ಸಂತೆಮರಹಳ್ಳಿ: ಈಗ ಎಲ್ಲೆಲ್ಲೂ ಬಿಸಿಲ ಬೇಗೆ ಹೆಚ್ಚಾಗುತ್ತಿದೆ. ಒಂದೆಡೆ ಅಂತರ್ಜಲ ಕುಸಿಯುತ್ತಿದ್ದರೆ ಮತ್ತೂಂದೆಡೆ ರೈತರ, ಮೀನುಗಾರರ ಜೀವನಾಡಿಯಾಗಿರುವ ಕೆರೆಗಳು ಬತ್ತಿ ಹೋಗುತ್ತಿವೆ. ಕಳೆದ ಬಾರಿ ಯಳಂದೂರು ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಬಹುತೇಕ ಕೆರೆಗಳು ತುಂಬಿ ತುಳುಕುತ್ತಿತ್ತು. ಆದರೆ ಈ ಬಾರಿ ಮಳೆ ಅಭಾವ ಕಂಡು ಬಂದಿದ್ದು ಬಹುತೇಕ ಕೆರೆಗಳು ಖಾಲಿಯಾಗಿವೆ. ಹಾಗಾಗಿ ಕೆರೆಯನ್ನೇ ನಂಬಿದ್ದ ಮೀನುಗಾರರ ಹಾಗೂ ರೈತರಲ್ಲಿ ಈಗ ಆತಂಕದ ಛಾಯೆ ಆವರಿಸಿದೆ.
ಕೆರೆಗಳ ತಾಲೂಕು: ರಾಜ್ಯದಲ್ಲೇ ಅತಿ ಚಿಕ್ಕ ತಾಲೂಕಾಗಿರುವ ಯಳಂದೂರು ತಾಲೂಕು ಕೆರೆಗಳಿಗೆ ಪ್ರಸಿದ್ಧಿ ಪಡೆದ ತಾಲೂಕಾಗಿದೆ. ಈ ತಾಲೂಕನ್ನು ಮೈಸೂರು ಅರಸರ ಕಾಲದಲ್ಲಿ ದಿವಾನರಾಗಿದ್ದ ಪೂರ್ಣಯ್ಯ ಅವರು ಜಹಗೀರಾಗಿ ಪಡೆದು ತಾಲೂಕಿನ 33 ಗ್ರಾಮಗಳಲ್ಲೂ ಕೆರೆಗಳನ್ನು ನಿರ್ಮಿಸಿದ್ದರು ಎಂಬುದು ಇತಿಹಾಸ. ಇಲ್ಲಿನ ಕೆರೆಗಳೂ ಕೂಡ ಸಾಕಷ್ಟು ದೊಡ್ಡದಾಗಿದೆ. ಅಗರ ಕೆರೆಯು ಸಾವಿರ ಎಕರೆಯಷ್ಟು ವಿಶಾಲವಾದ ದೊಡ್ಡ ಕೆರೆಯಾಗಿದೆ. ಇಲ್ಲಿನ ಬಹುತೇಕ ಎಲ್ಲಾ ಕೆರೆಗಳು ನೂರಾರು ಎಕರೆಯಷ್ಟು ವಿಸ್ತೀರ್ಣ ಪಡೆದುಕೊಂಡಿದೆ.
ಕೆರೆಗೆ ನೀರು ತುಂಬಿಸಿ: ಯಳಂದೂರು ತಾಲೂಕಿನಲ್ಲಿ ಮಳೆಗಾಲದಲ್ಲಿ ಮಾತ್ರ ಕೆರೆಗಳು ತುಂಬುತ್ತವೆ. ಆದರೆ ಇಷ್ಟೊಂದು ಕೆರೆಗಳಿದ್ದರೂ ತಾಲೂಕಿನ ಅಂಬಳೆ ಕೆರೆಯನ್ನು ಹೊರತು ಪಡಿಸಿ ಇನ್ನಾವ ಕೆರೆಗೂ ಕಾಲುವೆಯಿಂದ ನೀರು ತುಂಬಿಸುವ ಕೆಲಸವಾಗುತ್ತಿಲ್ಲ. ಹೀಗಾಗಿ ಎಲ್ಲಾ ಕೆರೆಗಳಿಗೂ ಕಾಲುವೆಯಿಂದ ನೀರು ತುಂಬಿಸಬೇಕು ಎಂಬುದು ಇಲ್ಲಿನ ರೈತರ, ಮೀನುಗಾರರ ಒತ್ತಾಯವಾಗಿದೆ.
ಕೇರಳ-ತಮಿಳುನಾಡಿನ ಗಡಿಗೂ ಮಾರಾಟ: ಈಗಾಗಲೇ ಗೌಡಹಳ್ಳಿ, ಗುಂಬಳ್ಳಿ, ಯರಗಂಬಳ್ಳಿ ಕೆರೆಯಲ್ಲಿ ಮೀನು ಕೃಷಿ ಮುಗಿದಿದೆ. ಇಲ್ಲಿಂದ ಕೇರಳ, ತಮಿಳುನಾಡು ರಾಜ್ಯದ ಗಡಿಗಳಿಗೂ ಮೀನು ಮಾರಾಟವಾಗುತ್ತದೆ. ಇದರೊಂದಿಗೆ ಇಲ್ಲೇ ಕೆಲವು ವ್ಯಾಪಾರಿಗಳು ನೇರವಾಗಿ ಮೀನು ಖರೀದಿ ಮಾಡಿ ಮೊಪೆಡ್‌ಗಳಲ್ಲಿ ಚಿಲ್ಲರೆ ಮಾರಾಟ ಮಾಡುತ್ತಾರೆ.
ಮೀನಿನ ಕೆರೆಗಳೆಂದೆ ಪ್ರಸಿದ್ಧ: ತಾಲೂಕಿನಲ್ಲಿ ಪ್ರತಿ ಗ್ರಾಮದಲ್ಲಿ ಒಂದೊಂದು ಕೆರೆ ಇದೆ. ಈ ಪೈಕಿ 18 ಕೆರೆಗಳು 1481 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿವೆ. ಇದರಲ್ಲಿ ಒಟ್ಟು 14.27 ಲಕ್ಷ ಮೀನು ಮರಿಗಳನ್ನು ಬಿಡಲಾಗಿತ್ತು. ಇದರಲ್ಲಿ ಕಾಮನ್ ಕಾರ್ಪ್ (ಸಾಮಾನ್ಯ ಗೆಂಡೆ) ಮೀನಿನ ಅತೀ ಹೆಚ್ಚು 6.55 ಲಕ್ಷ ಮೀನು ಮರಿಗಳನ್ನು ಬಿಡಲಾಗಿತ್ತು. ಇದರೊಂದಿಗೆ ಕಾಟ್ಲಾ, ರೋಹು, ಮೃಗಾ, ಹುಲ್ಲು ಗಂಡೆ ಮೀನು ಮರಿಗಳನ್ನು ಬಿಡಲಾಗಿತ್ತು. ತಾಲೂಕಿನ ಯರಿಯೂರು, ಅಗರ, ಗೌಡಹಳ್ಳಿ, ಯಳಂದೂರು, ಕೃಷ್ಣಯ್ಯನ ಕಟ್ಟೆಗಳು ಮೀನಿಗೆ ಪ್ರಮುಖ ಕೆರೆಗಳಾಗಿವೆ. ಈಗಾಗಲೇ ಬಹುತೇಕ ಕಡೆ ಮೀನು ಹಿಡಿದು ಮಾರಲಾಗಿದೆ.
ಕಾಮನ್ ಕಾರ್ಪ್ ಮೀನಿಗೆ ಬೇಡಿಕೆ ಹೆಚ್ಚು: ಈ ಬಾರಿ ಟೆಂಡರ್ ಮೂಲಕ ಇಲಾಖೆಗೆ 2.96 ಲಕ್ಷ ರೂ. ಹಣ ಸಂದಾಯವಾಗಿದೆ. ಇದರೊಂದಿಗೆ 6 ಸಾವಿರ ರೂ. ಠೇವಣಿ ಇರಿಸಿಕೊಳ್ಳಲಾಗಿದೆ. ಹುಲ್ಲು ಗೆಂಡೆ ಮೀನು 2.5 ಕಿ.ಲೋ. ತೂಕ ಬರುವ ಮೀನಾಗಿದೆ. ಆದರೆ ಕಾಮನ್ ಕಾರ್ಪ್ ಮೀನು ಮರಿಗೆ ಹೆಚ್ಚು ಬೇಡಿಕೆ ಇರುವ ಹಿನ್ನೆಲೆಯಲ್ಲಿ ಈ ಮೀನು ಮರಿಗಳನ್ನು ಹೆಚ್ಚಾಗಿ ಸರಬರಾಜು ಮಾಡಲಾಗಿದೆ. ಜೂನ್ ತಿಂಗಳಲ್ಲಿ ಮರಿಗಳನ್ನು ಬಿಡಲಾಗಿತ್ತು. ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಬಹುತೇಕ ಮೀನು ಹಿಡಿದು ಮಾರಲಾಗಿದೆ.
ಇಲಾಖೆ ವತಿಯಿಂದ ಪ್ರತ್ಯೇಕವಾಗಿ ಮೀನು ಸಾಕಾಣಿಕೆ ಮಾಡಲು ಪರಿಶಿಷ್ಟ ಜಾತಿಗೆ 80 ಸಾವಿರ ರೂ. ಸಹಾಯಧನವನ್ನು ನೀಡಲಾಗುತ್ತಿದೆ. ಇದರೊಂದಿಗೆ ಬಲೆ, ಫೈಬರ್ ಬೋಟ್, ಸೇರಿದಂತೆ ಇತರೆ ಸಾಮಾಗ್ರಿಗಳು ಇಲಾಖೆಗೆ ಬಂದಿದ್ದು ಆದಷ್ಟು ಬೇಗ ಇದರ ತರಣೆಯೂ ನಡೆಯಲಿದೆ.
-ಡಿ.ಬಿ.ನಟರಾಜು, ಮೀನುಗಾರಿಕೆ ಇಲಾಖೆಯ ಕ್ಷೇತ್ರ ಪಾಲಕ
* ಫೈರೋಜ್ ಖಾನ್