕದಿನ ಭಾರತದಲ್ಲಿ ನಡೆಯಲಿದೆ, ಮುಂದಿನ ಟಿ20 ವಿಶ್ವಕಪ್ ನಡೆಯುವುದು 2024 ರಲ್ಲಿ. ಭಾರತ ತಂಡವು ರೋಹಿತ್ (35 ವ), ವಿರಾಟ್ ಕೊಹ್ಲಿ (34 ವ), ರವಿಚಂದ್ರನ್ ಅಶ್ವಿನ್ (36 ವ), ಭುವನೇಶ್ವರ್ ಕುಮಾರ್ (32 ವ), ಮೊಹಮ್ಮದ್ ಶಮಿ (32 ವ) ಮುಂತಾದ 30ಕ್ಕೂ ಹೆಚ್ಚಿನ ಪ್ರಾಯದ ಆಟಗಾರರಿದ್ದಾರೆ. ಹೀಗಾಗಿ ಎರಡು ವರ್ಷದ ಅವಧಿಯವರೆಗೆ ಈ ಆಟಗಾರರು ಲಭ್ಯರಿರುತ್ತಾರೆಯೇ ಎಂಬುದು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ:ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕು: ಕಾಂಗ್ರೆಸ್ ನಿಂದ ಬಾಲಕನಿಗೆ ಲ್ಯಾಪ್‌ಟಾಪ್ ಉಡುಗೊರೆ
ಈ ಹಿರಿಯ ಆಟಗಾರರ ಟಿ20 ಕ್ರಿಕೆಟ್‌ನಲ್ಲಿ ಭವಿಷ್ಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೋಚ್ ರಾಹುಲ್ ದ್ರಾವಿಡ್ “ಈಗಲೇ ಈ ಬಗ್ಗೆ ಹೇಳುವುದು ತುಂಬಾ ಕಷ್ಟ. ಈ ಆಟಗಾರರು ಅದ್ಭುತ ಪ್ರದರ್ಶನಗಳನ್ನು ನೀಡಿದ್ದಾರೆ. ಅದರ ಬಗ್ಗೆ ಯೋಚಿಸಲು ನಮಗೆ ಒಂದೆರಡು ವರ್ಷಗಳಿವೆ. ಇಲ್ಲಿ ಕೆಲವು ಉತ್ತಮ ಗುಣಮಟ್ಟದ ಆಟಗಾರರಿದ್ದಾರೆ. ಈ ವಿಷಯದ ಬಗ್ಗೆ ಮಾತನಾಡಲು ಅಥವಾ ಯೋಚಿಸಲು ಇದು ಸರಿಯಾದ ಸಮಯವಲ್ಲ. ನಾವು ಅಲ್ಲಿಯವರೆಗೆ ಸಾಕಷ್ಟು ಪಂದ್ಯಗಳನ್ನು ಆಡಲಿದ್ದೇವೆ. ಭಾರತವು ಮುಂದಿನ ವಿಶ್ವಕಪ್ ಗಾಗಿ ಪ್ರಯತ್ನವನ್ನು ಮುಂದುವರಿಸುತ್ತದೆ” ಎಂದರು.