Advertisement

ಸಾಹಿತ್ಯದಲ್ಲಿ ನಾಟಕ ರಚನೆ ಕಷ್ಟದ ಕೆಲಸ

06:14 PM Jan 29, 2022 | Team Udayavani |

ಬೆಳಗಾವಿ: ನಾಟಕ ರಚನೆ ಸಾಹಿತ್ಯದಲ್ಲಿ ಬಹಳ ಕಷ್ಟಕರ ಕೆಲಸ. ಸಾಹಿತಿಯಾದವನಿಗೆ ಸಾಹಿತ್ಯದ ಘನತ್ವ ಮತ್ತು ಲಘುತ್ವದ ಎರಡು ಕಲ್ಪನೆಗಳು ಇರಬೇಕು. ಆಗ ಮಾತ್ರ ಸಾಹಿತ್ಯ ರಸಯುಕ್ತವಾಗುವುದು ಎಂದು ಸಾಹಿತಿ ಡಾ| ಬಾಳಾಸಾಹೇಬ ಲೋಕಾಪುರ ಹೇಳಿದರು.

Advertisement

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಮತ್ತು ಸಾಹಿತ್ಯ ಕಲಾ ವೇದಿಕೆ ಕನ್ನಡ ಮಹಿಳಾ ಸಂಘದ ಆಶ್ರಯದಲ್ಲಿ ಶುಕ್ರವಾರ ಸಾಹಿತಿ ರಂಜನಾ ನಾಯಿಕ ಬರೆದ “ಕಾರಂತ್‌ ನೆನಪಿನ ಕಾರವಾನ್‌’ ಮತ್ತು ‘ಇಪ್ಪತ್ತೂಂದು ಬೆಳಕು ನೆರಳಿನಾಟ’ ನಾಟಕಗಳ ಸಂಗ್ರಹದ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಲೇಖಕಿಯರ ಸಂಘದ ಅಧ್ಯಕ್ಷೆ ಹೇಮಾವತಿ ಸೊನೋಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಮಹಿಳೆಯರು ತಮ್ಮದೇ ಆದ ಛಾಪು ಒತ್ತಿದ್ದಾರೆ. ಕೇವಲ ಕವನ ಸಂಕಲನ, ಕಥೆ, ಕಾದಂಬರಿ ಎನ್ನದೇ ನಾಟಕಗಳ ಸಂಗ್ರಹಕ್ಕೂ ಸಹಿತ ಪುಸ್ತಕ ರೂಪ ಕೊಡುತ್ತಿರುವುದು ಶ್ಲಾಘನೀಯ. ಇದು ಹೀಗೆಯೇ ಮುಂದುವರಿಯಲಿ ಎಂದು ಅಶಿಸಿದರು.

ನಾಟಕ ಸಂಗ್ರಹದ ಪರಿಚಯ ಮಾಡಿ ಮಾತನಾಡಿದ ಸಾಹಿತಿ ಡಾ| ಗುರುದೇವಿ ಹುಲೆಪ್ಪನವರಮಠ, ನಾಟಕಗಳಲ್ಲಿ ಸ್ವಾಮಿ ಅಯ್ಯಪ್ಪನ ಜನ್ಮ ವೃತ್ತಾಂತ, ಸೀತಾ ಪರಿತ್ಯಾಗ, ಶ್ರೀ ಕೃಷ್ಣನ ಮಹಿಮೆ ಇವುಗಳ ಕುರಿತು ವೈಜ್ಞಾನಿಕ ಕಾರಣ ಕೊಡುತ್ತ ಕೃತಿಯಲ್ಲಿ ಅಡಗಿರುವ ಮಾಹಿತಿ ವಿಶ್ಲೇಷಿಸಿದರು.

ಕೃತಿ ಪರಿಚಯ ಮಾಡಿದ ಸಾಹಿತಿ ಡಾ| ನಿರ್ಮಲಾ ಬಟ್ಟಲ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯ ನಾಟಕ ಅಭಿನಯದಲ್ಲಿ ಮುಖ್ಯವಾದದ್ದು. ಬೆಳಕಿನಲ್ಲಿ ನೆರಳಿನ ಮೂಲಕ ಸನ್ನಿವೇಶ ಸೃಷ್ಟಿಸುವುದರಿಂದ ಪ್ರೇಕ್ಷಕರಿಗೆ ಹೆಚ್ಚಿನ ವಿಷಯ ಜ್ಞಾನ ಅತ್ಯಂತ ಕಡಿಮೆ ಅವಧಿಯಲ್ಲಿ ತಿಳಿಸಬಹುದು ಎಂದು ಅಭಿಪ್ರಾಯಪಟ್ಟರು.

Advertisement

“ಕಾರಂತ್‌ ನೆನಪಿನ ಕಾರವನ್‌’ ಕೃತಿ ಪರಿಚಯಿಸಿದ ಡಾ| ಶೋಭಾ ನಾಯಿಕ ಮಾತನಾಡಿ, ಕಡಲ ತೀರ ಭಾರ್ಗವ ಡಾ| ಕಾರಂತರ ಆತ್ಮಚರಿತ್ರೆ ಜೀವನದ ಪಯಣ ಅದ್ಭುತವಾಗಿ ವರ್ಣಿಸಲಾಗಿದೆ. ಹಿರಿಯ ಮತ್ತು ಕಿರಿಯ ಸಾಹಿತಿಗಳ ಒಡನಾಟದಲ್ಲಿ ಕೃತಿ ರಚನೆಕಾರರು ರಚಿಸಿದ ಲೇಖನಗಳು ಅದ್ಭುತವಾಗಿ ಮೂಡಿ ಬಂದಿವೆ ಎಂದರು.

ಕೃತಿಕಾರರಾದ ರಂಜನಾ ನಾಯಿಕ ಮಾತನಾಡಿ, ಸಾಹಿತ್ಯ ರಂಜನೀಯಗೊಳಿಸುವಲ್ಲಿ ಹಿರಿಯರ ಮಾರ್ಗದರ್ಶನ ಪಡೆದು ರಚಿಸಲಾಗಿರುವ ನನ್ನ ಕೃತಿಗಳು ಓದುಗರನ್ನು ನಿಶ್ಚಿತವಾಗಿಯೂ ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಲೇಖಕಿಯರ ಸಂಘದ ಸದಸ್ಯೆ ರೋಹಿಣಿ ಯಾದವಾಡ ತಮ್ಮ ತಂದೆ ಶಿವಪುತ್ರ ಮತ್ತು ತಾಯಿ ಶಶಿಕಲಾ ಯಾದವಾಡ ಹೆಸರಿನಲ್ಲಿ 25 ಸಾವಿರ ರೂ. ದತ್ತಿನಿಧಿ ಸಂಘಕ್ಕೆ ನೀಡಿದರು.

ಈ ವೇಳೆ ಡಾ| ಕೆ.ಆರ್‌. ಸಿದ್ದಗಂಗಮ್ಮ, ಪಾರ್ವತಿ ಪಿಟಗಿ, ಜ್ಯೋತಿ ಮಾಳಿ, ಸುಧಾ ಪಾಟೀಲ, ಸುನಿತಾ ಸೊಲ್ಲಾಪುರ, ಪ್ರೇಮಾ ಪಾನಶೆಟ್ಟಿ, ಉಮಾ ಅಂಗಡಿ, ಆಶಾ ಯಮಕನಮರಡಿ, ವೀರಭದ್ರ ಅಂಗಡಿ ಸೇರಿದಂತೆ ಇತರರಿದ್ದರು. ಹಮೀದಾ ಬೇಗಂ ದೇಸಾಯಿ ಸ್ವಾಗತಿಸಿದರು. ಇಂದಿರಾ ಮೋಟೆಬೆನ್ನೂರ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ರಾಜನಂದಾ ಘಾರ್ಗಿ ನಿರೂಪಿಸಿದರು. ವಿದ್ಯಾ ಹುಂಡೇಕಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next