ಕಂದಗಲ್ಲ: ದಿನೇ ದಿನೇ ಬೇಸಿಗೆಯ ಬಿಸಿಲಿನ ಪ್ರಕರತೆ ಹೆಚ್ಚುತ್ತಿದೆ. ಸಕಾಲದಲ್ಲಿ ಮಳೆಯಿಲ್ಲದೆ ಕೆರೆ ಹಳ್ಳಗಳೆಲ್ಲ ಬತ್ತಿವೆ. ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮ ಸೇರಿದಂತೆ ಹಲವು ಗ್ರಾಮಗಳ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿಯುಂಟಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಸಮರ್ಪಕ ಮಳೆಯಿಲ್ಲದ್ದರಿಂದ ಹಳ್ಳ ಕೊಳ್ಳ ಕೆರೆಗಳಲ್ಲಿ ಅಂತರಜಲ ಮಟ್ಟ ಕುಸಿದಿದೆ. ಪ್ರಾಣಿ ಪಕ್ಷಿಗಳು ನೀರಿಗಾಗಿ ಪರದಾಡುತ್ತಿವೆ. ನೂರಾರು ವರ್ಷಗಳ ಹಿಂದಿನ ಕೆರೆಗಳು ಇದ್ದರೂ ನೀರಿಲ್ಲದೇ ಒಣಗಿವೆ. ಸರ್ಕಾರ ಕೆರೆಗಳಿಗೆ ನೀರು ತುಂಬಿಸಿ ರೈತರಿಗೆ ಅನುಕೂಲ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶವಾಗಿದೆ.
ಇಳಕಲ್ಲ ತಾಲೂಕಿನಲ್ಲಿ ಯಾವ ನದಿಗಳು ಹರಿದಿಲ್ಲ. ನದಿ ಪಾತ್ರದ ಹಳ್ಳಗಳೂ ಇಲ್ಲ. ನೀರಾವರಿ ಸೌಲಭ್ಯವಂತೂ ಇಲ್ಲವೇ ಇಲ್ಲ, ಸಂಪೂರ್ಣ ಬರ ಪ್ರದೇಶವಾಗಿದೆ. 800-1000 ಅಡಿ ಕೊಳವೆ ಬಾವಿ ಕೊರೆದರೂ ಒಂದು ಹನಿ ನೀರು ಬರುತ್ತಿಲ್ಲ. ಈ ತಾಲೂಕಿಗೆ ರಾಮತಾಳ ಕೊಪ್ಪಳ ಹಾಗೂ ನಂದವಾಡಗಿ, ಏತ ನೀರಾವರಿ ಮೂಲಕ ನೀರು ಒದಗಿಸಿದರೆ ಬರ ಪ್ರದೇಶವನ್ನು ಸದಾ ಹಚ್ಚು ಹಸಿರಾಗಿಸುವುದಾಗಿ ಕಳೆದ 15 ವರ್ಷಗಳಿಂದ ಜನಪ್ರತಿನಿಧಿಗಳು ಹೇಳುತ್ತಾ ಬಂದಿದ್ದಾರೆ. ಇಚ್ಚಾಶಕ್ತಿ ಕೊರತೆಯಿಂದ ನೀರಾವರಿ ಸೌಲಭ್ಯ ದೊರೆತಿಲ್ಲ.
ತಾಲೂಕಿನ ಬರ ಪರಿಹಾರವಾಗಬೇಕಾದರೆ ನೀರಿನ ಭವಣೆ ತಪ್ಪಿಸಲು ತಾಲೂಕಿನಲ್ಲಿರುವ ಬಲಕುಂದಿ, ಚಿಕ್ಕಕೊಡಗಲಿ ಹಿರೇಶಿಂಗನಗುತ್ತಿ ಕಂದಗಲ್ಲಿ ನಂದವಾಡಗಿ ಮರಟಗೇರಿ ಕೆರೆಗೆ ನೀರು ತುಂಬಿಸಿದರೆ ನೀರಿನ ಬರದ ಜೊತೆಗೆ ನೀರಾವರಿ ಸೌಲಭ್ಯ ದೊರೆಯುತ್ತದೆ. ಕೃಷಿಕರು ಬದುಕಲು ದಾರಿಯಾಗುತ್ತದೆ ಎಂಬುದು ಜನರ ಅಭಿಪ್ರಾಯವಾಗಿದೆ.
Advertisement
ಈ ಭಾಗದ ಕಂದಗಲ್ಲ, ಗೋನಾಳ ಎಸ್ ಕೆ, ಓತಗೇರಿ, ಗೋನಾಳ ಎಸ್‌ಟಿ, ನಂದವಾಡಗಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಟ್ಯಾಂಕರ್ ನೀರೇ ಗತಿಯಾಗಿದೆ. ಹೊಳೆ ಮೂಲಕ ನೀರು ಕೊಡುತ್ತಿದ್ದರೂ ಸಾಕಾಗುತ್ತಿಲ್ಲ. ನಂದವಾಡಗಿ ಜನರಿಗೆ ಕೆರೆಯ ನೀರು ಆಧಾರವಾಗಿದ್ದು, ಈಗ ಕೆರೆಯಲ್ಲಿ ಅಲ್ಪ ಪ್ರಮಾಣದ ನೀರು ಮಾತ್ರ ಉಳಿದಿದೆ. ಕೆರೆ ನೀರು ಖಾಲಿಯಾದರೆ ನಂದವಾಡಗಿ ಜನರಿಗೆ ನೀರಿನ ದೊಡ್ಡ ಪ್ರಮಾಣದಲ್ಲಿ ಉಂಟಾಗುತ್ತದೆ. ಗ್ರಾಮಗಳಲ್ಲಿ ಹಾಕಿರುವ ಬೋರವೆಲ್ಗಳಲ್ಲಿ ಸವಳು ನೀರು ಬರುತ್ತಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಕುಡಿಯುವ ನೀರು ಎಲ್ಲಿಂದ ತರಬೇಕು ಎಂಬುದು ಗ್ರಾಮಸ್ಥರ ಚಿಂತೆಯಾಗಿದೆ.
Related Articles
Advertisement
ಕೆರೆಗೆ ನೀರು ತುಂಬಿಸಿ: ಕೃಷ್ಣಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶಿತ ಯೋಜನೆಯಿಡಿ ಕೆರೆಗಳಿಗೆ ನೀರು ತುಂಬಿಸುವದರಿಂದ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಜನ ಜಾನುವಾರುಗಳಿಗೆ ಅನುಕೂಲವಾಗಲಿದೆ. ಬರಿದಾದ ಕೊಳವೆ ಬಾವಿಗಳಿಗೆ ನೀರು ಬಂದು ಕೃಷಿ ಚಟುವಟಿಕೆಗೆ ಜೀವ ಬಂದಗಾಗುತ್ತದೆ. ಬಡ ರೈತರ ಬದುಕಿಗೆ ಆಸರೆಯಾಗುವುದು. ಕೃಷಿ ಕಾರ್ಮಿಕರಿಗೆ ಕೂಲಿ ಕೆಲಸ ಸಿಕ್ಕು ಗೂಳೆ ಹೋಗುವುದು ತಪ್ಪುವುದು. ಸರಕಾರ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತರುತ್ತಿಲ್ಲ. ಬರಪೀಡಿತ ತಾಲೂಕಿನ ಜನರಿಗೆ ನೀರಿನ ಭವಣೆಗೆ ಕಂಗಾಲಾಗಿದ್ದಾರೆ.
ಪ್ರತಿಸಲ ಚುನಾವಣೆ ಬಂದಾಗ ಒಮ್ಮೆ ರಾಜಕೀಯ ಪಕ್ಷಗಳು ಭರವಸೆ ನೀಡುತ್ತಲೇ ಬರುತ್ತೇವೆ. ಆ ಭರವಸೆಗಳು ಈಡೇರಿಸಲ್ಲ. ರೈತರ ಜನಸಾಮಾನ್ಯರ ಪರವಾಗಿ ಜನಪ್ರತಿನಿಧಿಗಳು ಕೆಲಸ ಮಾಡುತ್ತಿಲ್ಲ. ಕೆರೆ ತುಂಬಿಸುವ ಮಹತ್ವದ ಯೋಜನೆ ಆದಷ್ಟು ಬೇಗ ಅನುಷ್ಠಾನ ವಾಗಬೇಕು ಎಂಬುದು ಈ ಭಾಗದ ರೈತರ ಒತ್ತಾಯವಾಗಿದೆ.
ಕಂದಗಲ್ಲ ಭಾಗದಲ್ಲಿ ನೀರಿನ ಸಮಸ್ಯೆ ಬೆಟ್ಟದಷ್ಟಿದೆ. ಊರಿನಲ್ಲಿ ಕೊಳವೆ ಭಾವಿಗಳಲ್ಲಿ ನೀರಿಲ್ಲ, ಟ್ಯಾಂಕರ ಮೂಲಕ ನೀರು ಕೊಡುತ್ತಾರೆ. ಅವು ಸಾಕಾಗುತ್ತಿಲ್ಲ. ಹೊಳೆ ನೀರು ಬೀಡುತ್ತಾರೆ ಒಬ್ಬರಿಗೆ ಸಿಕ್ಕರೆ ಮತ್ತೂಬ್ಬರಿಗೆ ಸಿಗುತ್ತಿಲ್ಲ. ಲಭ್ಯವಾದ ನೀರಿನಲ್ಲಿಯೇ ದನಕರುಗಳಿಗೆ ಕುಡಿಸಬೇಕು. ಕಳೆದ ಹಲವಾರ ದಿನಗಳಿಂದ ನೀರಿನ ತೀವ್ರ ಸಮಸ್ಯೆಯಾಗಿದೆ. ನೀರಿನ ಸಮಸ್ಯೆ ನಿವಾರಣೆಗೆ ಕೆರೆಗೆ ನೀರು ತುಂಬಿಸಿದರೆ ಶಾಶ್ವತ ನೀರಿನ ಭವಣೆ ತಪ್ಪುತ್ತದೆ ಎಂದು ಕಂದಗಲ್ಲ ಗ್ರಾಮಸ್ಥರ ಬಯಕೆಯಾಗಿದೆ.
ನಾಗಭೂಷಣ ಶಿಂಪಿ