Advertisement

ಡ್ರಾಮಾ ಮಕ್ಕಳ ಸಾಮಾಜಿಕ ಕಳಕಳಿಯ ಸಿನಿಮಾ

11:43 AM Jun 03, 2017 | |

ಮಕ್ಕಳ ಆಟ, ತುಂಟಾಟ, ಅವರ ಮಾತು ಎಲ್ಲವೂ ಚೆಂದ. ಅದರಲ್ಲೂ ಶಾಲಾ ದಿನಗಳಲ್ಲಿ ಮಕ್ಕಳ “ಸೈನ್ಯ’, ಅವರ ಕನಸು, ಕಷ್ಟಕ್ಕೆ ಬೇಗನೇ ಮರುಗುವ ಮನಸು ದೊಡ್ಡವರನ್ನು ಬೇಗನೇ ಸೆಳೆಯುತ್ತದೆ. ಆದರೆ, ಮಕ್ಕಳು ಮಕ್ಕಳಾಗಿದ್ದರೆ ಇನ್ನೂ ಚೆಂದ. ಅವರಲ್ಲಿ ಬಾಯಲ್ಲಿ ಭಾಷಣ ಮಾಡಿಸಿದರೆ ಅದು ಕೇಳ್ಳೋಕೆ ಕಷ್ಟ. “ಎಳೆಯರು ನಾವು ಗೆಳೆಯರು’ ಚಿತ್ರ ಅಲ್ಲಲ್ಲಿ ಸಣ್ಣಪುಟ್ಟ ಭಾಷಣಗಳ ಜೊತೆಯೂ ನಿಮಗೆ ಒಂಚೂರು ಖುಷಿ ಕೊಡುತ್ತದೆ ಅಂದರೆ ಅದಕ್ಕೆ ಕಾರಣ ಅಲ್ಲಿ ನಟಿಸಿದ ಮಕ್ಕಳ ಚುರುಕುತನ.  

Advertisement

“ಎಳೆಯರು ನಾವು ಗೆಳೆಯರು’ ಚಿತ್ರದಲ್ಲಿ ನಟಿಸಿದ ಅಷ್ಟೂ ಮಕ್ಕಳ ಮುಖ ತೀರಾ ಹೊಸದೇನಲ್ಲ. ಈಗಾಗಲೇ “ಡ್ರಾಮಾ ಜೂನಿಯರ್’ ಶೋ ಮೂಲಕ ಪರಿಚಿತರಾಗಿದ್ದಾರೆ. ಆ ಮಕ್ಕಳನ್ನಿಟ್ಟುಕೊಂಡು ಮಾಡಿದ ಸಿನಿಮಾವಿದು. ಸಾಮಾನ್ಯವಾಗಿ ಮಕ್ಕಳ ಚಿತ್ರ ಮಾಡುವವರು ಮಕ್ಕಳ ತುಂಟತನದ ಜೊತೆಗೆ ಅವರಿಂದ ಒಳ್ಳೆಯ ಕೆಲಸ ಮಾಡಿಸುವ, ಊರಿಗೆ ಊರೇ ಮೆಚ್ಚುವಂತ ಸಾಧನೆ ಮಾಡಿಸುವ ಕಥೆಯೊಂದಿಗೇ ಬರುತ್ತಾರೆ.

ಯಾವುದಾದರೊಂದು ವಿಷಯದ ಸುತ್ತವೇ ಮಕ್ಕಳ ಸಿನಿಮಾ ಸುತ್ತುತ್ತವೆ. ಆದರೆ, ಇಲ್ಲಿ ಕೊಂಚ ಭಿನ್ನವಾಗಿ ಯೋಚಿಸಲಾಗಿದೆ. ಅದು ಯಾವುದೇ ಒಂದು ವಿಚಾರಕ್ಕೆ ಕಥೆಯನ್ನು ಸೀಮಿತ ಮಾಡದೇ, ಮಕ್ಕಳ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ಕೆಲವು ವಿಚಾರಗಳನ್ನು ಹೇಳುವ ಪ್ರಯತ್ನ ಮಾಡಿರುವುದು. ಅಂದಹಾಗೆ, ಇಲ್ಲಿ ಮಕ್ಕಳಿಂದ ಪರಿಹಾರ ಮಾಡಿಸಿರೋದು ಗಂಭೀರ ಸಮಸ್ಯೆಗಳನ್ನೇ ಎಂಬುದನ್ನು ಇಲ್ಲಿ ಹೇಳಬೇಕಾಗುತ್ತದೆ.

ಊರಿಗೆ ಶೌಚಾಲಯ, ಕುಡಿತದ ಮುಕ್ತಿ, ಬಿಸಿಯೂಟದ ಅಕ್ರಮ ಬಯಲು, ಸ್ವತ್ಛ ಭಾರತ … ಈ ವಿಷಯಗಳ ಸುತ್ತ ಆರಂಭದಲ್ಲಿ ಸಾಗುವ ಸಿನಿಮಾ ದ್ವಿತೀಯಾರ್ಧ ನಂತರ ಮಕ್ಕಳ ಮಾನವೀಯತೆಯನ್ನು ಬಿಂಬಿಸುತ್ತಾ ಸಾಗುತ್ತದೆ. ಇಲ್ಲಿ ಸಿಟಿ ಮಕ್ಕಳು ಜಾಣರು, ಹಳ್ಳಿ ಮಕ್ಕಳು ದಡ್ಡರು ಎಂದು ಕೆಲ ಶಿಕ್ಷಕರು ಮಾಡುವ ಭೇದ-ಭಾವವನ್ನು ಕೂಡಾ ಇಲ್ಲಿ ಸೂಕ್ಷ್ಮವಾಗಿ ತೋರಿಸಲಾಗಿದೆ.  ಮೊದಲೇ ಹೇಳಿದಂತೆ ಮಕ್ಕಳಿಂದ ಊರು, ದೇಶ ಉದ್ಧಾರ ಮಾಡಿಸಬೇಕೆಂಬ ಕಾರಣಕ್ಕೆ ಅತಿಯಾದ ಬೋಧನೆ ಮಾಡಿಸದಿರುವುದು ಈ ಸಿನಿಮಾದ ಪ್ಲಸ್‌ ಪಾಯಿಂಟ್‌.

ಗಂಭೀರ ವಿಷಯವನ್ನು ಮಕ್ಕಳಿಂದ ಮಜವಾಗಿ ಹೇಳಿಸಿದ್ದಾರೆ. ಆ ತುಂಟತನದಲ್ಲೇ ಹೇಳಬೇಕಾದ ಸಂದೇಶವನ್ನು ಹೇಳಿದ್ದಾರೆ. ಅದು ಈ ಚಿತ್ರದ ಪ್ಲಸ್‌ ಎನ್ನಬಹುದು. ಹಾಗೆ ನೋಡಿದರೆ “ಎಳೆಯರು ನಾವು ಗೆಳೆಯರು’ ಚಿತ್ರದ ಕಥೆ ಏನು ತೀರಾ ಹೊಸದಲ್ಲ. ಮಕ್ಕಳ ಇಂತಹ ಸಾಹಸದ ಕಥೆಗಳು ಈಗಾಗಲೇ ಬಂದಿವೆ. ಇಲ್ಲೂ ಅಂತಹ ಸಾಹಸದ ಕಥೆಗಳನ್ನೇ ಬೇರೆ ರೀತಿಯಲ್ಲಿ ನೀಡಲಾಗಿದೆ.

Advertisement

ಸಾಮಾನ್ಯವಾಗಿ ಮಕ್ಕಳ ಸಿನಿಮಾಗಳು, ಊರು, ಶಾಲೆಯ ಸುತ್ತ ನಡೆದರೆ, ಈ ಮಕ್ಕಳು ಊರು ಶಾಲೆಯನ್ನು ದಾಟಿ ಕಾಡಿಗೂ ಹೋಗಿದೆ. ಮಕ್ಕಳಲ್ಲಿರುವ ವಿಶೇಷ ಪ್ರತಿಭೆ ಹಾಗೂ ಅವರ ಮಾನವೀಯತೆ ಅವರನ್ನು ಕಾಡಿಗೆ ಕರೆದುಕೊಂಡು ಹೋಗುತ್ತದೆ. ಬಹುತೇಕ ಸಿನಿಮಾ ಕಾಡಿನಲ್ಲೇ ನಡೆಯುತ್ತದೆ. ಮಕ್ಕಳ ಫೈಟ್‌, ಬಿಲ್ಡಪ್‌ ಡೈಲಾಗ್‌, ರೈನ್‌ ಎಫೆಕ್ಟ್ … ಎಲ್ಲವೂ ಬೇಕಿತ್ತಾ ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡಬಹುದು. ಆದರೆ, ಮಕ್ಕಳ ಖುಷಿಗೆ ಅವೆಲ್ಲವನ್ನು ನೀವು ಹೊಟ್ಟೆಗೆ ಹಾಕಿಕೊಳ್ಳಬೇಕು.

ಇಲ್ಲಿ ನಟಿಸಿರುವ ಮಕ್ಕಳಲ್ಲಿ ಯಾರು ಚೆನ್ನಾಗಿ ನಟಿಸಿದ್ದಾರೆಂದರೆ ಹೇಳುವುದು ಕಷ್ಟ. ಏಕೆಂದರೆ, ಎಲ್ಲಾ ಮಕ್ಕಳ ಚುರುಕುತನ ಇಷ್ಟವಾಗುತ್ತದೆ. ತುಷಾರ್‌, ಮಹೇಂದ್ರ, ಸೂರಜ್‌, ನಿಹಾಲ್‌, ತೇಜಸ್ವಿನಿ, ಪುಟ್ಟರಾಜು, ಅಚಿಂತ್ಯ, ಅಭಿಷೇಕ್‌, ಅಮೋಘ…, ಮಹತಿ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ತಮ್ಮ ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ. ಉಳಿದಂತೆ ಶಂಕರ್‌ ಅಶ್ವತ್ಥ್ ಇಲ್ಲಿ ಮಕ್ಕಳ ಬೆನ್ನುತಟ್ಟುವ ಮೆಸ್ಟ್ರೆ. ಅನೂಪ್‌ ಸೀಳೀನ್‌ ಸಂಗೀತದ ಎರಡು ಹಾಡುಗಳು ಇಷ್ಟವಾಗುತ್ತವೆ. 

ಚಿತ್ರ: ಎಳೆಯರು ನಾವು ಗೆಳೆಯರು
ನಿರ್ಮಾಣ: ನಾಗರಾಜ್‌ ಗೋಪಾಲ್‌
ನಿರ್ದೇಶನ: ವಿಕ್ರಮ್‌ ಸೂರಿ
ತಾರಾಗಣ: ತುಷಾರ್‌, ಮಹೇಂದ್ರ, ಸೂರಜ್‌, ನಿಹಾಲ್‌, ತೇಜಸ್ವಿನಿ, ಪುಟ್ಟರಾಜು, ಅಚಿಂತ್ಯ, ಅಭಿಷೇಕ್‌, ಅಮೋಘ, ಮಹತಿ ಮತ್ತಿತರರು.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next