Advertisement

ನಾಟಕ ಅಕಾಡೆಮಿಯ ರಂಗಪ್ರಶಸ್ತಿ ಪ್ರಕಟ; ಸರೋಜಿನಿ ಶೆಟ್ಟಿ,ಚಂದ್ರಹಾಸ ಸುವರ್ಣ ಆಯ್ಕೆ

01:59 AM Mar 11, 2022 | Team Udayavani |

ಮಂಗಳೂರು: ತುಳು ರಂಗಭೂಮಿಯ ಖ್ಯಾತ ಕಲಾವಿದೆ ಮಂಗಳೂರಿನ ಶಕ್ತಿನಗರದ ಸರೋಜಿನಿ ಶೆಟ್ಟಿ ಅವರು ಕರ್ನಾಟಕ ನಾಟಕ ಅಕಾಡೆಮಿಯ 2021ನೇ ಸಾಲಿನ ವಾರ್ಷಿಕ ರಂಗಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Advertisement

ಶ್ರೀ ಗಣೇಶ ನಾಟಕ ಸಭಾ, ಕಲಾವಿದರು ಹಾಗೂ ಶ್ರೀ ಲಲಿತೆ ಕಲಾವಿದರು ಮಂಗಳೂರು ಸೇರಿದಂತೆ ಕೆಲವು ನಾಟಕ ತಂಡಗಳಲ್ಲಿ ಅವರು ಅಭಿನಯಿಸಿದ್ದರು. ವೀರರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ,

ಬೆಳವಡಿ ಮಲ್ಲಮ್ಮ, ಕಟೀಲ್ದಪ್ಪೆ ಉಳ್ಳಾಲ್ದಿ, ಬಂಗಾರ್‌ ಬಾಲೆ, ಬಯ್ಯ ಮಲ್ಲಿಗೆ, ಗಂಟೇತಾಂಡ್‌, ಈರ್‌ ದೂರ, ತೂ-ತುಡರ್‌, ಕೌನ್ಸಿಲರ್‌ ಕೊಗ್ಗಣ್ಣೆ ಸೇರಿದಂತೆ ಸುಮಾರು 2,500ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ತುಳುನಾಡ ಸಿರಿ, ಬಂಗಾರ್‌ ಪಟ್ಲೆರ್‌, ಸಂಗಮ ಸಾಕ್ಷಿ, ಬೊಳ್ಳಿದೋಟ, ದಾರೆದ ಸೀರೆ ಸೇರಿದಂತೆ ಸುಮಾರು 14ಕ್ಕೂ ಅಧಿಕ ತುಳು, 10ಕ್ಕೂ ಅಧಿಕ ಕನ್ನಡ ಸಿನೆಮಾದಲ್ಲಿ ಅಭಿನಯಿಸಿದ್ದಾರೆ. ಬರವುದ ಬಂಡಸಾಲೆ, ಇರುಳು ಸೇರಿದಂತೆ ಕೆಲವು ಕಿರುತೆರೆ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.

ಅಭಿನಯ ಅಭಿನೇತ್ರಿ, ರಂಗ ಶಾರದೆ ಬಿರುದು ಪಡೆದಿರುವ ಅವರಿಗೆ 1990ರಲ್ಲಿ “ಉದಯವಾಣಿ’ ವಿಂಶತಿ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿವೆ.

ಚಂದ್ರಹಾಸ ಸುವರ್ಣ
ಉಡುಪಿ: ಕಾರ್ಕಳ ತಾಲೂಕಿನ ಚಂದ್ರಹಾಸ ಸುವರ್ಣ ಅವರು “ಕಾರ್ಕಳ ಕಲಾರಂಗ’ ಸಂಸ್ಥೆಯ ಮೂಲಕ 41 ವರ್ಷದಿಂದ ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ, ತುಳು ನಾಟಕಗಳ ಪ್ರದರ್ಶನ, 5 ವರ್ಷಕ್ಕೊಮ್ಮೆ ತುಳು ನಾಟಕ ಸ್ಪರ್ಧೆ, 10 ದಿನಗಳ ನಾಟಕೋತ್ಸವ ಹೀಗೆ ಹಲವು ಕಾರ್ಯ ಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯ 2021ನೇ ಸಾಲಿನ ಯುವ ರಂಗ ಪ್ರಶಸ್ತಿ ಲಭಿಸಿದೆ.

Advertisement

ನಾಟಕ ತಂಡಗಳನ್ನು ಕಟ್ಟಿಕೊಂಡು ಹಲವು ಕಡೆಗಳಲ್ಲಿ ನಿರಂತರ ನಾಟಕ ಪ್ರದರ್ಶನ ಮಾಡುತ್ತಾ ಬಂದಿದ್ದೇನೆ. ಕಲಾವಿದ ಶೇಖರ ಭಂಡಾರಿ ಅವರ ಮೂಲಕ 1969ರಲ್ಲಿ ಈ ಕ್ಷೇತ್ರಕ್ಕೆ ಪ್ರವೇಶ ಮಾಡಿದ ನಾನು ಹಲವು ಯುವ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಿದ್ದಲ್ಲದೆ ಅಗತ್ಯ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತಿರುತ್ತೇನೆ. ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ಎಲ್ಲ ಕಾರ್ಯ ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂದು ಚಂದ್ರಹಾಸ ಸುವರ್ಣ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next