ಹುನಗುಂದ: ಆಧುನಿಕ ತಂತ್ರಜ್ಞಾನ ಮತ್ತು ಸಿನಿಮಾಗಳ ಹಾವಳಿಯಿಂದ ಗ್ರಾಮೀಣ ಸೊಗಡಾದ ನಾಟಕಗಳು ಕಣ್ಮರೆಯಾಗುತ್ತಿವೆ ಎಂದು ನಾಟಕ ನಿರ್ದೇಶಕ ಮಹಾದೇವ ಹಡಪದ ಹೇಳಿದರು.
ಪಟ್ಟಣದ ಪುರಸಭೆ ಮಂಗಲ ಭವನದಲ್ಲಿ ಹೊನ್ನಗುಂದ ಸಂಸ್ಕೃತಿ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಜ್ಞಾನಪೀಠ ವಿಜೇತ ಗಿರೀಶ ಕಾರ್ನಾಡರ ಕುರಿತಾದ ರಂಗನಮನ ಉಪನ್ಯಾಸ ಮತ್ತು ಡೋರ್ ನಂ-8 ನಾಟಕೋತ್ಸವದಲ್ಲಿ ಅವರು ಮಾತನಾಡಿದರು.
ಭಾರತೀಯ ನೈಜ ಪರಂಪರೆ, ಸಂಸ್ಕೃತಿ ಪ್ರತಿಬಿಂಬಿಸುವ ನಾಟಕಗಳು ಪುರಾಣವನ್ನು ಧರಿಸಿ ರಚನೆಯಾಗಿವೆ. ಭಾರತೀಯ ಪುರಾಣವನ್ನು ಮುಂದಿಟ್ಟುಕೊಂಡು ಅನೇಕ ನಾಟಕಗಳನ್ನು ರಚನೆ ಮಾಡಿ ಜಗತ್ತೇ ಒಂದು ಸಲ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಶ್ರೇಷ್ಠ ಸಾಹಿತಿ ಗಿರೀಶ ಕಾರ್ನಾಡರು. ಕಾರ್ನಾಡರು ನಾಟಕಕಾರಾಗಿ ಮಾತ್ರ ಜನಪ್ರಿಯತೆಯನ್ನು ಪಡೆದುಕೊಳ್ಳಲಿಲ್ಲ. ಚಲನಚಿತ್ರ ನಟರಾಗಿ, ನಿರ್ದೇಶಕರಾಗಿ ಮತ್ತು ಒಬ್ಬ ಒಳ್ಳೆಯ ವಿಮರ್ಶಕನಾಗಿ ಹೆಚ್ಚು ವಿಜೃಂಭಿಸಿದವರು ಎಂದರು.
ಹಿರಿಯ ರಂಗಕರ್ಮಿ ಜಿ.ವಿ. ದೇಶಪಾಂಡೆ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿ, ಕಾರ್ನಾಡರ ನಾಟಕಗಳಲ್ಲಿ ವೈಚಾರಿಕತೆ ಮತ್ತು ಪ್ರಾಚೀನ ಪರಂಪರೆಯ ದೊಡ್ಡ ಇತಿಹಾಸವೇ ಅಡಗಿಕೊಂಡಿದೆ. ಆ ನಾಟಕಗಳು ಸಮಾಜದ ಸ್ವಾಸ್ಥ್ಯ ಕಾಪಾಡುವುದರ ಜೊತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುತ್ತವೆ ಎಂದರು. ಕಾರ್ಯಕ್ರಮದ ನಂತರ ಕಾವ್ಯ ಕಡಮೆ,ನಾಗರಕಟ್ಟೆಯವರ ರಚನೆಯ ಡೋರ್ ನಂ-8 ನಾಟಕವನ್ನು ಮೈಸೂರಿನ ರಂಗನಿನಾದ ತಂಡದವರು ಪ್ರದರ್ಶಿಸಿದರು.
ಪ್ರೊ| ಸಿ.ಜಿ.ಹವಾಲ್ದಾರ್, ಹೊನ್ನಗುಂದ ಸಂಸ್ಕೃತ ಬಳಗದ ಹಿರಿಯ ಸದಸ್ಯ ಮಹಾಂತೇಶ ಅಗಸಿಮುಂದಿನ, ಸದಸ್ಯರಾದ ವೀರೇಶ ಕುರ್ತಕೋಟಿ, ವಿಜಯಕುಮಾರ ಕುಲಕರ್ಣಿ, ಚನ್ನಕೇಶವ ಅವರಾದಿ, ವಾದಿರಾಜ ಗುಡ್ಡದ, ಶಿವಬಸವ ಅಂಗಡಿ ಉಪಸ್ಥಿತರಿದ್ದರು. ಹೊಸಬ ತಂಡದ ಸದಸ್ಯ ಇಬ್ರಾಹಿಂ ನಾಯಕ ನಿರೂಪಿಸಿದರು.