ಚಿಕ್ಕೋಡಿ: ಒಂದು ಕಡೆ ನೆತ್ತಿ ಸುಡುವ ಬಿಸಿಲಿನ ತಾಪ ಮತ್ತೂಂದು ಕಡೆ ನದಿ ಬತ್ತುವ ಜೊತೆಗೆ ಬಾವಿ, ಕೊಳವೆಬಾವಿ ಬತ್ತಿ ಹೋಗಿ ನೀರಿನ ಕೊರತೆಯ ಪರಿತಾಪ. ಇದರಿಂದ ಬರದ ನಾಡಾಗಿರುವ ಚಿಕ್ಕೋಡಿ ಉಪವಿಭಾಗದ ನದಿ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಇಂದು ನಾಳೆ ನದಿಗೆ ನೀರು ಬರುತ್ತದೆಂದು ನದಿ ತೀರದ ಗ್ರಾಮಗಳ ಜನರು ಚಾತಕ ಪಕ್ಷಿಗಳಂತೆ ಮಹಾರಾಷ್ಟ್ರದತ್ತ ಮುಖ ಮಾಡಿದ್ದಾರೆ.
ಉಪವಿಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿದ್ದರೂ ಜಿಲ್ಲಾ ಆಡಳಿತ ಮಾತ್ರ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳುತ್ತಿಲ್ಲ, ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಹರಿಸಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ ಎಂಬುದು ನದಿ ತೀರದ ಗ್ರಾಮಸ್ಥರ ಆಕ್ರೋಶ.
ಗ್ರಾಮೀಣ ಭಾಗದಲ್ಲಿ ಸಮಸ್ಯೆ ಉಲ್ಬಣ: ಇಂಥ ಬಿರು ಬೇಸಿಗೆಯಲ್ಲಿ ಕೃಷ್ಣಾ ನದಿ ಬತ್ತಿ ಹೋಗಿ ಗುಟುಕು ನೀರಿಗೆ ಪರದಾಡುವ ಪರಿಸ್ಥಿತಿ ನದಿ ತೀರದ ಗ್ರಾಮದ ಜನರಿಗಾದರೆ ಮಡ್ಡಿ ಭಾಗದ ಜನರ ಪರಿಸ್ಥಿತಿ ಇದಕ್ಕಿಂತಲೂ ಶೋಚನೀಯ. ನದಿಯಲ್ಲಿ ನೀರು ಇಲ್ಲದೆ ಹತ್ತಾರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಗಿತಗೊಂಡಿದ್ದರಿಂದ ಅಥಣಿ ಮತ್ತು ಕಾಗವಾಡ ತಾಲೂಕುಗಳ 78 ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ರಾಯಬಾಗ ತಾಲೂಕಿನಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಂಚಲಿ, ದಿಗ್ಗೇವಾಡಿ, ನಸಲಾಪುರ, ಬಾ.ಸವದತ್ತಿ, ಬೆಂಡವಾಡ, ಜಲಾಲಪುರ ಮುಂತಾದ ಗ್ರಾಮಗಳಲ್ಲಿ ಜನ ನೀರಿಗಾಗಿ ಪರದಾಡುತ್ತಿದ್ದಾರೆ.
ಚಿಕ್ಕೋಡಿ ತಾಲೂಕಿನ ನದಿ ತೀರದ ಅಂಕಲಿ, ಮಾಂಜರಿ, ಕಲ್ಲೋಳ, ಯಡೂರ, ಇಂಗಳಿ ಮತ್ತು ಕೆರೂರ, ಕಾಡಾಪೂರ, ಬಂಬಲವಾಡ, ಜೈನಾಪುರ, ಕರೋಶಿ ಸೇರಿದಂತೆ 30 ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಗಂಭೀರ ಪರಿಸ್ಥಿತಿ ಎದುರಾಗಿದೆ.
•ಡಾ. ಕೆ.ವಿ.ರಾಜೇಂದ್ರ ಪ್ರಭಾರಿ ಜಿಲ್ಲಾಧಿಕಾರಿ ಬೆಳಗಾವಿ.
Advertisement
ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಜನರ ಜೀವನಾಡಿಯಾದ ಕೃಷ್ಣಾ ನದಿ ಒಡಲು ಸಂಪೂರ್ಣ ಬತ್ತಿ ಹೋಗಿ ತಿಂಗಳು ಕಳೆದಿದೆ. ಹೀಗಾಗಿ ಚಿಕ್ಕೋಡಿ, ರಾಯಬಾಗ ಮತ್ತು ಅಥಣಿ ತಾಲೂಕಿನಲ್ಲಿ ಹರಿದು ಹೋಗಿರುವ ಕೃಷ್ಣಾ ನದಿ ಎರಡು ದಡದ ಗ್ರಾಮಗಳಲ್ಲಿ ಜನ ಜಾನುವಾರಗಳು ಕುಡಿಯುವ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ನದಿ ತೀರದ ಗ್ರಾಮಗಳಲ್ಲಿ ಒಂದು ಕೊಡ ನೀರಿಗಾಗಿ ನದಿಯಲ್ಲಿ ವರತಿ(ತಗ್ಗು) ತೆಗೆದು ನೀರು ತೆಗೆದುಕೊಂಡು ಹೋಗುವ ಪ್ರಸಂಗ ಬಂದೊದಗಿದೆ.
Related Articles
Advertisement
ಚಿಕ್ಕೋಡಿ ನಗರದಲ್ಲಿ ನೀರಿಗಾಗಿ ಪರದಾಟ: ಜಿಲ್ಲಾ ಕೇಂದ್ರಸ್ಥಾನ ಚಿಕ್ಕೋಡಿ ನಗರ ಕೂಡ ಕುಡಿಯುವ ನೀರಿನ ಸಮಸ್ಯೆಯಿಂದ ಹೊರತಾಗಿಲ್ಲ. ನದಿಯಲ್ಲಿ ನೀರು ಬತ್ತಿ ಹೋಗಿ ನಗರಕ್ಕೆ ನೀರು ಪೂರೈಕೆಯಾಗುತ್ತಿಲ್ಲ, ಹೀಗಾಗಿ ನಗರದಲ್ಲಿರುವ ಕೊಳವೆ ಬಾವಿ ಮೂಲಕ ನೀರು ಪೂರೈಕೆ ಮಾಡುತ್ತಿದ್ದರೂ ಸಹ ಅದು ಸಾಕಾಗುತ್ತಿಲ್ಲ, ಈಗಾಗಲೇ ನಗರದಲ್ಲಿ 24*7 ಕುಡಿಯುವ ನೀರಿನ ಯೋಜನೆ ಮೂಲಕ ನೀರು ಸರಬರಾಜು ಆಗುತ್ತಿತ್ತು. ಇದೀಗ ನಾಲ್ಕೈದು ದಿನಕ್ಕೊಮ್ಮೆ ನೀರು ಬರುವುದರಿಂದ ನಗರದ ಜನ ನೀರಿಗಾಗಿ ಪರದಾಡುತ್ತಿದ್ದಾರೆ.
ನಗರದಲ್ಲಿ 120 ಕೊಳವೆ ಬಾವಿ ನಿರ್ಮಿಸಲಾಗಿದೆ. ಎರಡು ಕೊಳವೆ ಬಾವಿ ದುರಸ್ತಿ ಮಾಡಲಾಗಿದೆ. ಸಾಧ್ಯವಿದ್ದಷ್ಟು ಜನರಿಗೆ ನೀರು ಕೊಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆಯೆಂದು ಪುರಸಭೆ ಮುಖ್ಯಾಧಿಕಾರಿ ಡಾ. ಸುಂದರ ರೂಗಿ ತಿಳಿಸಿದರು.
ಈಡೇರದ ಭರವಸೆ: ಲೋಕಸಭೆ ಚುನಾವಣೆ ಪೂರ್ವದಲ್ಲಿ ಬಿಜೆಪಿ-ಕಾಂಗ್ರೆಸ್ ಮುಖಂಡರು ಮಹಾರಾಷ್ಟ್ರದಿಂದ ನದಿಗೆ ನೀರು ಹರಿಸುವುದಾಗಿ ಜನರಿಗೆ ಭರವಸೆ ನೀಡಿದ್ದರು. ಆದರೆ ಚುನಾವಣೆ ಮುಗಿದರೂ ನದಿಗೆ ನೀರು ಬಂದಿಲ್ಲ, ಚುನಾವಣೆ ಮುಗಿದ ಬಳಿಕ ನೀರು ಬರುತ್ತದೆಂಬ ನದಿ ತೀರದ ಜನರ ನಂಬಿಕೆ ಹುಸಿಯಾಗಿದೆ. ಚಿಕ್ಕೋಡಿ ಉಪವಿಭಾಗದ ಮುಖಂಡರು ಪಕ್ಷಾತೀತವಾಗಿ ನದಿಗೆ ನೀರು ಬರಲು ಪ್ರಯತ್ನ ಮಾಡಬೇಕು ಇಲ್ಲದಿದ್ದರೆ ಜೀವಜಲಕ್ಕಾಗಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎನ್ನುವುದು ಜನರ ಅಳಲು.
ಚಿಕ್ಕೋಡಿ ಉಪವಿಭಾಗದಲ್ಲಿ ಕುಡಿಯುವ ನೀರಿಗಾಗಿ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಕುಡಿಯಲು ನೀರು ಬಿಡಿಸಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ವಿಡಿಯೋ ಸಂವಾದದಲ್ಲಿ ಮನವಿ ಮಾಡಲಾಗಿದೆ. ಇದರ ಜೊತೆಗೆ ಚಿಕ್ಕೋಡಿ ಉಪವಿಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಟ್ಯಾಂಕರ್ ಮೂಲಕ ನೀರು ಕೊಡಬೇಕು.•ಡಾ. ಕೆ.ವಿ.ರಾಜೇಂದ್ರ ಪ್ರಭಾರಿ ಜಿಲ್ಲಾಧಿಕಾರಿ ಬೆಳಗಾವಿ.