ಈ ಜೀವನದಲ್ಲಿ ಎಲ್ಲರಿಗೂ ಒಂದೊಂದು ಪಾತ್ರ. ಕೆಲವು ಮೂಲ ಪಾತ್ರ, ಕೆಲವು ಪೋಷಕ ಪಾತ್ರ, ಕೆಲವು ಅಥಿತೇಯ ಪಾತ್ರ. ಇಲ್ಲಿ ಪ್ರತಿಯೊಂದು ಪಾತ್ರಗಳೂ ನಮಗೆ ಒಂದೊಂದು ಪಾಠಕಲಿಸಲು ಸೃಷ್ಟಿಯಾಗಿವೆ. ಕಲಿತಿರುವುದು ಹನಿಯಷ್ಟು ಕಲಿಯಲಿರುವುದು ಸಾಗರದಷ್ಟು. ಜೀವನ ಕಲಿಸಿದಷ್ಟು ಕಲಿಯೋಣ.
ಬದುಕು ಒಂದು ಚರಣ, ನೆಡೆದಷ್ಟೂ ದಾರಿ, ಕಲಿತಷ್ಟು ಪಾಠ. ಇಲ್ಲಿ ನೈಜ ತಿರುವುಗಳು ಸಿಗುವುದೇ ಪಾಠ ಕಲಿಸುವ ಪಾತ್ರಧಾರಿಗಳ ಆಗಮನದಿಂದ. ಪ್ರತೀ ಚರಣದಲ್ಲೂ ಈ ರೀತಿಯ ತಿರುವುಗಳು ಇದ್ದೆ ಇದೆ. ಅವುಗಳು ನಿಮ್ಮ ಶಕ್ತಿ ಹೆಚ್ಚುಸುವ, ಶಕ್ತಿ ಕುಂದಿಸುವವುಗಳೂ ಆಗಿರಬಹುದು. ಆಯ್ಕೆ ನಿಮ್ಮದು. ಬೇಕಾದ ಹಾದಿಯಲ್ಲಿ ಶ್ರದ್ಧೆ, ಛಲ, ಸಂಯಮದಿಂದ ಹೆಜ್ಜೆ ಹಾಕಿ ಗೆಲ್ಲುವ ಸವಾಲು ಮಾತ್ರ ನಿಮ್ಮದು.
ಶೀರ್ಷಿಕೆಯಂತೆ ಕೆಲವು ನಾಟಕೀಯತೆಗಳನ್ನು ಎತ್ತಿಹಿಡಿಯುವ ಪ್ರಯತ್ನ. ನಾವು ವಿಚಾರಧಾರೆಗಳನ್ನು ಬೆನ್ನತ್ತುವ ಪಾತ್ರ ಬಯಸಬೇಕೇ ವಿನಃ ವ್ಯಾವಹಾರಿಕ ವಸ್ತು ಆಗಿರುವ ಹಣವಂತನ ಬಾಲ ಹಿಡಿಯುವ ಪಾತ್ರವಲ್ಲ. ಬದಲಾಗುತ್ತಿರುವ ವಿಶ್ವದಲ್ಲಿ ಎಲ್ಲರೂ ವಿದ್ಯಾವಂತರೇ, ಎಲ್ಲರೂ ಹಣವಂತರೇ ಆದರೆ ವಿಚಾರವಂತಿಕೆಯೇ ಬೇರೆ, ಅದರ ವೈಶಿಷ್ಟ್ಯವೇ ಬೇರೆ…
ಕಾಯಕನಾಥನ ಕಾಲೊತ್ತುವಳು ಲಕ್ಷ್ಮೀ. ಹಾಗೆಯೇ ವಿದ್ಯೆಗೆ ವಿನಯವೇ ಭೂಷಣ. ಕಾಯಕ ಮಾಡದೆ ಬಂದ ಹಣ. ವಿನಯವೇ ಇಲ್ಲದ ವಿದ್ಯಾರ್ಥಿ ಇಬ್ಬರು ಆತ್ಮ ವಂಚಕರೇ ಇದ್ದಂತೆ. ಇಂಥ ಹಣ ದುರಹಂಕಾರ ಕೊಟ್ಟರೆ ಈ ವಿದ್ಯೆ ಅಹಂಕಾರ ಕೊಡುತ್ತದೆ.
ಹಣ ಕೇವಲ ವ್ಯಾವಹಾರಿಕ ವಸ್ತುವೇ ವಿನಃ ಪ್ರತಿಷ್ಠೆ ಅಲ್ಲ, ಆದರೆ ಕೆಲ ಪಾತ್ರಗಳು ಹಣವಂತಿಕೆಯೇ ಮುಖ್ಯ ಎಂಬಂತೆ ಬಿಂಬಿಸುತ್ತವೆ. ಈ ಪಾತ್ರಗಳು ನಮ್ಮ ಸುತ್ತಲೂ ಇರುವುದು ಶೋಚನೀಯ. ಇಲ್ಲಿ ಹೇಳ ಹೊರಟಿರುವುದು ಒಂದೇ ಹಣವಂತರು ಎಂದು ತಮ್ಮ ಸ್ವಾಭಿಮಾನವನ್ನೇ ಮಾರಾಟಕ್ಕೆ ಇಡುವುದು, ಇಂಥ ಕಪಟಿಗಳ ಮುಂದೆ ಬಾಗುವುದು ಎಷ್ಟು ಸಮಂಜಸ…? ಇದು ನೀವು ನಿಮ್ಮ ಆತ್ಮಸಾಕ್ಷಿಗೆ ಕೇಳಬೇಕಾಗಿರುವ ಪ್ರಶ್ನೆ.
ಅಕ್ರಮ ಹಾದಿಯಲ್ಲಿರುವ ಹಣವಂತ ಮಾತ್ರ ಎಲ್ಲರನ್ನೂ ಕ್ಷೀಣವಾಗಿ ನೋಡಲು ಸಾಧ್ಯ. ಈ ರಂಗಮಂಚದಲ್ಲಿ ದಂದೆಕೋರ, ಅಕ್ರಮ ಆಸ್ತಿವಂತ ಪಾತ್ರಗಳಿಗೆ ಪೋಷಕರು ಹಿಂಬಾಲಕರ ಸಾಲು ಜಾಸ್ತಿ. ಇದು ಬದಲಾಗಬೇಕಿದೆ.
ಒಬ್ಬ ಹಣವಂತ ಮಾಡಿದ ತಪ್ಪನ್ನು ಅವನ ಹಣ ಮುಚ್ಚುವುದಾದರೆ, ಗುಣವಂತ ಮಾಡಿದ ತಪ್ಪುಗಳು ಅವನ ಗುಣವನ್ನೇ ಕೊಲ್ಲುತ್ತಿರುವುದು ಯಾಕೆ? ಈ ನವಯುಗದಲ್ಲಿ ವಿದ್ಯಾರ್ಥಿಗಳೆಲ್ಲ ವಿದ್ಯಾವಂತರಲ್ಲ, ವಿದ್ಯಾವಂತರೆಲ್ಲ ವಿಚಾರವಂತರಲ್ಲ. ವಿಚಾರವಂತಿಕೆಯೇ ಒಂದು ದೊಡ್ಡ ಆಸ್ತಿ.
ಬಣ್ಣ ಹಾಕದೆ ನಟಿಸೋ ನಾಟಕೀಯತೆ ನಮಗೆ ಯಾಕೆ. ಬದಲಾವಣೆ ಜಗದ ನಿಯಮ ಬದಲಾಗೋಣ ನೈಜತೆಗಳೊಂದಿಗೆ.
-ಮಂಜುನಾಥ್ ಕೆ. ಆರ್.
ದಾವಣಗೆರೆ